ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಎರಡೂ ಜಿಲ್ಲೆಗಳ ಬರ ಪರಿಸ್ಥಿತಿಯನ್ನು ಮರುಪರಿಶೀಲಿಸಿ ಅರ್ಹ ಪ್ರದೇಶಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ, ಕಲ್ಯಾಣ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿವೆ.

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಸಲ್ಲಿಸಿದ ಮನವಿಯಲ್ಲಿ ಮಳೆಯ ಕೊರತೆ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಅಭಾವ ಹಾಗೂ ಬೆಳೆ ನಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಸುಮಾರು ಶೇ.70ರಷ್ಟು ಮಳೆಯ ಕೊರತೆಯಿಂದ ಬಿತ್ತನೆ ಸಾಧ್ಯವಾಗದೆ, ಬಿತ್ತನೆ ಮಾಡಿದ ಬೆಳೆಗಳೂ ಒಣಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ.

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ಬರ ಪರಿಸ್ಥಿತಿಯನ್ನು ಮರುಮೌಲ್ಯಮಾಪನ ಮಾಡಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡುವುದರ ಜತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. ಫಸಲ್‌ ಭೀಮಾ ಯೋಜನೆಯ ಕ್ರಾಪ್‌ ಕಟಿಂಗ್‌ ಸಮೀಕ್ಷೆಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಬೇಡಿಕೆಗಳನ್ನು ಈಡೇರಿಸದಿದ್ದರೆ ರೈತರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಮಿತಿ ಮುಖಂಡರು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ, ಕಲ್ಯಾಣ ಕರ್ನಾಟಕದ ಅಧ್ಯಕ್ಷ ಅಶೋಕ್ ಮಾನುರೆ, ವಿಲಾಸ್ ಪಾಟೀಲ್, ರೇವಣಶಿದ್ದಪ್ಪಾ ಜಲಾದೆ, ಜಂಟಿ ಕಾರ್ಯದರ್ಶಿ ರಮೇಶ್ ನೇಳಗೆ ಹಾಗೂ ಗುರುಪುತ್ರ ಬಿರಾದಾರ್ ಸೇರಿದಂತೆ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor