ಬೀದರ್ | ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ವಿರೋಧಿಸಿ ಪ್ರತಿಭಟನೆ
ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯವಾಗಿ ಬೈದು, ನಿಂದಿಸಿದನ್ನು ವಿರೋಧಿಸಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಮತ್ತು ಇತರ ಸಂಘಟನೆಗಳ ಮುಖಂಡರು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಘೋಷಣೆಗಳು ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಅವರು ಮಾತನಾಡಿ, ಇಂದಿರಾ ಗಾಂಧಿ ಅವರು ಆರೆಸ್ಸೆಸ್ ಅನ್ನು ಬ್ಯಾನ್ ಮಾಡಿದ್ದರು. ಆವಾಗ ಆರೆಸ್ಸೆಸ್ ನವರು ಮೂರು ಸಲ ಪತ್ರ ಬರೆದು ಕ್ಷಮೆ ಕೇಳುತ್ತಾರೆ. ಸಾವರ್ಕರ್ ಅವರು ಕೂಡ ಬ್ರಿಟಿಷರಲ್ಲಿ ಕ್ಷಮೆ ಕೇಳಿ ಬ್ರಿಟಿಷರಿಂದ ವೇತನ ಹಣ ಪಡೆದಿದ್ದರು. ಬಾಬರಿ ಮಸೀದಿ ಗಲಾಟೆಯಾದಾಗಲು ಅದನ್ನು ಬ್ಯಾನ್ ಮಾಡಲಾಗಿತ್ತು. ಆವಾಗಲೂ ಕೂಡ ಇವರು ಕ್ಷಮೆ ಕೇಳಿದ್ದರು. ಕ್ಷಮೆ ಕೇಳುವುದೇ ಈ ಆರೆಸ್ಸೆಸ್ ನವರ ಸಂಸ್ಕೃತಿಯಾಗಿದೆ ಎಂದು ಹೇಳಿದರು.
ಓಂಪ್ರಕಾಶ್ ರೊಟ್ಟೆ ಅವರು ಮಾತನಾಡಿ, ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಯುವಕರು ಇರುವ ದೇಶ ಭಾರತ ದೇಶವಾಗಿದೆ. ಆ ಯುವಕರು ಇವತ್ತು ಬೀದಿಯಲ್ಲಿದ್ದಾರೆ. ಇದಕ್ಕೆಲ್ಲ ಕಾರಣ 2014ರಲ್ಲಿ ಬಂದಂತಹ ಬಿಜೆಪಿ ಸರ್ಕಾರವಾಗಿದೆ. ಈ ಯುವಕರ ಬಗ್ಗೆ ಸಾಮಾಜಿಕ ಚಿಂತಕರು, ಬುದ್ದಿವಂತರು, ವಿಚಾರವಾದಿಗಳು, ಸಂಘಟನೆಗಳು ಹಾಗೂ ಪ್ರಗತಿಪರರು ವಿಚಾರ ಮಾಡದಿದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪುಂಡಲೀಕರಾವ್, ಮನ್ನಾನ್ ಸೇಠ್, ಅಮೃತರಾವ್ ಚಿಮಕೋಡೆ ಹಾಗೂ ಮಹೇಶ್ ಗೋರನಾಳಕರ್ ಸೇರಿದಂತೆ ಅನೇಕ ಮಹಿಳೆಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.