ಬೀದರ್ | ʼವಾರ್ತಾಭಾರತಿʼ ವರದಿ ಫಲಶ್ರುತಿ : ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ನೆಲಸಮ
ಬೀದರ್ : ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದ ಸರಕಾರಿ ಶಾಲೆಯ ಬಗ್ಗೆ ವಾರ್ತಾ ಭಾರತಿ ವಿಶೇಷ ವರದಿ ಮಾಡಿದ ಕೆಲ ದಿನಗಳ ನಂತರ ಫಲಶೃತಿ ಸಿಕ್ಕಿದ್ದು, ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡವು ನೆಲಸಮಗೊಳಿಸುವ ಕೆಲಸ ಪ್ರಾರಂಭಿಸಿರುವುದು ವರದಿಯಾಗಿದೆ.
ಜು. 20 ರಂದು ’ಶಿಥಿಲಾವಸ್ಥೆಯಲ್ಲಿ ಹುಪಳಾ ಗ್ರಾಮದ ಸರಕಾರಿ ಶಾಲೆ ಪ್ರಾಣ ಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು’ ಎಂಬ ತಲೆ ಬರಹ ನೀಡಿ ವಿಶೇಷ ವರದಿ ಮಾಡಲಾಗಿತ್ತು. ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿದ ಶಾಲಾ ಕಟ್ಟಡ ಹಾಗೂ ಅಲ್ಲಿನ ಶೌಚಾಲಯದ ದುಃಸ್ಥಿತಿ ಬಗ್ಗೆ ಸವಿಸ್ತಾರವಾಗಿ ವರದಿಯಲ್ಲಿ ತಿಳಿಸಲಾಗಿತ್ತು. ಗ್ರಾಮಸ್ಥರು ಕೂಡ ಆ ಕಟ್ಟಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಈ ಶಾಲೆಯ ಕಟ್ಟಡ ನೆಲಸಮಗೊಳಿಸಲು ಪಿ ಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರು ಅನುಮತಿ ನೀಡಿದ ತಕ್ಷಣವೇ ಶಾಲಾ ಕಟ್ಟಡ ನೆಲಸಮಗೊಳಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದರು. ಇದೀಗ ಶಾಲಾ ಕಟ್ಟಡವು ನೆಲಸಮಗೊಳಿಸುವ ಕೆಲಸ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಸಂತೋಷವಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.