ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ವಕೀಲರ ಸಂಘ ಒತ್ತಾಯ

ಕೃಷಿ ಸಾಲ ಮನ್ನಾ, ಬೆಳೆಹಾನಿಗೆ ಪರಿಹಾರ, ಕುಡಿಯುವ ನೀರು-ಮೇವಿನ ವ್ಯವಸ್ಥೆಗೆ ಸರ್ಕಾರಕ್ಕೆ ಮನವಿ

Update: 2026-07-28 18:31 IST

ಭಾಲ್ಕಿ, ಜು. 28: ಮುಂಗಾರು ಮಳೆಯ ಕೊರತೆಯಿಂದ ಬೀದರ್ ಜಿಲ್ಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಭಾಲ್ಕಿ ತಾಲೂಕು ವಕೀಲರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಮಂಗಳವಾರ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಭಾಲ್ಕಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದ್ದು, ಕೃಷಿ ಜಮೀನುಗಳು ಒಣಗುತ್ತಿವೆ. ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ಅನ್ನದಾತರು ಸಂಕಷ್ಟದಲ್ಲಿದ್ದು, ಸರ್ಕಾರ ತಕ್ಷಣ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಲಾಗಿದೆ.

ಸಮಾಜದ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಸ್ಪಂದಿಸುವುದು ವಕೀಲರ ಸಂಘದ ಆದ್ಯ ಕರ್ತವ್ಯವಾಗಿದ್ದು, ರೈತರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಗತ್ಯವಿದ್ದರೆ ಕೋರ್ಟ್ ಕಲಾಪಗಳ ಜತೆಗೆ ರೈತರ ಹಕ್ಕಿಗಾಗಿ ಹೋರಾಟಕ್ಕೂ ಸಿದ್ಧವಿರುವುದಾಗಿ ಸಂಘ ಎಚ್ಚರಿಸಿದೆ.

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದರ ಜೊತೆಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಬೆಳೆಹಾನಿಗೆ ವೈಜ್ಞಾನಿಕ ಮಾನದಂಡದಂತೆ ಎಕರೆಗೆ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹೇಶ್ ರಾಚೋಟೆ, ಉಪಾಧ್ಯಕ್ಷ ಮಕರಂದ್ ಮಾನಕಾರಿ, ಪ್ರಧಾನ ಕಾರ್ಯದರ್ಶಿ ವಾಗೇಶ್ ಪಾಟೀಲ್, ಜಂಟಿ ಕಾರ್ಯದರ್ಶಿ ನೀಲಕಂಠ್ ಬಿರಾದಾರ್, ಹಿರಿಯ ನ್ಯಾಯವಾದಿ ರಾಜಶೇಖರ್ ಅಷ್ಟೂರೆ, ಪ್ರಮುಖರಾದ ನಾಗನಾಥ್ ಸ್ವಾಮಿ, ಬಾಬುರಾವ್ ಗಾಮ, ಓಂಪ್ರಕಾಶ್ ಪಾಟೀಲ್, ಅಶೋಕ್ ಪಾಟೀಲ್, ಅನಿಮೇಶ್ ಆನಂದವಡೆ, ರಾಹುಲ್ ಸಾವಳೆ, ಸದಾಶಿವ್ ತುಕದೆ, ಸುಬೋಧ್ ತಿವಾರಿ, ಆರತಿ ತಿವಾರಿ, ಶಂತನು ಕುಲಕರ್ಣಿ, ರಾಮಕೃಷ್ಣ ಬಿರಾದಾರ್, ಶತ್ರುಘ್ನ ನೆಲ್ವಡೆ, ದೀಪಕ್ ಮಾಶೆಟ್ಟೆ, ದಯಾನಂದ್ ಪವಾರ್, ಮಹಾಂತೇಶ್ ಪಾಟೀಲ್, ಗುರುನಾಥ್ ಚಲವಾ, ಸತೀಶ್ ಬೋರಳೆ, ನರಹರಿ, ಧನಲಕ್ಮಿ ಬಳತೆ, ನವಾಜ್, ಸಂಜುಕುಮಾರ್ ಸಲಂಕೆ, ಶಿವಕುಮಾರ್ ಕೆರೂರ್, ಭಾರತ್ ಪವಾರ್ ಹಾಗೂ ಶೈಫೋದ್ದಿನ್‌ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News