ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬೀನ್ ಅಧಿಕಾರ ಸ್ವೀಕಾರ : ಬೀದರ್‌ನಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ
ಬೀದರ್ : ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಿತಿನ್ ನಬೀನ್ ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಬೀದರ್ ನಗರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮದ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಪಕ್ಷದ ಬೀದರ್ ನಗರಾಧ್ಯಕ್ಷ ಶಶಿ ಹೊಸಳ್ಳಿ ಅವರ ನೇತೃತ್ವದಲ್ಲಿ ನಗರದ ಶಿವಾಜಿ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.
ಈ ವೇಳೆ ಶಶಿ ಹೊಸಳ್ಳಿ ಅವರು ಮಾತನಾಡಿ, ನಿತಿನ್ ನಬೀನ್ ಅವರ ನಾಯಕತ್ವವು ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದರ ಜೊತೆಗೆ ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಸದೃಢಗೊಳಿಸಲಿದೆ. ಮುಂಬರುವ ತಮಿಳುನಾಡು, ಕೇರಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಯಶಸ್ವಿಯಾಗಿ ಮುನ್ನಡೆಸಲು ಅವರ ಸಂಘಟನಾ ಚಾತುರ್ಯ ಮತ್ತು ರಾಜಕೀಯ ಅನುಭವ ಮಾರ್ಗದರ್ಶಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಬುಡಾ ಅಧ್ಯಕ್ಷ ಬಾಬುವಾಲಿ ಅವರು ಮಾತನಾಡಿ, ನಿತಿನ್ ನಬೀನ್ ಅವರು ಸತತ ಐದು ಬಾರಿ ಶಾಸಕರಾಗಿ ಜನಮನ್ನಣೆ ಪಡೆದು, ಬಿಹಾರ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷ ಸಂಘಟನೆಗೆ ಅವರು ನೀಡಿರುವ ಮಹತ್ವದ ಕೊಡುಗೆ, ಸಂಘಟನಾ ಚಾತುರ್ಯ ಹಾಗೂ ಶುದ್ಧ ಸಾರ್ವಜನಿಕ ಜೀವನದ ಹಿನ್ನೆಲೆಯಿಂದಾಗಿ, ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರು ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷವು ಸಂಘಟನಾತ್ಮಕವಾಗಿ ಇನ್ನಷ್ಟು ಸಶಕ್ತವಾಗಲಿದೆ ಎಂದರು.
ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ನಂದಾಕಿಶೋರ್ ವರ್ಮಾ, ಗುರುನಾಥ್ ಜಾಂತಿಕರ್, ರಾಜರಾಮ್ ಚಿಟ್ಟಾ, ಗಣೇಶ್ ಭೋಸ್ಲೆ, ಸುನಿಲ್ ಗೌಳಿ, ರೋಷನ್ ವರ್ಮಾ, ನಿತಿನ್ ನವಲಕಲೆ, ನರೇಶ್ ಗೌಳಿ, ವೀರೇಶ್ ಸ್ವಾಮಿ, ಭೂಷಣ ಪಾಠಕ, ಪವನ್ ಉಂಡೆ, ಸಂಗಮೇಶ್ ಗುಮ್ಮಾ, ನೀತಿನ್ ಕರ್ಪುರ್, ಆನಂದ್ ಘಂಟಿ, ಸಂಜು ಘನಾತೆ, ಕಾಶಿನಾಥ್, ಗೋಪಾಲ್ ಕುಕುಡಾಳ್, ಸುದರ್ಶನ್, ಆಕಾಶ್ ಮಮದಾಪುರ್, ಬಾಲಾಜಿ ಪಾಟೀಲ್, ಸಂಜು ಜೀರಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.