Bidar | ಮಹಾಪುರುಷರ ವೃತ್ತಗಳ ಬಳಿಯ ವೈನ್ಶಾಪ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
ಬೀದರ್: ನಗರದ ಮಹಾಪುರುಷರ ವೃತ್ತಗಳ ಸಮೀಪದಲ್ಲಿರುವ ವೈನ್ಶಾಪ್ಗಳು ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ತಕ್ಷಣ ಸ್ಥಳಾಂತರಿಸಬೇಕು ಮತ್ತು ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ, ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ರಾಜಕುಮಾರ್ ಗೂನಳ್ಳಿ ಅವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯು ಅಬಕಾರಿ ಇಲಾಖೆ ಕಚೇರಿವರೆಗೆ ಸಾಗಿತು. ಬಳಿಕ ಪ್ರತಿಭಟನಾಕಾರರು ಅಬಕಾರಿ ಉಪ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬೀದರ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಾಪುರುಷರ ವೃತ್ತಗಳು, ಸರ್ಕಾರಿ ಶಾಲಾ-ಕಾಲೇಜುಗಳು ಮತ್ತು ದೇವಸ್ಥಾನಗಳ ಸಮೀಪದಲ್ಲಿಯೇ ಮದ್ಯ ಮಾರಾಟ ನಡೆಯುತ್ತಿದೆ. ಪರವಾನಗಿ ಇಲ್ಲದೆ ಕಿರಾಣಿ ಅಂಗಡಿಗಳು, ಪಾನ್ಶಾಪ್ಗಳು, ಹೋಟೆಲ್ಗಳು ಹಾಗೂ ಧಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರದಿಂದ ಪರವಾನಗಿ ಪಡೆದ ಎಂಎಸ್ಐಎಲ್ ಮದ್ಯದಂಗಡಿಗಳಲ್ಲಿ ನಿಗದಿತ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ)ಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಕೆಲವು ವೈನ್ಶಾಪ್ಗಳ ಪಕ್ಕದಲ್ಲಿಯೇ ಪ್ರತ್ಯೇಕ ಕೊಠಡಿ ಅಥವಾ ಶೆಡ್ಗಳನ್ನು ನಿರ್ಮಿಸಿ, ಗ್ರಾಹಕರಿಗೆ ಕುಳಿತು ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇಂತಹ ಚಟುವಟಿಕೆಗಳ ವಿರುದ್ಧ ಅಬಕಾರಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿರುವ ಅಬಕಾರಿ ಇಲಾಖೆಯ ಡಿವೈಎಸ್ಪಿ ಹಾಗೂ ರೇಂಜ್ ಇನ್ಸ್ಪೆಕ್ಟರ್ಗಳ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರನ್ನು ಅಮಾನತುಗೊಳಿಸಲು ಅಬಕಾರಿ ಆಯುಕ್ತರಿಗೆ ಶಿಫಾರಸು ಮಾಡಬೇಕು. ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಸಿಬ್ಬಂದಿಯನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಹಾಪುರುಷರ ವೃತ್ತಗಳ ಸಮೀಪದಲ್ಲಿರುವ ವೈನ್ಶಾಪ್ಗಳು ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ಸ್ಥಳಾಂತರಿಸಬೇಕು. ಪರವಾನಗಿ ಇಲ್ಲದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎಂಆರ್ಪಿಗಿಂತ ಹೆಚ್ಚಿನ ದರ ವಸೂಲಿ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಧಾಬಾಗಳನ್ನು ಬಂದ್ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಒಂದು ವಾರದೊಳಗೆ ಮನವಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಬಕಾರಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ಆರ್. ನಿರಾಟೆ, ರಾಘವೇಂದ್ರ ಮೀನಕೇರಾ, ಸಂಜಯ್ ಭೋಸ್ಲೆ, ನಿತೀಶ್ ಉಪ್ಪೆ, ನರಸಿಂಗ್ ಸಾಮ್ರಾಟ್, ರಾಜಕುಮಾರ್ ಭಾವಿಕಟ್ಟಿ, ಜ್ಞಾನಿ ಕಟ್ಟಿಮನಿ, ಸ್ವರೂಪಕುಮಾರ್ ಶಿಂಧೆ, ಅನೀಲ್ ದಂಡೆ, ಪವನ್ ಮಿಠಾರೆ, ಅಂಬೇಡ್ಕರ್ ಬೌದ್ಧೆ, ಅಂಬೇಡ್ಕರ್ ಸಾಗರ್, ಜಗನ್ನಾಥ್ ಹೊನ್ನಾ, ಸತೀಶ್ ಶಿಂಧೆ, ದಿಲೀಪ್ ಹಸನ್ಮುಖಿ, ರಮೇಶ್ ಶಿಂಧೆ, ಘಾಳೆಪ್ಪಾ ಭೋಸ್ಲೆ, ರಾಜಕುಮಾರ್ ಕಾಂಬಳೆ, ರವಿ ಭೂಸಂಡೆ, ಲಕ್ಷ್ಮಣ್ ಚಕ್ರವರ್ತಿ, ವಿಶಾಲ್ ಹೊನ್ನಾ, ಗೌತಮ್ ಭೋಸ್ಲೆ, ಸಂತೋಷ್ ಬೌದ್ಧೆ, ನ್ಯೂಟನ್ ಕರಕರೆ, ಮಿಲಿಂದ್ ಜಿ, ಅಡೆಪ್ಪಾ ಗೌತಮಕರ್, ಶಿವಕುಮಾರ್ ಮುತ್ತಂಗೆ ಹಾಗೂ ರಾಜಕುಮಾರ್ ಕಾಳೆಕರ್ ಸೇರಿದಂತೆ ವಿವಿಧ ದಲಿತ ಹಾಗೂ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.