ಬೀದರ್ | ವಿಬಿ-ಜಿ ರಾಮ್ ಜಿ ಮಸೂದೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ : ಸಪ್ನದೀಪಾ ಎಚ್ಚರಿಕೆ
ಬೀದರ್ : ಕೇಂದ್ರ ಸರಕಾರ ವಿಬಿ-ಜಿ ರಾಮ್ ಜಿ ಮಸೂದೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಅಧ್ಯಕ್ಷೆ ಸಪ್ನದೀಪಾ ಅವರು ಎಚ್ಚರಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಕಸಿತ ಭಾರತ-ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) 2025 ಮಸೂದೆಯನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಖಂಡಿಸುತ್ತದೆ. ಕಾರ್ಮಿಕರು ಮತ್ತು ಯಾವುದೇ ಕಾರ್ಮಿಕ ಗುಂಪುಗಳ ಜೊತೆ ಸಮಾಲೋಚನೆ ನಡೆಸದೆ ಈ ಮಸೂದೆಯನ್ನು ರಚಿಸಿದೆ. ಈ ಮಸೂದೆ MGNREGA-2025 ಅನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಉದ್ಯೋಗ ಖಾತ್ರಿಯನ್ನು ಕೇಂದ್ರ ಸರಕಾರದ ಬಿಗಿ ಮುಷ್ಠಿಯಿಂದ ಕೇಂದ್ರಿಕೃತ, ವಿವೇಚನಾಯುಕ್ತ ಬಜೆಟ್ ಅನ್ನು ನಿಯಂತ್ರಿಸುವ ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆ. ಹಾಗಾಗಿ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದರು.
ಈ ಮಸೂದೆಯ ಪ್ರಕಾರ ಪ್ರತಿ ವರ್ಷ ರಾಜ್ಯವಾರು ಬಜೆಟ್ ಹಂಚಿಕೆಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ. ಹಾಗೆಯೇ ಯಾವುದೇ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರಕಾರಗಳೇ ಭರಿಸಬೇಕು. ಪ್ರತಿ ರಾಜ್ಯದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರುತ್ತದೆ. ಈಗಿರುವ ಬಜಟ್‌ನಲ್ಲಿ ಕೇಂದ್ರ ಸರಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್‌ನ್ನು ಕೇಂದ್ರ ಸರಕಾರವೆ ಮಿತಿಗೊಳಿಸುತ್ತ ಹಣವನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಇನ್ನಷ್ಟು ಹಣದ ಹೊರೆ ಹಾಕುವ ಮೂಲಕ ಬಿಜೆಪಿ ಸರಕಾರ 125 ದಿನಗಳ ಉದ್ಯೋಗದ ಹುಸಿ ಭರವಸೆ ನೀಡುತ್ತಿದೆ ಎಂದು ತಿಳಿಸಿದರು.
ಕೆಲಸದಿಂದ ಡಿಜಿಟಲ್ ಹಾಜರಾತಿ NMMS ಮತ್ತು ಆಧಾರ್ ಕಾರ್ಡ್ ಆಧಾರಿತ ಪಾವತಿಗಳು ABPS, ಬಯೋಮೇಟ್ರಿಕ್ ದೃಢೀಕರಣದ ಮೂಲಕ ತಾಂತ್ರಿಕ ನಿಯಂತ್ರಣದಂತಹ ತಂತ್ರಜ್ಞಾನ ಉಪಕ್ರಮಗಳಿಂದ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರನ್ನು ಹೊರಗಿಡಲಾಗುತ್ತಿದೆ. ವಿಕೇಂದ್ರಿಕರಣ ಮೇಲ್ವಿಚಾರಣೆ ಮತ್ತು ಪ್ರತಿ ವರ್ಷ MGNREGA ಅಡಿಯಲ್ಲಿ ನಡೆಸಲಾಗುವ ಗ್ರಾಮ ಸಭೆಯ ನೇತೃತ್ವದ ಸಾಮಾಜಿಕ ಲೆಕ್ಕ ಪರಿಶೋಧನೆಯ ಪರಿಶೀಲನೆಗಳ ಮೇಲೆ ವಾಸ್ತವವಾಗಿ ಕಾರ್ಯನಿರ್ವಹಿಸುವ ಮೂಲಕ ಭ್ರಷ್ಟಾಚಾರ ನಿಯಂತ್ರಿಸಬಹುದು. ಆದರೆ, ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯತ್ ಗಳನ್ನು ದುರ್ಬಲಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ಈ ಮಸೂದೆಯನ್ನು ಧಿಕ್ಕರಿಸಿ ಈ ವರ್ಷಾಂತ್ಯದಲ್ಲಿ ಮಸೂದೆ ಕೈ ಬಿಡದಿದ್ದರೆ ಬೀದಿ ಬೀದಿಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಕೂಸ್ ಸಂಘಟನೆಯ ಪದಾಧಿಕಾರಿಗಳಾದ ಭೀಮ್, ರೇಖಾ, ಗೀತಾ, ಸುರೇಖಾ ಹಾಗೂ ರಾಜಕುಮಾರ್ ಸೇರಿದಂತೆ ಇತರರು ಇದ್ದರು.