ಹುಮನಾಬಾದ್ನಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ
ಹುಮನಾಬಾದ್: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಗುರುವಾರ ನಡೆಯಿತು.
ವಿದ್ಯಾರ್ಥಿಗಳೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಭಾಪತಿ, ವಿವಿಧ ಖಾತೆಗಳ ಸಚಿವರು, ವಿರೋಧ ಪಕ್ಷದ ನಾಯಕ ಹಾಗೂ ಉಪನಾಯಕರ ಪಾತ್ರ ವಹಿಸಿ ಸಂಸತ್ತಿನ ಮಾದರಿಯಲ್ಲಿ ಖಡಕ್ ಪ್ರಶ್ನೆ-ಖಡಕ್ ಉತ್ತರಗಳ ಮೂಲಕ ಚರ್ಚೆ ನಡೆಸಿದರು. ಸದ್ಯದ ರಾಜಕೀಯ ಪರಿಸ್ಥಿತಿಗೆ ಹೋಲುವಂತೆಯೇ ಪ್ರಶ್ನೋತ್ತರಗಳು ಮೂಡಿಬಂದವು.
ವಿದ್ಯಾರ್ಥಿ ಸಂಸತ್ತು ನೈಜ ಸಂಸತ್ತಿನಂತೆ ಗಂಭೀರವಾಗಿ ನಡೆಯಿತು. ಗ್ರಾಮೀಣ ಸಮಸ್ಯೆ, ಸ್ವಚ್ಛತೆ, ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆ, ವಿದ್ಯುತ್ ಸಮಸ್ಯೆ, ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳ ನಿಯಮ ಉಲ್ಲಂಘನೆ, ಕಾರ್ಮಿಕರ ವೇತನ, ಮಹಿಳೆಯರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ಆರ್ಟಿಕಲ್ 371(ಜೆ), ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ, ರಾಜ್ಯ ಎದುರಿಸುತ್ತಿರುವ ಬರಗಾಲಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು, ಪಶುಸಂಗೋಪನೆ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಲಪಡಿಸಲು ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಶ್ನೋತ್ತರಗಳು ನಡೆದವು.
ಚರ್ಚೆಯ ಮಧ್ಯೆ ಆಡಳಿತ ಹಾಗೂ ವಿರೋಧ ಪಕ್ಷದ ಪಾತ್ರದಲ್ಲಿದ್ದ ವಿದ್ಯಾರ್ಥಿಗಳ ನಡುವೆ ಬಿಸಿ ವಾಗ್ವಾದವೂ ನಡೆಯಿತು. ಪರಿಸ್ಥಿತಿ ಕೈಮೀರಿದಾಗ ಸಭಾಪತಿ ಪಾತ್ರದಲ್ಲಿದ್ದ ವಿದ್ಯಾರ್ಥಿನಿ ಮಧ್ಯಪ್ರವೇಶಿಸಿ ಸಭೆಯನ್ನು ಮುಂದೂಡಿದರು. ಬಳಿಕ ಶಾಸಕರ ಪಾತ್ರದಲ್ಲಿದ್ದ ವಿದ್ಯಾರ್ಥಿಗಳು ಚುಕ್ಕೆ ಗುರುತಿನ ಪ್ರಶ್ನೆಗಳ ಮೂಲಕ ಸರ್ಕಾರದ ಗಮನ ಸೆಳೆದರು.
ಕಾರ್ಯಕ್ರಮವನ್ನು ತಾಲೂಕು ದಂಡಾಧಿಕಾರಿ ಜಗದೀಶ್ ಚೌರ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ದಿಲೀಪಕುಮಾರ್ ಉತ್ತಮ್, ಪ್ರಾಂಶುಪಾಲ ಬಳಿರಾಮ್ ಹುಡೆ, ಪ್ರಾಧ್ಯಾಪಕ ಅರುಣಕುಮಾರ್ ಚಂದನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಳಿರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜು ಪ್ರಾಧ್ಯಾಪಕರು ಹಾಗೂ ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.