ಗುಟ್ಕಾ ನಿಷೇಧ : ಸರ್ಕಾರದ ಕ್ರಮಕ್ಕೆ ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸ್ವಾಗತ
ಬೀದರ್: ರಾಜ್ಯ ಸರ್ಕಾರವು ರಾಜ್ಯದಲ್ಲಿ ಒಂದು ವರ್ಷದ ಅವಧಿಗೆ ತಂಬಾಕು ಮತ್ತು ನಿಕೋಟಿನ್ ಹೊಂದಿದ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಮೇಲೆ ನಿಷೇಧ ಹೇರಿರುವುದನ್ನು ಬೀದರ್ ನಾಗರಿಕ ಸನ್ಮಾರ್ಗ ಸಮಿತಿ ಸ್ವಾಗತಿಸಿದೆ.
ರಾಜ್ಯ ಸರ್ಕಾರದ ಕ್ರಮವು ಸ್ವಸ್ಥ ಹಾಗೂ ಸದೃಢ ರಾಜ್ಯ ಕಟ್ಟುವ ದಿಸೆಯಲ್ಲಿನ ದಿಟ್ಟ ಹೆಜ್ಜೆಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಎಲ್ಲ ಸದಸ್ಯರನ್ನು ಅಭಿನಂದಿಸುವುದಾಗಿ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹಾಗೂ ಕಾರ್ಯದರ್ಶಿ ಅಶೋಕ್ ವಡಗಾವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯವಂತ ಯುವ ಜನರೇ ದೇಶದ ಸಂಪತ್ತು. ಆದರೆ, ತಂಬಾಕು ಉತ್ಪನ್ನಗಳ ಸೇವನೆ ಚಟದಿಂದಾಗಿ ಅನೇಕ ಯುವಕರು ದಾರಿ ತಪ್ಪಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ದೈಹಿಕವಾಗಿ ಬಲಹೀನರಾಗಿ, ಕುಟುಂಬಕ್ಕೂ ಭಾರವಾಗುತ್ತಿದ್ದರು. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.
ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಆಡಳಿತದ ಗಮನ ಸೆಳೆಯಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಒಂದು ವರ್ಷದಿಂದ ಬೀದರ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾಥಾ ನಡೆಸಲಾಗಿತ್ತು. ತಂಬಾಕು ಉತ್ಪನ್ನಗಳ ಸೇವನೆಯಿಂದ ಬರುವ ಕಾಯಿಲೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗಿತ್ತು. ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಅಂಗಡಿ ಮಾಲಕರ ಮನವೊಲಿಸಲಾಗಿತ್ತು. ಅಂಗಡಿಗಳ ಮಾಲೀಕರ ತಂಬಾಕು ಉತ್ಪನ್ನಗಳನ್ನು ಸುಟ್ಟು ಹಾಕಿ, ಅವುಗಳ ಮಾರಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಕೂಡ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.