ಬೀದರ್: ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳಲ್ಲಿ ಕಲಾಸಕ್ತಿ ಹೆಚ್ಚಿಸುವ ಕೆಲಸವಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.

ನಗರದ ಮೈಲೂರ್ ರಸ್ತೆಯಲ್ಲಿರುವ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿದ್ಯಾಶ್ರೀ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಚಿಗುರು–2026-27’ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಬಳಕೆಯಿಂದ ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಕೆಲವೊಮ್ಮೆ ಹಿನ್ನಡೆಯಾಗುತ್ತಿದೆ. ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಬೆಸೆಯುವ ಅಗತ್ಯವಿದೆ ಎಂದರು.

ಪ್ರಾಂಶುಪಾಲ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಮಕ್ಕಳಿಗಾಗಿ ಇಂತಹ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಇಂತಹ ವೇದಿಕೆಗಳು ಅಗತ್ಯ. ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಲ್ಲಿರುವ ಪ್ರತಿಭೆ ಹೊರಹೊಮ್ಮುವುದರ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣಪತಿ ಸೋಲಪೂರೆ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚೆನ್ನಬಸವ ಹೇಡೆ, ಉಪನ್ಯಾಸಕ ದೇವಿದಾಸ್ ಜೋಶಿ, ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಪತ್ರಕರ್ತ ಶಶಿಕಾಂತ್ ಬಂಬುಳಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ್, ಗುರು ಹಾಗೂ ಶಾಲೆಯ ಸಿಬ್ಬಂದಿ ವರ್ಗ, ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಸರಸ್ವತಿ ಶೀಲವಂತ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಕ್ಲೈಮೆಂಟಿನಾ ನಿರೂಪಿಸಿದರು. ಚಂದ್ರಕಾಂತ್ ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor