ಹುಲಸೂರ್‌ | ಶರಣರ ವಚನಗಳು ಸಮಾನತೆ, ಶ್ರಮದ ಬದುಕಿನ ದಾರಿ ತೋರಿಸಿವೆ: ತಹಶೀಲ್ದಾರ್ ಶಿವಾನಂದ್ ಮೆತ್ರೆ

Update: 2026-07-29 19:46 IST

ಹುಲಸೂರ್‌ : 12ನೇ ಶತಮಾನದ ಶರಣರು ವಚನ ಚಳವಳಿಯ ಮೂಲಕ ಕನ್ನಡ ನಾಡಿನ ಜನರಿಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಹಡಪದ ಅಪ್ಪಣ್ಣನವರು ಶ್ರಮದ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ತಹಶೀಲ್ದಾರ್ ಶಿವಾನಂದ್ ಮೆತ್ರೆ ಹೇಳಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಭೇದ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಕಂದಾಚಾರ, ಮೂಢನಂಬಿಕೆ ಹಾಗೂ ಶೋಷಣೆ ವಿರುದ್ಧ ವಚನ ಚಳವಳಿಯ ಮೂಲಕ ಶರಣರು ಧ್ವನಿ ಎತ್ತಿದ್ದರು. ಈ ಚಳವಳಿಯಲ್ಲಿ ಬಸವಣ್ಣನವರೊಂದಿಗೆ ಅನೇಕ ಶರಣರು ಮಹತ್ವದ ಪಾತ್ರ ವಹಿಸಿದ್ದು, ಅವರಲ್ಲಿ ಹಡಪದ ಅಪ್ಪಣ್ಣ ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.

ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ವಚನಗಳ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಪತ್ನಿ ಲಿಂಗಮ್ಮ ಅವರೂ ವಚನಗಳನ್ನು ರಚಿಸುವ ಮೂಲಕ ವಚನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಸುನೀಲಕುಮಾರ್ ಸಜ್ಜನಶೆಟ್ಟಿ, ಜಿಪಂ ಮಾಜಿ ಸದಸ್ಯ ಸುಧೀರ್ ಕಾಡಾದಿ, ಹಡಪದ ಅಪ್ಪಣ್ಣ (ಸವಿತಾ) ಸಮಾಜ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಧನಾಜಿ ಕಾರಗೀರ್ ಹಾಗೂ ಖಜಾಂಚಿ ಬಾಲಾಜಿ ಗಾಯಕವಾಡ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News