ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಹೊರಟಿದೆ: ಸಚಿವ ಈಶ್ವರ್ ಖಂಡ್ರೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರ ಪದಗ್ರಹಣ ಕಾರ್ಯಕ್ರಮ
ಬೀದರ್ : ಬಿಜೆಪಿಯವರು ಎಲ್ಲಾ ಸ್ವಾಯತ್ತ ಸಂಸ್ಥೆಗಳು ದುರುಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವ ನಾಶಗೊಳಿಸಲು ಹೊರಟಿದ್ದಾರೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿ ಹಾಯ್ದರು.
ನಗರದ ವಿ ಆರ್ ಸಿ ಫಂಕ್ಷನ್ ಹಾಲ್ ನಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ 'ಅಬ್ದುಲ್ ಮನ್ನಾನ್ ಸೇಠ್' ಅವರ ಪದಗ್ರಹಣ ಕಾರ್ಯಕ್ರಮ ನಡೆಯಿತು. ನಿಕಟಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ ಅವರು ಕಾಂಗ್ರೆಸ್ ಧ್ವಜ ನೀಡುವ ಮೂಲಕ ಅಬ್ದುಲ್ ಮನ್ನಾನ್ ಸೇಠ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ವರಿಷ್ಠರು ಮನ್ನಾನ್ ಸೇಠ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿ ನೀಡಿದ್ದಾರೆ. ಅವರಿಗೆ ಆ ಜವಾಬ್ದಾರಿ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.
ನಮ್ಮ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಮುಂದೆ ಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುತ್ತೇವೆ. ಆರು ವಿಧಾನಸಭೆಗಳಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ ಅವರು, ಅಬ್ದುಲ್ ಮನ್ನಾನ್ ಸೇಠ್ ಅವರಿಗೆ ಅಭಿನಂದಿಸಿ, ಶುಭ ಹಾರೈಸಿದರು.
ಬಿಜೆಪಿಯವರು ಮತ್ತೆ ವೋಟ್ ಚೋರಿ ಆರಂಭ ಮಾಡಿದ್ದಾರೆ. ಇದು ಅಪರಾಧವಾಗಿದೆ. ಬಿಜೆಪಿಯವರು ಹೇಗಾದರೂ ಮಾಡಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಭಾಲ್ಕಿಯಲ್ಲಿಯೂ ಕೂಡ ಆಧಾರವಿಲ್ಲದೆ ಫಾರ್ಮ್-7 ಭರ್ತಿ ಮಾಡುವ ಮೂಲಕ ಮತದಾರರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೋ ಅವರನ್ನು ಜೈಲಿಗಟ್ಟುವ ಸಲುವಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ ಮತದವರನ್ನು ಜೊತೆಗೆ ತೆಗೆದುಕೊಂಡು ಹೋಗುತ್ತದೆ. ಆದರೆ ಬಿಜೆಪಿ ಪಕ್ಷ ಆಪರೇಷನ್ ಕಮಲ ಮಾಡುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಆದರೂ ಕೂಡ ಅವರು ಏನು ಅಭಿವೃದ್ಧಿ ಕೆಲಸ ಮಾಡಲಿಲ್ಲ. ಬಿಜೆಪಿಯವರು ಕೇಂದ್ರದಲ್ಲಿ ಬಂದ ನಂತರ ಡಿಸೆಲ್, ಪೆಟ್ರೋಲ್ ಹಾಗೂ ಸಕ್ಕರೆ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಗೆಯೇ ರೈತರನ್ನು ಕಡೆಗಣಿಸಿ, ಬರೀ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದರು.
ಸಂಸದ ಸಾಗರ್ ಖಂಡ್ರೆ ಅವರು ಮಾತನಾಡಿ, ಅಬ್ದುಲ್ ಮನ್ನಾ ಸೇಠ್ ಅವರು ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾದಾಗ 'ಈಶ್ವರ್ ಖಂಡ್ರೆಗೆ ಹಿನ್ನಡೆ, ರಾಜಶೇಖರ್ ಪಾಟೀಲ್ ಗೆ ಮುನ್ನಡೆ' ಎಂದು ಕೆಲವು ಪತ್ರಿಕೆಗಳು ವರದಿ ಮಾಡಿದ್ದವು. ಆದರೆ, ಈಶ್ವರ್ ಖಂಡ್ರೆ ಮತ್ತು ರಾಜಶೇಖರ್ ಪಾಟೀಲ್ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಕಾಂಗ್ರೆಸ್ ಪಕ್ಷದವರಾಗಿದ್ದೇವೆ. ಮುಂದಿನ ಚುನಾವಣೆಗಳೇ ನಮಗೆ ಗುರಿಯಾಗಿವೆ ಎಂದರು.
ಅಧಿಕಾರ ಸ್ವೀಕರಿಸಿದ ಅಬ್ದುಲ್ ಮನ್ನಾನ ಸೇಠ್ ಅವರು ಮಾತನಾಡಿ, ನಮ್ಮ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅದು ಗಾಂಧಿ ಜಯಂತಿ ದಿನದಂದು ಅಧಿಕಾರ ಸ್ವೀಕರಿಸಿದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಮಾತನಾಡಿ, ಈಶ್ವರ್ ಖಂಡ್ರೆ ಅವರಿಗೆ ಹಿನ್ನಡೆ ಮತ್ತು ರಾಜಶೇಖರ್ ಪಾಟೀಲ್ ಅವರಿಗೆ ಮುನ್ನಡೆ ಎನ್ನುವುದು ಮಾಧ್ಯಮದವರ ಸೃಷ್ಟಿಯಾಗಿದೆ. ನಮ್ಮಲ್ಲಿ ಶಕ್ತಿ ಪ್ರದರ್ಶನ ಇರಬಾರದು. ನಮ್ಮದು ಬಿಜೆಪಿಯವರ ವಿರುದ್ಧ ಶಕ್ತಿ ಪ್ರದರ್ಶನ ಇರಬೇಕಾಗಿದೆ ಎಂದು ಹೇಳಿದರು.
ಶಾಸಕ ರಹೀಮ್ ಖಾನ್ ಅವರು ಮಾತನಾಡಿ, ಚುನಾವಣೆ ಬಂದಾಗ ಬಿಜೆಪಿಗರು ಕೋಮುವಾದ, ಗಲಭೆ ಪ್ರಾರಂಭ ಮಾಡುತ್ತಾರೆ. ಇದರಿಂದಾಗಿ ನಮ್ಮ ಪಕ್ಷದ ಕಾರ್ಯಕರ್ತರು ಹುಷಾರಾಗಿರಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ್ ಅರಳಿ, ಕೆ. ಪುಂಡಲೀಕರಾವ್, ನಿಕಟಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಬಾಬು ಹೊನ್ನಾನಾಯಕ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಸಹಕಾರ ವಿಭಾಗದ ರಾಜ್ಯಧ್ಯಕ್ಷ ಧನರಾಜ್ ತಾಳಂಪಳ್ಳಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.