Bidar | ಕಾಡು ಹಂದಿ ದಾಳಿ : ಇಬ್ಬರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
ಬೀದರ್: ಕಾಡುಹಂದಿ ದಾಳಿಗೆ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಆನಂದವಾಡಿ ಗ್ರಾಮದ ರೈತರಾದ ಚನ್ನಬಸಪ್ಪ ಭೂರೆ ಹಾಗೂ ಸಂಪತಾ ಹೆಡೆ ಕಾಡುಹಂದಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ. ಚನ್ನಬಸಪ್ಪ ಭೂರೆ ಅವರ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ತಲೆ, ಕಾಲು ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಸಂಪತಾ ಹೆಡೆ ಅವರ ಮೇಲೂ ಕಾಡುಹಂದಿ ದಾಳಿ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬೀದರ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಿಂದ ಆನಂದವಾಡಿ ಗ್ರಾಮದ ಜನರಲ್ಲಿ ಆತಂಕ ಮೂಡಿದ್ದು, ಕಾಡುಹಂದಿ ದಾಳಿಯ ಭೀತಿ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಕಾಡುಹಂದಿಯನ್ನು ಸೆರೆಹಿಡಿಯಬೇಕು ಹಾಗೂ ಗಾಯಗೊಂಡಿರುವ ಇಬ್ಬರು ರೈತರ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.