ಬೀದರ್ | ಕೆಯುಡಬ್ಲ್ಯೂಜೆ ಜಿಲ್ಲಾ ಘಟಕದ ಚುನಾವಣೆಗೆ ಸಲ್ಲಿಕೆಯಾಗದ ನಾಮಪತ್ರ, ಚುನಾವಣೆ ಮುಂದೂಡಿಕೆ: ಶಶಿಕಾಂತ್ ಎಸ್. ಶೆಂಬೆಳ್ಳಿ
ಬೀದರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದ ಚುನಾವಣೆಗೆ ಸಂಘದ ಅರ್ಹ ಸದಸ್ಯರಾದ ಒಬ್ಬರು ಕೂಡ ನಾಮಪತ್ರ ಸಲ್ಲಿಸದಿರುವ ಕಾರಣ ಜಿಲ್ಲಾ ಘಟಕದ ಆಯ್ಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ ಅವರು ಆದೇಶಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ್ ಎಸ್. ಶೆಂಬೆಳ್ಳಿ ಅವರು ತಿಳಿಸಿದರು.
ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನ. 9 ರಂದು ನಡೆಯಬೇಕಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕದ ಚುನಾವಣೆಗೆ ಅ. 27 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಆದರೆ ಕೊನೆ ದಿನದವರೆಗೂ ಸಂಘದ ಅರ್ಹ ಸದಸ್ಯರಾದ ಒಬ್ಬರು ಕೂಡ ನಾಮಪತ್ರ ಸಲ್ಲಿಸಲಿಲ್ಲ. ಯಾವುದೇ ಸ್ಥಾನಕ್ಕೆ ನಾಮನಿರ್ದೇಶನ ಅಥವಾ ನೇರ ನೇಮಕಾತಿ ನಡೆದಿರುವುದಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಮತ್ತೆ ನಿಯಮಾನುಸಾರ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಾಳ. ಚುನಾವಣೆಗಳನ್ನು 'ಪ್ರಜಾಪ್ರಭುತ್ವದ ಹಬ್ಬ' ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇಂತಹ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಗೊಳಿಸುವಲ್ಲಿ ಕಾರ್ಯನಿರತ ಪತ್ರಕರ್ತರ ಸಹಭಾಗಿತ್ವ ಮತ್ತು ಬೆಂಬಲ ಅಗತ್ಯವಾಗಿದೆ. ಚುನಾವಣಾ ನಿಯಮಗಳಿಗೆ ಅನುಗುಣವಾಗಿ ಚುನಾವಣೆ ನಡೆಸಲು ಚುನಾವಣಾ ಸಮಿತಿ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ನಿಯಮಾನುಸಾರ ಚುನಾವಣೆಯ ಅಧಿಸೂಚನೆ ಹೊರಡಿಸುವ ಮೂಲಕ ಚುನಾಯಿತ ಕಾರ್ಯಕಾರಿ ಸಮಿತಿಯನ್ನು ನೆಲೆಗೊಳಿಸುವ ಪ್ರಕ್ರಿಯೆ ನಡೆಯಲಿದೆ. ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಂದುವರೆದಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಎನ್. ರವಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ, ಚುನಾವಣೆಯ ನೋಡಲ್ ಅಧಿಕಾರಿ ಮಂಜುನಾಥ್ ಸುಳ್ಳೋಳಿ, ಕಾರ್ಮಿಕ ಇಲಾಖೆಯ ಅಧಿಕಾರಿ, ಚುನಾವಣೆಯ ನೋಡಲ್ ಅಧಿಕಾರಿ ಮಹೇಶ್ ಕುಲ್ಲೋಳಿ ಹಾಗೂ ಸಹಾಯಕ ಚುನಾವಣಾಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗೌರವ ಧನ ನೀಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಆದರೆ ಆ ಗೌರವ ಧನವನ್ನು ಸ್ವೀಕರಿಸದೆ ಆ ಹಣವನ್ನು ಸಂಘದ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ನಾವು ಒಮ್ಮತದ ತೀರ್ಮಾನದಿಂದ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದು ಅವರು ಹೇಳಿದರು.