ಬೀದರ್ ಜಿಲ್ಲೆಯಲ್ಲಿ ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಸಿಐಡಿ ತನಿಖೆಗೆ ಆಗ್ರಹ

Update: 2026-08-14 19:06 IST

ಬೀದರ್: ಜಿಲ್ಲೆಯಲ್ಲಿ ದಲಿತ ಸಮುದಾಯದವರ ಮೇಲೆ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಸಮಗ್ರವಾಗಿ ಸಿಐಡಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ಅರುಣ ಪಟೇಲ್ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ್ ವಾಘಮಾರೆ ಜಂಟಿ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಭಾಲ್ಕಿ ತಾಲೂಕಿನಲ್ಲಿಯೇ ದಲಿತರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಅವಮಾನ, ಅಪಮಾನ ಹಾಗೂ ದೌರ್ಜನ್ಯಗಳನ್ನು ಸಹಿಸಿಕೊಂಡೇ ದಲಿತರು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ಆ.13ರಂದು ಭಾಲ್ಕಿ ತಾಲೂಕಿನ ಮೆಹಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಜೀರಗ್ಯಾಳ ಗ್ರಾಮದ ನಿವಾಸಿ ರಾಜಕುಮಾರ್ ಸಿಂಧೆ ಅವರು ಆಡು ಮೇಯಿಸಲು ತೆರಳಿದ್ದ ವೇಳೆ ಜಾತಿ ನಿಂದನೆ ಮಾಡಿ ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಬೀದರ್ ಜಿಲ್ಲಾದ್ಯಂತ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ದೌರ್ಜನ್ಯಗಳ ಹಿಂದಿರುವ ಕಾರಣಗಳನ್ನು ಪತ್ತೆಹಚ್ಚಿ, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಿಐಡಿ ತನಿಖೆ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿರುವ ಅವರು, ಜಿಲ್ಲೆಯಲ್ಲಿ ದಲಿತರ ಸುರಕ್ಷತೆಯನ್ನು ಖಚಿತಪಡಿಸುವುದರ ಜೊತೆಗೆ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News