ಯಾವ ತೆರೆಯಿಂದಲೂ ಮುಚ್ಚಲಾಗದ ಸೂರಿಲ್ಲದವರ ಸತ್ಯಗಳು
2011ರ ಜನಗಣತಿಯಲ್ಲೇ ವಸತಿ ರಹಿತರ ಕುರಿತು ಪರೋಕ್ಷವಾಗಿ ಒಂದು ಮಹತ್ವದ ಸುಳಿವು ಲಭ್ಯವಿತ್ತು. ಅಲ್ಲಿ, ನಗರ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳಲ್ಲಿ ವಾಸಿಸುತ್ತಿರುವ 6.8 ಕೋಟಿ ಭಾರತೀಯರನ್ನು ಪ್ರತ್ಯೇಕವಾಗಿ ಗುರುತಿಸಲಾಗಿತ್ತು. ಆದರೆ ಅವರಿಗೆ ‘ವಸತಿ ರಹಿತರು’ ಎಂಬ ಮಾನ್ಯತೆ ನೀಡಿರಲಿಲ್ಲ. ‘ನಗರ ಪ್ರದೇಶಗಳ ಕೊಳಚೆ ವಾಸಿಗಳು’ ಎಂಬದಷ್ಟೇ ಅವರಿಗೆ ನೀಡಲಾದ ಮಾನ್ಯತೆಯಾಗಿತ್ತು. ಸಾಮಾನ್ಯವಾಗಿ ಕೊಳಚೆ ಪ್ರದೇಶಗಳಲ್ಲಿ ಕಚ್ಚಾ ಶೆಡ್ಡು ಗಳಲ್ಲಿ ವಾಸಿಸುವ ಈ ಮಂದಿ ಸದಾ ಅಭದ್ರತೆಯಿಂದ ನರಳುತ್ತಿರಬೇಕಾಗುತ್ತದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಸಾಕು, ಅವರನ್ನು ಒಕ್ಕಲೆಬ್ಬಿಸಬಹುದು. ಯಾರಾದರೂ ಕುಬೇರ ಉದ್ಯಮಿಗೆ ಆ ಸ್ಥಳ ತನಗೆ ಬೇಕು ಎಂದು ಅನಿಸಿದರೆ ಸಾಕು, ಅವನ ಆಜ್ಞಾಪಾಲಕ ಅಧಿಕಾರಿಗಳು ಬುಲ್ಡೋಜರ್ಗಳನ್ನು ತಂದು ಅವರನ್ನೆಲ್ಲ ಒದ್ದೋಡಿಸಬಹುದು.
ಸಮಾಜವನ್ನು ಕಾಡುವ ದೊಡ್ಡದೊಡ್ಡ ಸಮಸ್ಯೆಗಳನ್ನು ಕಣ್ಮರೆಯಾಗಿಸುವುದಕ್ಕೆ ಹಲವು ಉಪಾಯಗಳಿವೆ:
1. ಸಮಸ್ಯೆಗಳ ಮೇಲೆ ತೆರೆ ಎಳೆದು ಬಿಡುವುದು.
2. ಜನರ ಕಣ್ಣಿಗೆ ಪಟ್ಟಿ ಕಟ್ಟಿ ಬಿಡುವುದು.
3. ಸಮಸ್ಯೆಗಳು ನಮ್ಮ ಕಣ್ಣಿಗೆ ಕಾಣಿಸದಂತೆ ನಾವು ಸ್ವತಃ ನಮ್ಮ ಕಣ್ಣುಗಳ ಮೇಲೆಯೇ ಪಟ್ಟಿಕಟ್ಟಿ ಕೊಳ್ಳುವುದು.
ದೋಚಲಿಕ್ಕಾಗಿಯೇ ಆಡಳಿತಗಾರರಾದವರು ಮತ್ತು ಅಪ್ರಾಮಾಣಿಕ ಸರಕಾರಗಳು ಜ್ವಲಂತ ಸಮಸ್ಯೆಗಳನ್ನು ಕಣ್ಮರೆಗೊಳಿಸುವುದಕ್ಕೆ ಈ ಎಲ್ಲ ಕುಖ್ಯಾತ ವಿಧಾನಗಳನ್ನು ಬಹುಕಾಲದಿಂದ ಬಳಸುತ್ತಾ ಬಂದಿವೆ. ಆದರೆ ಇಲ್ಲಿರುವ ದೊಡ್ಡ ಸಮಸ್ಯೆ ಏನೆಂದರೆ, ಪ್ರಸ್ತುತ ವಿಧಾನಗಳಿಂದ ಸಮಸ್ಯೆಗಳನ್ನು ಹೆಚ್ಚೆಂದರೆ ತಾತ್ಕಾಲಿಕವಾಗಿ ಮುಚ್ಚಿಡಬಹುದು ಅಥವಾ ಅದೃಶ್ಯಗೊಳಿಸಬಹುದೇ ಹೊರತು ಅವುಗಳನ್ನು ಬಗೆಹರಿಸಲಾಗುವುದಿಲ್ಲ. ಅವುಗಳನ್ನು ಇಲ್ಲವಾಗಿಸಲಾಗುವುದಿಲ್ಲ. ಸಮಸ್ಯೆಗಳು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವುದಕ್ಕೆ ತಮ್ಮದೇ ಆದ ದಾರಿಗಳನ್ನು ಕಂಡುಕೊಳ್ಳುತ್ತಿರುತ್ತವೆ.
