ಬೀದರ್ | 62 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ತಂಬಾಕು ಪದಾರ್ಥ ವಶ : ಆರೋಪಿಯ ಬಂಧನ
ಬೀದರ್ : ನಗರದ ಗಾಂಧಿಗಂಜ್ ಪೊಲೀಸರು ದಾಳಿ ನಡೆಸಿ 62 ಲಕ್ಷಕ್ಕೂ ಅಧಿಕ ಮೌಲ್ಯದ ಸುಗಂಧಿತ ನಕಲಿ ತಂಬಾಕು ಪದಾರ್ಥ ವಶಕ್ಕೆ ಪಡೆದಿರುವುದಲ್ಲದೆ, ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಚಿದ್ರಿ ರೋಡಿನ ಫುಟಪಾತ್ ಮೇಲೆ ನಿಂತಿರುವ ವಾಹನದಲ್ಲಿ ಪರವಾನಿಗೆ ಇಲ್ಲದೆ ಸಿಗರೇಟ್ ತಯಾರಿಸುವ ಜರ್ದಾ, ಸಿಗರೇಟ್ ಫಿಲ್ಟರ್, ಪೇಪರ್ ರಿಮ್ ಸಾಗಾಟ ಮಾಡಲು ತಯಾರಿ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೆರೆಗೆ, ಎಸ್ಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಂತೆ, ಗಾಂಧಿಗಂಜ್ ಪೊಲೀಸ್ ಠಾಣೆಯ ಸಿಪಿಐ ಆನಂದರಾವ್ ಎಸ್.ಎನ್ ಅವರು ಠಾಣಾ ಸಿಬ್ಬಂದಿಗಳ ಜೊತೆ ದಾಳಿ ನಡೆಸಿದ್ದರು.
ದಾಳಿ ವೇಳೆ 32 ಲಕ್ಷ 50 ಸಾವಿರ ರೂ. ಮೌಲ್ಯದ 1,300 ಕೆ.ಜಿ ತಂಬಾಕು, ಸುಮಾರು 24 ಲಕ್ಷ ರೂ. ಮೌಲ್ಯದ ಸಿಗರೇಟ್ ತಯಾರಿಸುವ ಫಿಟ್ಟರ್ ಗಳ ಬಾಕ್ಸ್, ಸುಮಾರು 4 ಲಕ್ಷ ರೂ. ಮೌಲ್ಯದ ಸಿಗರೇಟ್ ತಯಾರಿಸುವ ಬಿಳಿ ಬಣ್ಣದ ಪೇಪರ್ ರೀಮ್ ಹಾಗೂ 2 ಲಕ್ಷ ರೂ. ಬೆಲೆ ಬಾಳುವ ಒಂದು ವಾಹನ ಸೇರಿದಂತೆ ಒಟ್ಟು 62 ಲಕ್ಷ 50 ಸಾವಿರ ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.