ಬೀದರ್ ಉತ್ತರ ಕ್ಷೇತ್ರದಲ್ಲಿ 21 ಸಾವಿರ ನಕಲಿ ಮತದಾರರಿದ್ದಾರೆ: ಸೂರ್ಯಕಾಂತ್ ನಾಗಮಾರಪಳ್ಳಿ ಆರೋಪ

Update: 2026-07-28 18:27 IST

ಬೀದರ್: ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲೇ ಸುಮಾರು 21 ಸಾವಿರ ನಕಲಿ ಮತದಾರರಿದ್ದಾರೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ್ ನಾಗಮಾರಪಳ್ಳಿ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದರೂ ನಕಲಿ ಮತದಾರರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವ ಕೆಲವರ ಹೆಸರುಗಳು ಬೀದರ್ ಉತ್ತರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿಯೂ ಇವೆ. ಹಲವು ವರ್ಷಗಳ ಹಿಂದೆ ಮೃತಪಟ್ಟವರ ಹೆಸರೂ ಇನ್ನೂ ಪಟ್ಟಿಯಲ್ಲಿ ಉಳಿದಿದ್ದು, ಕೆಲವೆಡೆ ಪುರುಷರ ಛಾಯಾಚಿತ್ರಕ್ಕೆ ಮಹಿಳೆಯರ ಹೆಸರು ದಾಖಲಿಸಿರುವಂತಹ ಗಂಭೀರ ಲೋಪಗಳು ಕಂಡುಬಂದಿವೆ ಎಂದು ಆರೋಪಿಸಿದರು.

ತಾವು ಸಂಗ್ರಹಿಸಿದ ದಾಖಲೆಗಳ ಪ್ರಕಾರ ಬೀದರ್ ಉತ್ತರ ಕ್ಷೇತ್ರದಲ್ಲೇ ಸುಮಾರು 21 ಸಾವಿರ ನಕಲಿ ಮತದಾರರಿದ್ದು, ಒಬ್ಬರೇ ವ್ಯಕ್ತಿಯ ಹೆಸರು ವಿವಿಧ ಮತದಾರರ ಪಟ್ಟಿಗಳಲ್ಲಿ ದಾಖಲಾಗಿರುವ ಪ್ರಕರಣಗಳೂ ಇವೆ. ಇದರಿಂದ ಚುನಾವಣಾ ಫಲಿತಾಂಶಗಳ ಮೇಲೂ ಪರಿಣಾಮ ಬೀರುತ್ತಿದ್ದು, ತಾವು ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲಲು ನಕಲಿ ಮತದಾನವೂ ಒಂದು ಕಾರಣ ಎಂದು ಅವರು ದೂರಿದರು.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ವಿಷಯವನ್ನು ಪ್ರಸ್ತಾಪಿಸುವುದಾಗಿ ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಕಲಿ ಮತದಾರರನ್ನು ಸಂಪೂರ್ಣವಾಗಿ ತಡೆಗಟ್ಟಲು ಆಧಾರ್ ಮ್ಯಾಪಿಂಗ್ ಹಾಗೂ ಬೆರಳಚ್ಚು ದೃಢೀಕರಣವನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಆಧಾರ್ ಮತ್ತು ಬೆರಳಚ್ಚು ಆಧಾರಿತ ಪರಿಶೀಲನೆ ಜಾರಿಯಾದರೆ ನಕಲಿ ಮತದಾರರ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್‌ ಪಾಟೀಲ್‌ ಸೋಲಪುರ್‌, ರಾಜಕುಮಾರ್‌, ಬಾಲಾಜಿ ಚೌವ್ಹಾಣ್‌, ಲಲಿತಾ ಕರಂಜಿ, ದಾವೂದ್‌, ಅಶೋಕ್‌, ಬೊಮ್ಮಗೊಂಡ್‌ ಚಿಟ್ಟಾ ಹಾಗೂ ಗೋಪಾಲ್‌ ಚಿಟ್ಟಾವಾಡಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News