×
Ad

ಬೀದರ್‌ನ ಶಾಹೀನ್ ಸಂಸ್ಥೆಯ ಡಾ.ಅಬ್ದುಲ್ ಖದೀರ್ ಅವರಿಗೆ ‘ಸರ್ ಸೈಯದ್ ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿ’ ಪ್ರದಾನ

Update: 2025-10-17 21:06 IST

ಅಲಿಗಢ : ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಸರ್ ಸೈಯದ್ ಅಹ್ಮದ್ ಖಾನ್ ಅವರ ಜನ್ಮದಿನ ಸ್ಮರಣಾರ್ಥ ಸಮಾರಂಭದಲ್ಲಿ, ಬೀದರ್‌ನ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಅಬ್ದುಲ್ ಖದೀರ್ ಅವರಿಗೆ 2025ನೇ ಸಾಲಿನ ‘ಸರ್ ಸೈಯದ್ ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆ, ಅಂಚಿನ ಸಮುದಾಯಗಳ ಸಬಲೀಕರಣದ ಪ್ರಯತ್ನಗಳನ್ನು ಪರಿಗಣಿಸಿ ಈ ಗೌರವ ಪ್ರದಾನ ಮಾಡಲಾಗಿದೆ.

ಜಪಾನ್‌ನಲ್ಲಿ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ಡಾ.ಅಬ್ದುಲ್ ಖದೀರ್ ಅವರು ನಂತರ ತಮ್ಮ ತವರು ಬೀದರ್‌ಗೆ ಮರಳಿ, ಅಲ್ಲಮಾ ಇಕ್ಬಾಲ್ ಶೈಕ್ಷಣಿಕ ಸೊಸೈಟಿಯನ್ನು ಸ್ಥಾಪಿಸಿದರು. ಬಳಿಕ ಅದು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದ್ದು, ಕೇವಲ 18 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆ ಇಂದಿಗೆ ದೇಶದ 13 ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿ, 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 500ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಯನ್ನು ಒಳಗೊಂಡಿದೆ.

ಧಾರ್ಮಿಕ ಮತ್ತು ಆಧುನಿಕ ಶಿಕ್ಷಣದ ಸಮನ್ವಯದ ಮೂಲಕ, ಸಾಂಪ್ರದಾಯಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿ ಶಿಕ್ಷಣದತ್ತ ದಾರಿತೋರಿಸಲು ಡಾ.ಅಬ್ದುಲ್ ಖದೀರ್ ಮಹತ್ತರ ಪಾತ್ರ ವಹಿಸಿದ್ದಾರೆ. ಅವರ ಶಿಕ್ಷಣ ತತ್ವಗಳು ಸರ್ ಸೈಯದ್ ಅಹ್ಮದ್ ಖಾನ್ ಅವರ ಆಧುನಿಕ ಶಿಕ್ಷಣದ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತವೆ ಎಂದು ವಿಶ್ವವಿದ್ಯಾಲಯ ಶ್ಲಾಘಿಸಿದೆ.

ಶಾಹೀನ್ ಸಂಸ್ಥೆ NEET, JEE, UPSC ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದರೊಂದಿಗೆ, ಹಿಫ್ಝುಲ್- ಕುರ್‌ಆನ್ ಪ್ಲಸ್ ಮತ್ತು ಮದ್ರಸಾ ಪ್ಲಸ್ ಎಂಬ ವಿಶಿಷ್ಟ ಸಂಯೋಜಿತ ಪಠ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಬೀದರ್‌ನ ಐತಿಹಾಸಿಕ ಶಿಕ್ಷಣ ಪರಂಪರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಡಾ.ಅಬ್ದುಲ್ ಖದೀರ್ ಅವರ ಕೊಡುಗೆ ವಿಶಿಷ್ಟವಾಗಿದೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ʼಸರ್ ಸೈಯದ್ ಎಕ್ಸಲೆನ್ಸ್ ಪ್ರಶಸ್ತಿʼಗಳು ರಾಷ್ಟ್ರದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ಅಂತರರಾಷ್ಟ್ರೀಯ ಪ್ರಶಸ್ತಿಗೆ 2 ಲಕ್ಷ ರೂಪಾಯಿ ಮತ್ತು ರಾಷ್ಟ್ರೀಯ ಪ್ರಶಸ್ತಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಸೈಯದ್ ಅಧ್ಯಯನಗಳು, ದಕ್ಷಿಣ ಏಶ್ಯ ಅಧ್ಯಯನಗಳು, ಉರ್ದು ಸಾಹಿತ್ಯ, ಇತಿಹಾಸ, ಸಾಮಾಜಿಕ ಸುಧಾರಣೆ, ಕೋಮು ಸೌಹಾರ್ದತೆ, ಪತ್ರಿಕೋದ್ಯಮ ಮತ್ತು ಸರ್ವಧರ್ಮ ಸಂವಾದ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದವರಿಗೆ ಪ್ರದಾನ ಮಾಡಲಾಗುತ್ತದೆ.

ಈ ವರ್ಷದ ಪ್ರಶಸ್ತಿ ವಿಜೇತರ ಆಯ್ಕೆಯನ್ನು ಪ್ರೊ.ಅಝಾರ್ಮಿ ದುಖ್ತ್ ಸಫಾವಿ ಅವರ ನೇತೃತ್ವದ ಆಯ್ಕೆ ಸಮಿತಿಯು ಮಾಡಿತು. ಪ್ರೊ.ಅನಿಸುರ್ ರೆಹ್ಮಾನ್, ಪ್ರೊ.ಎ.ಆರ್.ಕಿದ್ವಾಯಿ, ಪ್ರೊ.ಇಮ್ತಿಯಾಝ್ ಹಸ್ನೈನ್ ಹಾಗೂ ಪ್ರೊ.ಶಫಿ ಕಿದ್ವಾಯಿ ಸಮಿತಿಯ ಸದಸ್ಯರಾಗಿದ್ದರು. ಈ ಆಯ್ಕೆಯನ್ನು ಉಪಕುಲಪತಿ ಪ್ರೊ.ನೈಮಾ ಖಾತೂನ್ ಅನುಮೋದಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News