ಭಾಲ್ಕಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ
ಭಾಲ್ಕಿ: ಬರಪೀಡಿತ ಪಟ್ಟಿಗೆ ಭಾಲ್ಕಿ ತಾಲೂಕನ್ನು ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕದ 101 ತಾಲೂಕುಗಳು ಈಗಾಗಲೇ ಬರಪೀಡಿತ ಪಟ್ಟಿಯಲ್ಲಿವೆ. ಆದರೆ ತೀವ್ರ ಬರಗಾಲ ಅನುಭವಿಸುತ್ತಿರುವ ಭಾಲ್ಕಿ ತಾಲೂಕು ಮಾತ್ರ ಪಟ್ಟಿಯಿಂದ ಹೊರಗುಳಿದಿದೆ. ಆದ್ದರಿಂದ ಭಾಲ್ಕಿ ತಾಲೂಕಿನ ಸಂಪೂರ್ಣ ಪ್ರದೇಶವನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಲಾಯಿತು.
ತಾಲೂಕಿನ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆರಂಭದಲ್ಲಿ ಸ್ವಲ್ಪ ಮಳೆ ಬಿದ್ದ ತಕ್ಷಣ ಬಿತ್ತನೆ ಮಾಡಿದ ರೈತರ ಬೆಳೆಗಳು ಮೊಳಕೆಯೊಡೆಯದೆ ನಷ್ಟವಾಗಿವೆ. ಜಿಲ್ಲೆಯ ನಾಲ್ಕು ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿವೆ. ಆದರೆ ಭಾಲ್ಕಿ ಸೇರಿದಂತೆ ಔರಾದ್, ಹುಲಸೂರು ಹಾಗೂ ಕಮಲನಗರ ತಾಲೂಕುಗಳು ಮಾತ್ರ ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಬೀದರ್ ಜಿಲ್ಲೆ ಸಂಪೂರ್ಣ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಭಾಲ್ಕಿ ತಾಲೂಕನ್ನು ಕೂಡಲೇ ಬರಪೀಡಿತ ಪಟ್ಟಿಗೆ ಸೇರಿಸಿ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈಗಾಗಲೇ ರೈತರು ಹಾಗೂ ಕೃಷಿ ಕಾರ್ಮಿಕರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ರೈತರು ವಿವಿಧ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ಗಳ ಮೂಲಕ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ರೈತರ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ. ದರ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿದ್ರಾಮಪ್ಪ ಅಣದೂರೆ, ಬಾಬುರಾವ್ ಹುಣಸನಾಳೆ, ಶೇಷರಾವ್ ಕಣಜಿ, ಮಾಹಾನಂದಾ ದೇಶಮುಖ, ಅನೀಲಕುಮಾರ್ ರಂಜೇರಿ, ಆರ್.ಪಿ.ಬಿರಾದಾರ್, ವಿನಿತಾ ಮಾಶೆಟ್ಟೆ, ಭೌರಾವ್ ಪಾಟೀಲ್, ವಾಗೇಶ್ ಪಾಟೀಲ್, ಸುಧಾಕರ್ ಬೋಬಡೆ, ಸೋಮನಾಥ್ ಟೋಕರೆ, ಸಂಜೀವಕುಮಾರ್ ಹುಣಜೆ, ಶರದ್ ಪಾಟೀಲ್ ಹಾಗೂ ರಂಗರಾವ್ ಬಿರಾದಾರ್ ಕಾಕನಾಳ್ ಸೇರಿದಂತೆ ಹಲವರು ಇದ್ದರು.