ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವುದೇ ಕುರ್ ಆನ್ ಆಶಯ: ಮುಹಮ್ಮದ್ ಕುಂಞಿ
ಬಸವ ಕಲ್ಯಾಣದಲ್ಲಿ ಕುರ್ ಆನ್ ಪ್ರವಚನದ ದಶಮಾನೋತ್ಸವಕ್ಕೆ ಚಾಲನೆ
ಬೀದರ್ : ಅನ್ಯಾಯ, ಅತ್ಯಾಚಾರದಿಂದ ತುಂಬಿದ ಸಮಾಜದಲ್ಲಿ ಇಂದು ನ್ಯಾಯ ಮಾರಾಟದ ವಸ್ತುವಾಗಿ ನಿಂತಿದೆ. ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವುದೇ ಪವಿತ್ರ ಕುರ್ಆನ್ ಆಶಯವಾಗಿದೆ ಎಂದು ಜಮಾಅತೇ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದ್ದಾರೆ.
ಬಸವ ಕಲ್ಯಾಣದಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ವತಿಯಿಂದ ಶನಿವಾರ ನಗರದ ರಥ ಮೈದಾನದ ಸಭಾ ಭವನದಲ್ಲಿ ಆಯೋಜಿಸಿದ್ದ ಕುರ್ ಆನ್ ಪ್ರವಚನದ ದಶಮಾನೋತ್ಸವದ ಮೊದಲ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ 'ನ್ಯಾಯ ಮತ್ತು ಸಮಾನತೆ' ಎಂಬ ವಿಷಯದ ಅವರು ಕುರಿತು ಪ್ರವಚನ ನೀಡಿದರು.
ಬಸವಣ್ಣನವರ ಕರ್ಮ ಭೂಮಿಯಲ್ಲಿ ಕಳೆದ 10 ವರ್ಷಗಳಿಂದ ಕುರ್ ಆನ್ ಪ್ರವಚನ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಂಪರ್ಕ ಯುಗದಲ್ಲಿ ಪರಸ್ಪರ ಅಂತರ ಹೆಚ್ಚಾಗುತ್ತಿದ್ದು, ನಮ್ಮನ್ನು ಪರಸ್ಪರ ನಿಕಟಗೊಳಿಸುವುದೇ ಪ್ರವಚನದ ಮೂಲ ಆಶಯವಾಗಿದೆ ಎಂದರು.
ನ್ಯಾಯ ಸಮಾನತೆ ಒಂದು ನಾಣ್ಯದ ಎರಡು ಮುಖಗಳು. ಎಲ್ಲಿ ನ್ಯಾಯ ಇರುತ್ತದೆಯೋ ಅಲ್ಲಿ ಸಮಾನತೆ ಇರುತ್ತದೆ. ಈ ಎರಡು ಪರಸ್ಪರ ಪೂರಕವಾದ ವಿಷಯಗಳು. ಜಗತ್ತಿನ ಎಲ್ಲಾ ಧರ್ಮಗ್ರಂಥಗಳು ನ್ಯಾಯವನ್ನು ಪ್ರತಿಪಾದಿಸಿವೆ. ಕುರ್ಆನ್, ಬೈಬಲ್, ವೇದ ಉಪನಿಷತ್ತು ಹಾಗೂ ವಚನಗಳು ನ್ಯಾಯ ಪ್ರತಿಪಾದಿಸಿವೆ. ಪವಿತ್ರ ಕುರ್ ಆನ್ ದ ಮೂಲ ಮಂತ್ರ ನ್ಯಾಯವಾಗಿದೆ. ಮನುಷ್ಯನಿಗೆ ನ್ಯಾಯ ಸಿಗಬೇಕು. ನ್ಯಾಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅದರಲ್ಲಿ ಹೇಳಲಾಗಿದೆ. ಸೃಷ್ಠಿಕರ್ತನ ಆದೇಶದಂತೆ, ತೋರಿಸಿಕೊಟ್ಟ ದಾರಿಯಲ್ಲಿ ನಡೆದರೆ ಭಯ ಮತ್ತು ಹಸಿವಿನಿಂದ ಮುಕ್ತರಾಗಿ ಬದುಕಬಹುದು ಎಂದು ಹೇಳಲಾಗಿದೆ. ಇದರಲ್ಲಿಯ ಸೃಷ್ಠಿಕರ್ತನ ಸಂದೇಶಗಳು ಸತ್ಯ, ನ್ಯಾಯದ ದೃಷ್ಠಿಯಿಂದ ಪರಿಪೂರ್ಣವಾಗಿದೆ ಎಂದು ಇದರಲ್ಲಿ ಹೇಳಲಾಗಿದೆ ಎಂದು ಮುಹಮ್ಮದ್ ಕುಂಞಿ ನುಡಿದರು.
