×
Ad

ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ ಆರ್ ಗವಾಯಿ ಪ್ರಮಾಣ ವಚನ ಸ್ವೀಕಾರ

Update: 2025-05-14 10:43 IST

ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಮೇ 14, 2025 ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಚಿತ್ರ. PHOTO: X/@ANI

ಹೊಸದಿಲ್ಲಿ: ನ್ಯಾ.ಭೂಷಣ ರಾಮಕೃಷ್ಣ ಗವಾಯಿ (64) ಅವರು ಬುಧವಾರ ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ಭಾರತದ 52ನೇ ಮುಖ್ಯ ನ್ಯಾಯಾಧೀಶ(ಸಿಜೆಐ)ರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣವಚನವನ್ನು ಸ್ವೀಕರಿಸಿದರು. ನ್ಯಾ.ಗವಾಯಿ ಅವರು ದೇಶದ ಮೊದಲ ಬೌದ್ಧ ಹಾಗೂ 2007ರಿಂದ 2010ರವರೆಗೆ ಈ ಪ್ರತಿಷ್ಠಿತ ಹುದ್ದೆಯಲ್ಲಿದ್ದ ಕೆ.ಜಿ.ಬಾಲಕೃಷ್ಣನ್ ಅವರ ಬಳಿಕ ಎರಡನೇ ದಲಿತ ಸಿಜೆಐ ಆಗಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರದ ಬಳಿಕ ಸರ್ವೋಚ್ಚ ನ್ಯಾಯಾಲಯಕ್ಕೆ ತೆರಳಿದ ನ್ಯಾ.ಗವಾಯಿ ಅವರು ಮಹಾತ್ಮಾ ಗಾಂಧಿ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಪುಷ್ಪ ನಮನಗಳನ್ನು ಸಲ್ಲಿಸಿದರು.

ಅವರ ಪೂರ್ವಾಧಿಕಾರಿ ನ್ಯಾ.ಸಂಜೀವ ಖನ್ನಾ(65) ಅವರು ಮಂಗಳವಾರ ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

2019, ಮೇ 24ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಯನ್ನು ಪಡೆದಿದ್ದ ನ್ಯಾ.ಗವಾಯಿ ಅವರು ಆರು ತಿಂಗಳಿಗೂ ಹೆಚ್ಚಿನ ಅಧಿಕಾರಾವಧಿಯನ್ನು ಹೊಂದಿದ್ದು,ನ.23ರಂದು ನಿವೃತ್ತರಾಗಲಿದ್ದಾರೆ.

ನ್ಯಾ.ಗವಾಯಿ ಅವರು ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸೋಮವಾರ ಪತ್ರಕರ್ತರ ಗುಂಪಿನೊಂದಿಗೆ ಸಂವಾದದ ಸಂದರ್ಭದಲ್ಲಿ ನ್ಯಾ.ಗವಾಯಿ ಅವರು,‘ಬುದ್ಧಪೂರ್ಣಿಮೆಯ ಮರುದಿನವೇ ನಾನು ಪ್ರಮಾಣವಚನ ಸ್ವೀಕರಿಸುತ್ತಿರುವುದು ಕಾಕತಾಳೀಯ’ ಎಂದು ಹೇಳಿದ್ದರು.

ನ್ಯಾ.ಗವಾಯಿ ಅವರು ಸಂವಿಧಾನ ಪೀಠದ ತೀರ್ಪುಗಳು ಸೇರಿದಂತೆ ಕಾನೂನಿನ ಆಡಳಿತ ಮತ್ತು ಸಮಾನತೆಯನ್ನು ಎತ್ತಿ ಹಿಡಿಯುವ ಹಾಗೂ ನಾಗರಿಕರ ಮೂಲಭೂತ,ಮಾನವ ಮತ್ತು ಕಾನೂನು ಹಕ್ಕುಗಳನ್ನು ರಕ್ಷಿಸುವ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಸುಮಾರು 300 ತೀರ್ಪುಗಳನ್ನು ಬರೆದಿದ್ದಾರೆ.

Full View

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News