×
Ad

ಬೀದರ್ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಕಳೆದ 3 ವರ್ಷದಲ್ಲಿ 1,500 ಕೋಟಿ ರೂ. ಹಂಚಿಕೆ : ಸಚಿವ ಈಶ್ವರ್ ಖಂಡ್ರೆ

Update: 2025-10-15 20:39 IST

ಬೀದರ್ : ಕಾಂಗ್ರೆಸ್ ಸರ್ಕಾರ ಬಂದ ಬಳಿಕ 2023-24 ಮತ್ತು 2024-25ರಲ್ಲಿ ವಿವಿಧ ಕಾಮಗಾರಿಗಳಿಗೆ 1,000 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಶೇ.63ರಷ್ಟು ವೆಚ್ಚ ಮಾಡಲಾಗಿದೆ. ಈ ವರ್ಷಕ್ಕೆ 500 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಯನ್ನು ಇಂದು ಅನುಮೋದಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಬುಧವಾರ ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆ ಕೆ ಆರ್ ಡಿ ಬಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023-24ರಲ್ಲಿ ವಿವಿಧ ಕಾಮಗಾರಿಗಳಿಗೆ 452 ಕೋಟಿ ರೂ. ಹಂಚಿಕೆಯಾಗಿದ್ದರೆ, 2024-25ರ ಸಾಲಿನಲ್ಲಿ 545 ಕೋಟಿ ರೂ. ಹಂಚಿಕೆಯಾಗಿದೆ. ಈ ವರ್ಷ ಅಂದರೆ 2025-26ರ ಸಾಲಿನಲ್ಲಿ ಮತ್ತೆ 500 ಕೋಟಿ ರೂ. ಬರಲಿದ್ದು, ಒಟ್ಟಾರೆ ನಮ್ಮ ಸರ್ಕಾರ ಬಂದ ಬಳಿಕ ಬೀದರ್ ಅಭಿವೃದ್ಧಿಗೆ ಕೆ ಕೆ ಆರ್ ಡಿ ಬಿ ಯಿಂದ 1,500 ಕೋಟಿ ರೂ. ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದರು.

2013-14ರಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. ಅಲ್ಲಿಂದ 2024-25ರವರೆಗೆ ಒಟ್ಟು 5,086 ಕಾಮಗಾರಿ ಮಂಜೂರಾಗಿದ್ದು, ಈ ಪೈಕಿ 4,254 ಕಾಮಗಾರಿ ಪೂರ್ಣಗೊಂಡಿದೆ. 661 ಕಾಮಗಾರಿಗಳು ಪ್ರಗತಿಯಲ್ಲಿದ್ದು, 141 ಕಾಮಗಾರಿ ಆರಂಭವಾಗಬೇಕಿದೆ ಎಂದು ವಿವರ ನೀಡಿದರು.

ಈ ಎಲ್ಲ ಕಾಮಗಾರಿಗಳಿಗೆ 2,638 ಕೋಟಿ ರೂ. ಹಂಚಿಕೆಯಾಗಿದ್ದು, ಈವರೆಗೆ 1,971 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ ಅವರು, ಈವರೆಗೆ ಶೇ.74ರಷ್ಟು ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.

ಡಿಸೆಂಬರ್ ಒಳಗಾಗಿ ಕಾಮಗಾರಿ ತ್ವರಿತಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದ ಅವರು, ಯಾವುದೇ ಕಾಮಗಾರಿಯಲ್ಲಿ ರಾಜೀ ಮಾಡಿಕೊಳ್ಳದೆ, ಗುಣಮಟ್ಟ ಕಾಯ್ದುಕೊಳ್ಳಬೇಕು. ಮಾಡಿದ ಕೆಲಸ ಶಾಶ್ವತವಾಗಿರಬೇಕು. ಒಂದೊಮ್ಮೆ ಕಳಪೆ ಕಾಮಗಾರಿ ನಡೆದರೆ ಸಂಬಂಧಿತ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಪೂರೈಕೆ ಮಾಡಿರುವ ವಿಜ್ಞಾನ ಕಿಟ್ ತಲುಪಿದೆಯೇ, ಅದರಲ್ಲಿ ಎಲ್ಲ ಪರಿಕರಗಳೂ ಇವೆಯೇ ಮತ್ತು ಬಳಕೆ ಆಗುತ್ತಿದೆಯೇ ಎಂಬ ಬಗ್ಗೆ ಮಾಹಿತಿ ತರಿಸಿಕೊಂಡು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News