ಬೀದರ್ | ಅ.30 ರ ಒಳಗಾಗಿ ರೈತರಿಗೆ ಪರಿಹಾರ ನೀಡದಿದ್ದರೆ ಹೋರಾಟ ಅನಿವಾರ್ಯ : ರೈತ ಸಂಘದಿಂದ ಎಚ್ಚರಿಕೆ
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ
ಬೀದರ್ : ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ದೀಪಾವಳಿ ಹಬ್ಬಕ್ಕಿಂತ ಮೊದಲು ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಈಗ ಅ.30 ರ ಒಳಗಾಗಿ ಪರಿಹಾರ ಹಣ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಅ.30 ರ ಒಳಗಾಗಿ ರೈತರಿಗೆ ಪರಿಹಾರ ನೀಡದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಕಳೆದ 3 ತಿಂಗಳಿಂದ ಮಳೆ ಹೆಚ್ಚಾಗಿ ಎಲ್ಲಾ ಬೆಳೆಗಳು ಸಂಪೂರ್ಣ ನಾಶವಾಗಿವೆ. ಆದರೆ ಸರ್ಕಾರದಿಂದ ರೈತರಿಗೆ ಇಲ್ಲಿವರೆಗೆ ಯಾವುದೇ ಪರಿಹಾರ ನೀಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ದೀಪಾವಳಿ ಹಬ್ಬಕ್ಕಿಂತ ಮೊದಲು ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡುವುದಾಗಿ ಅಶ್ವಾಸನೆ ನೀಡಿದ್ದರು. ಈಗ ಅ. 30ರ ಒಳಗಾಗಿ ಪರಿಹಾರ ಹಣ ನೀಡುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಸದ್ಯ ರೈತರು ಬಹಳ ಸಂಕಷ್ಟದಲ್ಲಿದ್ದು, ರಬ್ಬಿ ಬೆಳೆ ಬಿತ್ತಲು ಬೀಜ ಮತ್ತು ಗೊಬ್ಬರ ತರಲು ರೈತರ ಕೈಯಲ್ಲಿ ಹಣ ಇಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಪರಿಹಾರ ಹಣ ನೀಡುವುದಾಗಿ ಬರೀ ಅಶ್ವಾಸನೆ ನೀಡುತ್ತಿರುವುದು ಸರಿ ಇಲ್ಲ ಎಂದು ತಿಳಿಸಲಾಗಿದೆ.
ಅ.30 ರ ಒಳಗಾಗಿ ಪರಿಹಾರ ಹಣ ರೈತರ ಖಾತೆಗೆ ಜಮೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ರೈತರು ರಸ್ತೆ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಮುಂದಿನ ಆಗು ಹೋಗುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಲಾಗಿದೆ.