ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಚಿತ್ರಕಲಾ ಪ್ರದರ್ಶನ : ಬೀದರ್‌ನ ಕಲಾವಿದ ಸಂತೋಷಕುಮಾರ್ ಓಂಕಾರೆ ಅವರ ಕೃತಿಗಳ ಅನಾವರಣ
ಬೀದರ್: ಚಿಕ್ಕಮಗಳೂರು ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಜುಲೈ 31ರಿಂದ ಆಗಸ್ಟ್ 2ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಬೀದರ್ ಜಿಲ್ಲೆಯ ಕಲಾವಿದ ಸಂತೋಷಕುಮಾರ್ ಓಂಕಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ಈ ಪ್ರದರ್ಶನವನ್ನು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಅಕ್ಷಯಕುಮಾರ್ ದ್ವಿವೇದಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಕುರಿತು ಮಾತನಾಡಿರುವ ಸಂತೋಷಕುಮಾರ್ ಓಂಕಾರೆ, ಈ ಹಿಂದೆ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿ ಚಿತ್ರಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದೀಗ ಚಿಕ್ಕಮಗಳೂರಿನಲ್ಲಿ ಪ್ರದರ್ಶನ ನಡೆಸಲಾಗುತ್ತಿದ್ದು, ಪ್ರಕೃತಿ, ಮಾನವೀಯತೆ, ಸಹೋದರತೆ ಹಾಗೂ ಬಂಧುತ್ವದ ಮೌಲ್ಯಗಳನ್ನು ಬಿಂಬಿಸುವ ತಮ್ಮ ಕೈಯಾರೆ ರಚಿಸಿದ ವಿವಿಧ ಚಿತ್ರಕೃತಿಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರಕಲಾ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.