ನಂಜನಗೂಡಿನಿಂದ ಕೇರಳಕ್ಕೆ ಅಕ್ರಮ ಯೂರಿಯಾ ಸಾಗಾಟ; ರಸಗೊಬ್ಬರ ಸಮೇತ ಲಾರಿ ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು
ಚಾಮರಾಜನಗರ : ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಯುರಿಯಾ ಸಾಗಿಸುತ್ತಿದ್ದ ಪ್ರಕರಣದ ಸಂಬಂಧ ಚಾಮರಾಜನಗರ ಜಿಲ್ಲೆಗೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲೆಹೊಳೆ ಚೆಕ್ ಪೋಸ್ಟ್ ಬಳಿಯ ಕೇರಳದ ಗಡಿಯಲ್ಲಿ ಗುಂಡ್ಲುಪೇಟೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ರಸಗೊಬ್ಬರ ಸಮೇತ ಲಾರಿಯನ್ನು ವಶಪಡಿಸಿಕೊಂಡು ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ಹುಲ್ಲಹಳ್ಳಿ ರಸ್ತೆಯಲ್ಲಿರುವ ಗೋದಾಮಿನಲ್ಲಿ 800 - 900 ಚೀಲಗಳಲ್ಲಿ ಸುಮಾರು 15 ಟನ್ ಯೂರಿಯಾ ತುಂಬಿಸಿ ಒಂದು ಲಾರಿಯಲ್ಲಿ ತುಂಬಿಸಿ ಕೇರಳಕ್ಕೆ ಸಾಗಾಣೆ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆಯ ಕೃಷಿ ಅಧಿಕಾರಿಗಳು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ನೆರವಿನಿಂದ ಮೂಲೆಹೊಳೆ ರಸ್ತೆಯಲ್ಲಿನ ಕೇರಳ-ಕರ್ನಾಟಕದ ಗಡಿಯಲ್ಲಿ ವಶಕ್ಕೆ ಪಡೆದಿದ್ದರು.
ಅಧಿಕಾರಿಗಳನ್ನು ಕಂಡು ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿನು. ಆ ಬಳಿಕ ಮತ್ತೊಬ್ಬ ಚಾಲಕನ ಸಹಾಯದಿಂದ ಲಾರಿಯನ್ನು ಕರ್ನಾಟಕಕ್ಕೆ ತರಲಾಯಿತು.
ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗೋದಾಮಿನ ಮಾಲೀಕ ಸಯ್ಯದ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ನಾನು ಗೋದಾಮನ್ನು ಬಾಡಿಗೆಗೆ ನೀಡಿದ್ದಾಗಿ ಲಾರಿ ಮಾಲೀಕ ಹೇಳಿಕೆ ನೀಡಿದ್ದಾನೆ. ಚಾಲಕ ಹಾಗೂ ಲಾರಿಯ ಮಾಲೀಕನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ವಶಕ್ಕೆ ಪಡೆದ ಗೊಬ್ಬರವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ ಅರ್ಹ ಗುಣಮಟ್ಟದ್ದಾಗಿದ್ದರೆ ರೈತರಿಗೆ ವಿತರಿಸುವ ಇಲ್ಲದಿದ್ದರೆ ನಾಶಪಡಿಸಲಾಗುತ್ತದೆ ಎಂದು ಕೃಷಿ ಅಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕೃಷಿ ಅಧಿಕಾರಿ ಕಿರಣ್ ಕುಮಾರ್. ಗಣೇಶ್. ಶರಣ್ ಇದ್ದರು