ಬೀದರ್ |ನೆರೆ ಹೊರೆಯವರ ಸುಖ, ದುಃಖದಲ್ಲಿ ಭಾಗಿಯಾಗಬೇಕು : ಅಮೀನುಲ್ ಹಸನ್
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನೆರೆ ಹೊರೆಯವರ ಹಕ್ಕುಗಳು ಅಭಿಯಾನ ಕಾರ್ಯಕ್ರಮ
ಬೀದರ್ : ವೈಯಕ್ತಿಕ ಜೀವನ ಸಾಗಿಸುತ್ತಿರುವ ಮನುಷ್ಯನನ್ನು ಸಾಮಾಜಿಕ ಜೀವನದತ್ತ ಕರೆ ತರುವ ಅಗತ್ಯವಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಖಿಲ ಭಾರತ ಉಪಾಧ್ಯಕ್ಷ ಎಸ್. ಅಮೀನುಲ್ ಹಸನ್ ಅವರು ಹೇಳಿದರು.
ನಗರದ ಜಾಮಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನಡೆದ ನೆರೆ ಹೊರೆಯವರ ಹಕ್ಕುಗಳ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್. ಅಮೀನುಲ್ ಹಸನ್, ಹಿಂದೆ ನೆರೆ ಹೊರೆಯವರ ಮಧ್ಯ ಒಂದೇ ಗೋಡೆ ಇರುತ್ತಿತ್ತು. ಅದರ ಕಿಟಕಿಯಿಂದಲೇ ವಸ್ತುಗಳ ವಿನಿಮಯ, ಯೋಗಕ್ಷೇಮ ವಿಚಾರಣೆ ಆಗುತ್ತಿತ್ತು. ನಗರದಲ್ಲಷ್ಟೇ ಕಾಣುತ್ತಿದ್ದ ಅಪರಿಚಿತ ಸಂಬಂಧಗಳು ಈಗ ಹಳ್ಳಿಗಳಲ್ಲೂ ಕಾಣ ಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಸಣ್ಣ ಸಣ್ಣ ವಿಷಯಗಳಿಗಾಗಿ ಪರಸ್ಪರರ ಮಧ್ಯ ಜಗಳಗಳು ಆಗುತ್ತಿವೆ. ನೆರೆ ಹೊರೆಯವರಿಂದ ದೂರ ಇರುವುದರಿಂದ ಮನುಷ್ಯ ನೈತಿಕ, ಆಧ್ಯಾತ್ಮಿಕ ಅಧಃಪತನ ಹಾಗೂ ಮನೋರೋಗಕ್ಕೆ ತುತ್ತಾಗುತ್ತಾನೆ. ನೆರೆ ಹೊರೆಯವರಿಗೆ ತೊಂದರೆ ಕೊಡಬಾರದು. ಅವರೊಂದಿಗೆ ಸದ್ವರ್ತನೆ ತೋರಬೇಕು. ಅವರಿಗೆ ಸಹಾಯ ಮಾಡಬೇಕು. ಅವರ ತಪ್ಪನ್ನು ಕ್ಷಮಿಸಬೇಕು. ಸುಖ, ದುಃಖದಲ್ಲಿ ಭಾಗಿಯಾಗಬೇಕು. ಅವರಿಗೆ ಕಾಣಿಕೆಗಳನ್ನು ನೀಡಬೇಕು. ಇದರಿಂದ ಪರಸ್ಪರರ ಮಧ್ಯೆ ಪ್ರೀತಿ ಹೆಚ್ಚುತ್ತದೆ ಎಂದು ಎಸ್.ಅಮೀನುಲ್ ಹಸನ್ ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಅಝಮ್ ಮಾತನಾಡಿ, ಮಾದರಿ ನೆರೆ ಹೊರೆ, ಮಾದರಿ ಸಮಾಜ ಘೋಷ ವಾಕ್ಯದೊಂದಿಗೆ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಹಮ್ಮದ್ ತಾಹಾ ಕಲೀಮುಲ್ಲಾಹ ಕುರ್‌ಆನ್ ಪಠಣ ಮಾಡಿದರು. ಮುಹಮ್ಮದ್ ಆಸಿಫುದ್ದೀನ್, ಡಾ. ಇರ್ಷಾದ್ ನವೀದ್ ಸಲಾವುದ್ದೀನ್, ಎಹತೆಶಾಮ್, ಮುಹಮ್ಮದ್ ನಿಝಾಮುದ್ದೀನ್ ಉಪಸ್ಥಿತರಿದ್ದರು. ಮುಹಮ್ಮದ್ ಆರಿಫುದ್ದೀನ್ ಅವರು ನಿರೂಪಿಸಿದರು.