ಬೀದರ್ | ಪ್ರಜಾಪ್ರಭುತ್ವ, ಸಂವಿಧಾನದ ವಿರೋಧಿ ಆರೆಸ್ಸೆಸ್‌ನ್ನು ನಿಷೇಧಿಸಬೇಕು : ಅಂಕುಶ್ ಗೋಖಲೆ
ಬೀದರ್ : ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರೋಧಿಯಾಗಿದ್ದು, ಸರ್ವಾಧಿಕಾರದ ಜಪ ಮಾಡುವ ಆರೆಸ್ಸೆಸ್‌ನ್ನು ನಿಷೇಧಿಸಬೇಕು ಎಂದು ಜನರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಅಂಕುಶ್ ಗೋಖಲೆ ಅವರು ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅವಾಚ್ಯ ಪದ ಬಳಿಕೆ ಮಾಡಿ ಬೆದರಿಕೆ ಹಾಕಿದ್ದನ್ನು ಜನರ ಧ್ವನಿ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ. ಒಬ್ಬ ಸಚಿವರನ್ನು ಈ ರೀತಿ ಮಾಡಲಾಗುತ್ತಿದೆ. ಹಾಗಿದ್ದಲ್ಲಿ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಅವರು, ಅವಾಚ್ಯ ಪದ ಬಳಕೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಅವರಿಗೆ ಹಲವಾರು ಕರೆಗಳು ಬಂದಿದ್ದು, ಆ ಎಲ್ಲರ ವಿರುದ್ಧ ಕೂಡ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಆರೆಸ್ಸೆಸ್‌ನ್ನು ನಿಷೇಧಿಸದೆ, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಿದೆ. ನಂತರದಲ್ಲಿ ಆರೆಸ್ಸೆಸ್ ನವರು ಅನುಮತಿ ಪಡೆದುಕೊಂಡು ಆರಾಮವಾಗಿ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡುತ್ತಾರೆ. ಇದು ನೋಡಿದರೆ ಕಾಂಗ್ರೆಸ್‌ನಲ್ಲೂ ಸಹ ಆರೆಸ್ಸೆಸ್ ಕೂಸುಗಳಿವೆ ಎಂಬುದು ಸಾಬಿತಾಗುತ್ತದೆ. ಹಾಗಾಗಿ ದೇಶಕ್ಕೆ ಮಾರಕವಾಗಿರುವ ಆರೆಸ್ಸೆಸ್ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಆರೆಸ್ಸೆಸ್ ಸಂಘಟನೆಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಗಳ ಮಕ್ಕಳನ್ನು ಬ್ರೇನ್ ವಾಷ್ ಮಾಡಿ ಅವರ ತಲೆಯಲ್ಲಿ ಹಿಂದುತ್ವವನ್ನು ಬಿತ್ತಲಾಗುತ್ತದೆ. ಭಾರತ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧವಾದದ್ದನ್ನು ಅವರಿಗೆ ಕಲಿಸಲಾಗುತ್ತದೆ. ಒಂದು ಭಾಷೆ, ಒಂದು ರಾಷ್ಟ್ರ, ಒಂದು ಸಿದ್ಧಾಂತ, ಒಬ್ಬ ನಾಯಕ ಎನ್ನುವ ಸರ್ವಾಧಿಕಾರತ್ವದ ತತ್ವಗಳು ಮುಗ್ದ ಮಕ್ಕಳ ತಲೆಯಲ್ಲಿ ತುಂಬಲಾಗುತ್ತಿದೆ. ಗೋರಕ್ಷಣೆ ಹೆಸರಲ್ಲಿ ಹಿಂದು ಮುಸ್ಲಿಂರ ನಡುವೆ ಬೆಂಕಿ ಹಚ್ಚುತ್ತಿದೆ. ಮುಸ್ಲಿಂರನ್ನು ಕೊಲೆ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಇದು ತುಂಬಾ ಅಪಾಯಕಾರಿಯಾಗಿದ್ದು, ಆರೆಸ್ಸೆಸ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದರು.
1940 ರಲ್ಲಿ ಗೋಳವಾಲ್ಕರ್ ಎಂಬ ವ್ಯಕ್ತಿಯು ಒಬ್ಬ ನಾಯಕ, ಒಂದು ಸಿದ್ದಾಂತ, ಒಂದು ಭಾಷೆ ಹಾಗೂ ಒಂದು ಧರ್ಮ ಎಂದು ಹೇಳುವ ಮೂಲಕ ಮತಿಯ ಹಿಂಸೆಗೆ ಪ್ರಚೋದನೆ ನೀಡಿದ್ದರು. ವಿ.ಡಿ ಸಾವರ್ಕರ್ ವೇದದ ನಂತರ ಎಲ್ಲಕ್ಕಿಂತ ಪೂಜ್ಯನಿಯವಾದದ್ದು ಮನಸ್ಮೃತಿ ಎಂದು ತಮ್ಮ ಉಮೆನ್ ಇನ್ ಮನುಸ್ಮೃತಿ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆರೆಸ್ಸೆಸ್ ಒಂದು ನೋಂದಣಿ ಇಲ್ಲದ ಸಂಘಟನೆಯಾಗಿದ್ದು, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿರುವ ಸಂಘಟನೆಯಾಗಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಹಾಗೂ ಬಹುತ್ವಕ್ಕೆ ತದ್ವಿರುದ್ದವಾದ ಆರೆಸ್ಸೆಸ್ ಸಂಘಟನೆಯನ್ನು ಕೂಡಲೇ ಸಂಪೂರ್ಣ ನಿಷೇಧ ಮಾಡಬೇಕು. ಜೊತೆಗೆ ಸುಪ್ರೀಂ ಕೋರ್ಟ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿ, ಸಚಿವ ಪ್ರಿಯಂಕ್ ಖರ್ಗೆ ಅವರಿಗೂ ಬೆದರಿಕೆ ಹಾಕಿದ ಆರೋಪಿ ಹಾಗೂ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ವಕೀಲ ಮಿಶ್ರಾಗೂ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ್ ಶಿಂಧೆ, ಮುಖಂಡರಾದ ತಿಪ್ಪಣ್ಣ ವಾಲಿ, ಎಮ್.ಡಿ ಝಮಿರಖಾನ್, ರವಿ ಕೋಟರೆ, ಮಾರುತಿ ಕಾಂಬಳೆ, ದತ್ತಾತ್ರಿ ನಾಗವಂಶಿ ಹಾಗೂ ಬಾಬಾ ಪಟೇಲ್ ಸೇರಿದಂತೆ ಇತರರು ಇದ್ದರು.