×
Ad

ಬೀದರ್ | ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಎತ್ತಿಹಿಡಿಯುವುದು ರಾಜ್ಯದ ಜನತೆಯ ಆದ್ಯತೆಯಾಗಲಿ : ಡಾ.ಗಿರೀಶ್ ಬದೋಲೆ

Update: 2025-11-01 15:14 IST

ಬೀದರ್ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿಹಿಡಿಯುವುದು ರಾಜ್ಯದ ಜನತೆಯ ಆದ್ಯತೆಯಾಗಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ತಿಳಿಸಿದರು.

ಇಂದು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಕನ್ನಡ ಎನ್ನುವುದು ಬರಿ ಭಾಷೆಯಲ್ಲ. ಅದು ಜಗತ್ತಿನ ಶ್ರೀಮಂತ ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ. ಕನ್ನಡವು ಜಗತ್ತಿನ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದು ಮಾತ್ರವಲ್ಲ, ಜಗತ್ತಿನ ಸುಂದರ ಭಾಷೆಗಳಲ್ಲಿಯೂ ಒಂದಾಗಿದೆ. ಭಾರತೀಯ ಭಾಷೆಗಳಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡದ್ದು. ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ 'ಕನ್ನಡವು ಹರಬರೆಯುವ, ಹರಿ ತಿರಿಯುವ ಭಾಷೆ' . ಕನ್ನಡ ನೆಲದ ವಚನಕಾರರು ಮತ್ತು ದಾಸರು ಕನ್ನಡವು ಹರಿಹರರ ನೆಚ್ಚಿನ ಭಾಷೆ ಎಂಬುದನ್ನು ನಿರೂಪಿಸಿದ್ದಾರೆ. ಇಂತಹ ಸತ್ವ ಶ್ರೀಮಂತ, ತತ್ತ್ವಶ್ರೀಮಂತ ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆ, ಅಭಿಮಾನವಿರಬೇಕು ಎಂದರು.

ರಾಜ್ಯೋತ್ಸವದ ಈ ಶುಭದಿನದಂದು ಬೀದರ್ ಜಿಲ್ಲಾ ಪಂಚಾಯತಿಯನ್ನು ಜನಸ್ನೇಹಿ ಜಿಲ್ಲಾ ಪಂಚಾಯತಿಯನ್ನಾಗಿಸೋಣ. ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ಕರ್ತವ್ಯ, ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಗಳಿಂದ ಒದಗಿಸುವ ಮೂಲಕ ಜಿಲ್ಲಾ ಪಂಚಾಯತಿಯನ್ನು ಜನಪರ, ಜನಮುಖಿ ಜಿಲ್ಲಾ ಪಂಚಾಯತಿಯನ್ನಾಗಿಸೋಣ ಎಂದು ಜಿಲ್ಲಾ ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ್ ದುಬೆ, ಯೋಜನಾ ನಿರ್ದೇಶಕ ಸೂರ್ಯಕಾಂತ್ ಬಿರಾದರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಾಜಿ ಡೋಣಿ, ರಮೇಶ್ ನಾಥೆ, ಬೀರೇಂದ್ರ ಸಿಂಗ್, ಜಯಪ್ರಕಾಶ್ ಚೌವ್ಹಾಣ, ಎಪಿಒ ಸುಭಾಸ್, ರಾಜಶೇಖರ್ ಹಾಗೂ ಪ್ರವೀಣಸ್ವಾಮಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News