ಬೀದರ್ | ಕನ್ನಡ ಭಾಷೆ ಮಾತನಾಡಿದರೆ ಕೀಳರಿಮೆಯಿಂದ ಕಾಣುವ ಮನೋಭಾವನೆ ಹೋಗಬೇಕು : ಡಾ.ಮಹಮ್ಮದ್ ಫಾರೂಕ್
ಬೀದರ್ : ಕರುನಾಡಿನ ಸ್ವಾಭಿಮಾನದ ಸಂಕೇತವಾದ ಕನ್ನಡ ಭಾಷೆಯನ್ನು ಬಳಸಿದರೆ, ಮಾತನಾಡಿದರೆ ಕೀಳರಿಮೆಯಿಂದ ಕಾಣುವ ಮನೋಭಾವನೆ ಹೋಗಬೇಕು. ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಯ ಮಾತಿನಲ್ಲಿ ಹಾಗೂ ಬರವಣಿಗೆಯಲ್ಲಿ ಕನ್ನಡ ಭಾಷೆ ಹೆಚ್ಚಾಗಿ ಉಪಯೋಗಿಸಿದಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಪ್ರಭಾರಿ ಡೀನ್ ಡಾ.ಮಹಮ್ಮದ್ ಫಾರೂಕ್ ಅವರು ತಿಳಿಸಿದರು.
ಇಂದು ಬೀದರ್ ನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ತೋಟಗಾರಿಕಾ ಮಹಾವಿದ್ಯಾಲಯದ ವತಿಯಿಂದ ಆಚರಿಸಲಾದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಹಿಸಿ ಅವರು ಮಾತನಾಡಿದರು.
ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ಒಂದಾಗಿ ಶ್ರಮಿಸಬೇಕು. ಕನ್ನಡ ಬರಿ ಭಾಷೆಯಲ್ಲ, ಅದೊಂದು ಸಂಸ್ಕೃತಿ, ಭಾವನಾತ್ಮಕ ಸಂಬಂಧವಾಗಿದೆ. ಕನ್ನಡ ರಾಜ್ಯೋತ್ಸವ ಇದು ನಮ್ಮೆಲ್ಲ ಕನ್ನಡಿಗರ ಹೆಮ್ಮೆಯ ಹಬ್ಬವಾಗಿದೆ ಎಂದರು.
ಸಹ ಪ್ರಾಧ್ಯಾಪಕ ಡಾ.ವಿಜಯ್ ಮಹಾಂತೇಶ್ ಅವರು ಮಾತನಾಡಿ, ಪ್ರಪಂಚದಲ್ಲಿಯೇ ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಮಹನಿಯರನ್ನು ಸ್ಮರಿಸುತ್ತಾ, ಸರಕಾರವು ಇತ್ತೀಚೆಗೆ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಸಲು ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಡಾ.ವಿ.ಪಿ ಸಿಂಹ, ಡಾ.ರಾಜಕುಮಾರ್ ಎಮ್., ಡಾ.ಎಸ್.ಎಮ್.ಪ್ರಸನ್ನ, ಡಾ.ರಮೇಶ್ ನಾಯಕ್, ಲಗಮಣ್ಣ ಬಿ.ಬಿ., ಉದಯಕುಮಾರ್ ಡಿ., ವಿದ್ಯಾರ್ಥಿನಿಯರಾದ ಸೃಷ್ಟಿ, ಭಾಗ್ಯಶ್ರೀ ಹಾಗೂ ಭವಾನಿ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.