ಕಮಲನಗರ | ಕನ್ನಡ ನಾಡು ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಹೊಂದಿದೆ: ರೇಖಾ ಮಹಾಜನ್
71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕಮಲನಗರ: ಕನ್ನಡ ನಾಡು ವೈಭವಪೂರ್ಣ ಇತಿಹಾಸ, ಶ್ರೀಮಂತ ಸಾಹಿತ್ಯ ಹಾಗೂ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದು ಉಪನ್ಯಾಸಕಿ ರೇಖಾ ಮಹಾಜನ್ ಹೇಳಿದರು.
ಪಟ್ಟಣದ ಜಿಪಿಎಸ್ ಶಾಲೆಯ ಆವರಣದಲ್ಲಿ ರವಿವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇಂದಿನ ಮಕ್ಕಳಿಗೆ ನಮ್ಮ ಭಾಷೆ, ನಡೆ, ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಯುವ ಪೀಳಿಗೆಗೆ ಕನ್ನಡ ನಾಡು-ನುಡಿಯ ಶ್ರೀಮಂತಿಕೆಯನ್ನು ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭಕ್ಕೂ ಮುನ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಉರ್ದು ಶಾಲೆ, ಎಂಪಿಎಸ್ ಶಾಲೆ, ಜಿಪಿಎಸ್ ಶಾಲೆ, ಗೋಲ್ಡನ್ ವ್ಯಾಲಿ ಶಾಲೆ ಹಾಗೂ ಗುರಪ್ಪ ಟೊಣ್ಣ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 10 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಅಮಿತ್ ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಇಒ ಹಣಮಂತರಾಯ್ ಕೌಟಗೆ, ಕಸಾಪ ಅಧ್ಯಕ್ಷ ಪ್ರಶಾಂತ್ ಮಠಪತಿ, ಮುಖ್ಯಶಿಕ್ಷಕ ಲಿಂಗಾನಂದ್ ಮಹಾಜನ್, ಪಿಡಿಒ ದಿಲೀಪ್ ಸಜ್ಜನಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಮನೋಜಕುಮಾರ್ ಹಿರೇಮಠ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಶಾಂತ್ ಸ್ವಾಗತಿಸಿದರು. ಉಮಾಕಾಂತ್ ಮಹಾಜನ್ ನಿರೂಪಿಸಿದರು.