ಜಗತ್ತಿನಲ್ಲಿ ಬಂದ ಪ್ರವಾದಿಗಳು, ದಾರ್ಶನಿಕರು, ಮಹಾಪುರುಷರು, ಆಚಾರ್ಯರು ಆತ್ಮವಿಶ್ವಾಸದಿಂದ, ಶಾಂತಿ, ಸಮಾಧಾನದಿಂದ ಬದುಕುವ ಪಾಠವನ್ನು ಕಲಿಸಿಕೊಟ್ಟಿದ್ದಾರೆ. ನ್ಯಾಯ ಮನುಷ್ಯನ ಮೂಲಭೂತ ಅವಶ್ಯಕತೆ. ನಮ್ಮ ಸಂವಿಧಾನ ದೇಶದ ಎಲ್ಲ ಪ್ರಜೆಗಳಿಗೂ ನ್ಯಾಯದ ವಾಗ್ದಾನ ಮಾಡಿದೆ. ನ್ಯಾಯ, ಸ್ವಾತಂತ್ರ ಸಮಾನತೆ, ಭಾತೃತ್ವ ಎಲ್ಲ ಹಕ್ಕು ಎಂದು ಮುನ್ನುಡಿಯಲ್ಲಿ ವಾಗ್ದಾನ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಉರ್ದು ಅಕಾಡಮಿಯ ಅಧ್ಯಕ್ಷ ಅಫ್ಝಲ್ ಉಲಮಾ ಮುಹಮ್ಮುದ್ ಅಲಿ ಕಾಜಿ ಮಾತನಾಡಿ, ನ್ಯಾಯದ ದೃಷ್ಟಿಯಲ್ಲಿ ಎಲ್ಲರೂ ಒಂದೆ. ನ್ಯಾಯಕ್ಕೆ ಬಡವ-ಶ್ರೀಮಂತ, ಶ್ರೇಷ್ಠ- ಕನಿಷ್ಠ ಎಂಬುದಿಲ್ಲ. ಎಲ್ಲರೂ ಒಂದು, ಎಲ್ಲರಿಗೂ ನ್ಯಾಯ ಸಿಗಬೇಕು. ಶಾಂತಿ, ಸೌಹಾರ್ದ, ಏಕತೆಯಿಂದ ಬಾಳಬೇಕು ಎನ್ನುವದನ್ನು ಕುರ್ ಆನ್ ಕಲಿಸಿಕೊಡುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಸಂವಿಧಾನ, ಕಾನೂನು ಸೇರಿ ಎಲ್ಲ ಇದ್ದರು ಸಹ ಸಮಾಜದಲ್ಲಿ ಶಾಂತಿ-ನೆಮ್ಮದಿ ಇಲ್ಲದಂತಾಗಿದೆ. ಕಳೆದ 10 ವರ್ಷಗಳಿಂದ ಕುರ್ ಆನ್ ಪ್ರವಚನ ನಡೆಸಿಕೊಂಡು ಬರುವ ಮೂಲಕ ಒಳ್ಳೆಯ ವಿಚಾರಗಳನ್ನು ಹೇಳುವ ಮಹತ್ವದ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಲಸೂರಿನ ಗುರು ಬಸವೇಶ್ವರ್ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ್ ಮಹಾಸ್ವಾಮೀಜಿ, ಫಾ. ಸಂತೋಷ ಬಾಪು, ಹುಲಸೂರು ತಹಶೀಲ್ದಾರ್ ಶಿವಾನಂದ್ ಮೇತ್ರೆ ಮಾತನಾಡಿದರು.
ಶ್ರೀ ಪಂಚಾಕ್ಷರಿ ಸ್ವಾಮೀಜಿ, ಬಿಕೆ ಸರಸ್ವತಿ ಬಹೇನ್ ಜಿ, ಕರ್ನಾಟಕ ಮೀನುಗಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣ ರಾವ್, ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ್, ಪ್ರಮುಖರಾದ ಜಗನ್ನಾಥ್ ಪಾಟೀಲ್ ಮಂಠಾಳ್, ಯಶೋಧಾ ರಾಠೋಡ್, ಜಮಾಅತೆ ಇಸ್ಲಾಂ ಹಿಂದ್ ಅಧ್ಯಕ್ಷ ಅಸ್ಲಮ್, ಪ್ರಮುಖರಾದ ವೀರಣ್ಣ ಹಲಶೆಟ್ಟಿ, ಮುಜಾಹಿದ್ ಪಾಶಾ ಖುರೇಶಿ, ಅರ್ಜುನ್ ಕನಕ, ಮನೋಹರ್ ಮೈಸೆ, ನರಸಂಗರೆಡ್ಡಿ ಗದಲೇಗಾಂವ್, ರಾಜೇಶ್ವರಿ ವರ್ಧನ್, ಗುರುನಾಥ್ ಗಡ್ಡೆ ಹಾಗೂ ತಹ್ಸಿನ್ ಅಲಿ ಜಮದಾರ್ ಮತ್ತಿತರರು ಉಪಸ್ಥಿತರಿದ್ದರು.
ಝುಲ್ಫಿಕರ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು.