Bidar | ಕಾಂಗ್ರೆಸ್‌ ಪಕ್ಷದ ಬಲವರ್ಧನೆಗಾಗಿ ಸಂಘಟನಾ ಸೃಜನ್ ಅಭಿಯಾನ : ರಾಜೇಶ್ ಲಿಲೋಥಿಯಾ

ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ; ತಳಮಟ್ಟದಿಂದ ಪಕ್ಷ ಪುನರ್‌ರಚನೆಗೆ ಎಐಸಿಸಿ ಸಮಾಲೋಚನೆ

Update: 2026-07-28 18:25 IST

ಬೀದರ್ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಸಂಘಟನಾ ಬಲವರ್ಧನೆಗಾಗಿ ‘ಸಂಘಟನಾ ಸೃಜನ್’ ಅಭಿಯಾನ ಆರಂಭಿಸಿದ್ದು, ಇದರಡಿ ಬೀದರ್ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೊಸ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಎಐಸಿಸಿ ವೀಕ್ಷಕ ಹಾಗೂ ಮಾಜಿ ಶಾಸಕ ರಾಜೇಶ್ ಲಿಲೋಥಿಯಾ ತಿಳಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪುನರ್‌ರಚನೆ ಹಾಗೂ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಿಲ್ಲೆಯ ಹಿರಿಯ ನಾಯಕರು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‌ಎಸ್‌ಯುಐ, ಸೇವಾದಳ, ವಿವಿಧ ಪ್ರಕೋಷ್ಟಗಳು ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಸಮಗ್ರ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಈ ಉದ್ದೇಶಕ್ಕಾಗಿ ವಿಶೇಷ ಅರ್ಜಿ ಸಿದ್ಧಪಡಿಸಲಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅದನ್ನು ಭರ್ತಿ ಮಾಡಿ ಎಐಸಿಸಿ ಘಟಕಕ್ಕೆ ಸಲ್ಲಿಸಬಹುದು ಎಂದು ತಿಳಿಸಿದರು.

ಅಭಿಯಾನದ ಮುಖ್ಯ ಉದ್ದೇಶ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ, ಪಾರದರ್ಶಕ, ಪ್ರಜಾಸತ್ತಾತ್ಮಕ ಹಾಗೂ ಜನಕೇಂದ್ರಿತವಾಗಿಸುವುದಾಗಿದೆ. ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಮಾತ್ರ ಸೀಮಿತವಾಗದೆ, ಜಿಲ್ಲಾ, ಬ್ಲಾಕ್, ಮಂಡಲ ಹಾಗೂ ಗ್ರಾಮ ಮಟ್ಟದ ಸಂಘಟನೆಗಳನ್ನು ಪುನರ್‌ರಚಿಸಿ ಪರಿಣಾಮಕಾರಿ ಸಂಘಟನಾ ವ್ಯವಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸಮಾಲೋಚನಾ ಸಭೆಗಳಲ್ಲಿ ವ್ಯಕ್ತವಾಗುವ ಕಾರ್ಯಕರ್ತರ ಅಭಿಪ್ರಾಯ, ಸಲಹೆ ಹಾಗೂ ಶಿಫಾರಸುಗಳನ್ನು ಸಂಗ್ರಹಿಸಿ ಸಮಗ್ರ ವರದಿಯನ್ನು ಎಐಸಿಸಿಗೆ ಸಲ್ಲಿಸಲಾಗುವುದು. ಸಂಘಟನೆಯ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಆಂತರಿಕ ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಯುವಕರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಪಕ್ಷದ ಸಮರ್ಪಿತ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ವಿವಿಧ ಸಮಾಲೋಚನೆಗಳ ಬಳಿಕ ಆರು ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ರಾಜಸ್ಥಾನ ಹಾಗೂ ಪಂಜಾಬ್ ರಾಜ್ಯಗಳ ಸಂಘಟನಾ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕರ್ನಾಟಕದ ಪ್ರಕ್ರಿಯೆ ಮಾತ್ರ ಬಾಕಿಯಿದೆ. ಮುಂದಿನ 10 ದಿನಗಳ ಕಾಲ ರಾಜ್ಯದಲ್ಲೇ ಉಳಿದು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು. ಆಗಸ್ಟ್ 15ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ರಾಜೇಶ್ ಲಿಲೋಥಿಯಾ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಹಸನಸಾಬ್ ಧೋತಿಹಾಳ, ಜ್ಯೋತಿ ಮರಗೋಳ್, ರಮೇಶ್ ಮರಗೋಳ್, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕೆ. ಪುಂಡಲಿಕರಾವ್, ಅರವಿಂದಕುಮಾರ್ ಅರಳಿ, ಸಹಕಾರ ವಿಭಾಗದ ಅಧ್ಯಕ್ಷ ಧನರಾಜ್ ತಾಳಂಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್.ಎ ಸಮಿ, ದತ್ತಾತ್ರಿ ಮುಲಗೆ ಹಾಗೂ ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News