×
Ad

Bidar | ಬಾಕಿ ಮಾಸಾಶನ ಬಿಡುಗಡೆಗೆ ಯುವ ಕ್ರಾಂತಿ ಸಂಘಟನೆ ಆಗ್ರಹ

ಆದಾಯ ಮಿತಿ 1.20 ಲಕ್ಷ ರೂ. ಗೆ ಹೆಚ್ಚಿಸಲು ಒತ್ತಾಯಿಸಿ ಮನವಿ

Update: 2026-07-10 18:21 IST

ಬೀದರ್, ಜು.11: ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಸೇರಿದಂತೆ ಎಲ್ಲಾ ಸಾಮಾಜಿಕ ಭದ್ರತಾ ಮಾಸಾಶನಗಳ ಕಳೆದ ಮೂರರಿಂದ ನಾಲ್ಕು ತಿಂಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಮಾಸಾಶನ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು 1.20 ರೂ. ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಯುವ ಕ್ರಾಂತಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಬೀದರ್, ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್, ಔರಾದ್ ಹಾಗೂ ಕಮಲನಗರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಕಳೆದ ಮೂರರಿಂದ ನಾಲ್ಕು ತಿಂಗಳಿಂದ ಮಾಸಾಶನ ಜಮೆಯಾಗದ ಕಾರಣ ಸಾವಿರಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಆರೋಪಿಸಲಾಗಿದೆ.

ಮಾಸಾಶನವನ್ನೇ ಅವಲಂಬಿಸಿ ಬದುಕುತ್ತಿರುವ ವಿಧವೆಯರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಇತರ ಫಲಾನುಭವಿಗಳು ಆಹಾರ, ಔಷಧೋಪಚಾರ ಮತ್ತು ದೈನಂದಿನ ಖರ್ಚುಗಳನ್ನು ಭರಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಸಕಾಲಕ್ಕೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಫಲಾನುಭವಿಗಳ ಅಸಮಾಧಾನ ಹೆಚ್ಚುತ್ತಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಆದಾಯ ಮಿತಿಯಿಂದ ಅನೇಕ ಅರ್ಹ ಬಡ ಕುಟುಂಬಗಳು ಮಾಸಾಶನದಿಂದ ವಂಚಿತರಾಗುತ್ತಿದ್ದು, ವಾರ್ಷಿಕ ಆದಾಯ ಮಿತಿಯನ್ನು 1.20 ರೂ. ಗೆ ಹೆಚ್ಚಿಸಿ ಹೆಚ್ಚಿನ ಅರ್ಹರಿಗೆ ಯೋಜನೆಯ ಸೌಲಭ್ಯ ಕಲ್ಪಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಕಳೆದ 3-4 ತಿಂಗಳ ಬಾಕಿ ಮಾಸಾಶನವನ್ನು ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿಯಮಿತವಾಗಿ ಮಾಸಾಶನ ಬಿಡುಗಡೆ ಮಾಡಬೇಕು. ಆದಾಯ ಮಿತಿ ಅಥವಾ ತಾಂತ್ರಿಕ ಕಾರಣಗಳಿಂದ ವಂಚಿತರಾಗಿರುವ ಅರ್ಹರ ಅರ್ಜಿಗಳನ್ನು ಮರುಪರಿಶೀಲಿಸಿ ಮಂಜೂರು ಮಾಡಬೇಕು. ಮಾಸಾಶನ ವಿತರಣೆಯಲ್ಲಿ ಉಂಟಾಗಿರುವ ವಿಳಂಬಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ, ಉಪಾಧ್ಯಕ್ಷ ಸಚಿನ್ ಮೊಳಕೆರೆ, ಪಪ್ಪುರಾಜ್ ಚತುರೆ, ರಾಜಕುಮಾರ್ ಹಳ್ಳಿಖೇಡಕರ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಕೇಶ್ ಚೌದರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News