ಕಳೆದ ತಿಂಗಳು ದಿಲ್ಲಿಯಲ್ಲಿ ಬ್ರಿಕ್ಸ್ ಶೃಂಗ ಸಮ್ಮೇಳನದ ವೇಳೆ ನಮ್ಮ ಸರಕಾರವು ನಮ್ಮ ದೇಶದ ಪ್ರತಿಷ್ಠೆಯನ್ನು ರಕ್ಷಿಸುವುದಕ್ಕಾಗಿ ರಾಜಧಾನಿಯ ಹಲವು ಪ್ರದೇಶಗಳ ಮೇಲೆ ತೆರೆ ಎಳೆದು ಬಿಟ್ಟಿತ್ತು. ಆಮೂಲಕ ಸರಕಾರ ಬಚ್ಚಿಡಲು ಬಯಸಿದ್ದು ಏನನ್ನು? ನಿಜವಾಗಿ ಭಾರತದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಡವರು, ಮಾತ್ರವಲ್ಲ, ಕಡು ಬಡವರು ಇದ್ದಾರೆನ್ನುವುದು ಜಗತ್ತಿಗೆ ತಿಳಿಯಬಾರದು ಎಂಬುದು ನಮ್ಮ ಸರಕಾರದ ಸದುದ್ದೇಶವಾಗಿತ್ತು. ದಿಲ್ಲಿಯಲ್ಲಿರುವ ಲಕ್ಷಾಂತರ ಮಂದಿಯ ‘ಝುಗ್ಗಿ-ಜೋಪಡಿ’ ಗಳನ್ನು ಅಂದರೆ ತೀರಾ ಪುಟ್ಟ ಗಾತ್ರದ, ಅತ್ಯಂತ ಕಳಪೆ ಗುಣಮಟ್ಟದ, ಅಸ್ಥಿರ ಕಚ್ಚಾ ಗುಡಿಸಲುಗಳನ್ನು ಪ್ರಸ್ತುತ ತೆರೆಗಳು ತಾತ್ಕಾಲಿಕವಾಗಿ, ತಕ್ಕ ಮಟ್ಟಿಗೆ ಅದೃಶ್ಯವಾಗಿಸಿದವು. ಆದರೆ ಅದೇ ವೇಳೆ, ಭಾರತದಲ್ಲಿ ಎಷ್ಟು ಮಂದಿ ನಾಗರಿಕರು ತೀರಾ ಕನಿಷ್ಠ ಮಟ್ಟದ ವಸತಿ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ ಎಂಬ ಕುತೂಹಲವನ್ನೂ ಆ ತೆರೆಗಳು ಹಲವರಲ್ಲಿ ಕೆರಳಿಸಿಬಿಟ್ಟವು.
ಈ ಹಿಂದೆ 2010ರಲ್ಲಿ ದಿಲ್ಲಿಯಲ್ಲಿ ಏಶ್ಯನ್ ಗೇಮ್ಸ್ ಅನ್ನು ಆಯೋಜಿಸಲಾಗಿದ್ದಾಗ ಜಗತ್ತಿಗೆಲ್ಲಾ ಭಾರತವು ಸುಂದರ, ಸಂಪನ್ನ ದೇಶವಾಗಿ ಕಾಣಿಸಬೇಕೆಂದು ಆಗಿನ ಸರಕಾರ ಸಂಕಲ್ಪ ಮಾಡಿತ್ತು. ಅದರ ಭಾಗವಾಗಿ, ರಾಜಧಾನಿಯಲ್ಲಿ ಬಡವರ ಗುಡಿಸಲುಗಳಿದ್ದ ಹಲವು ಪ್ರದೇಶಗಳನ್ನು ಸಂಪೂರ್ಣ ತೆರವುಗೊಳಿಸುವ ಅಮಾನುಷ ಕಾರ್ಯಾಚರಣೆ ನಡೆದಿತ್ತು. ಆ ಕಾರ್ಯಾಚರಣೆಯಲ್ಲಿ ಸುಮಾರು ಎರಡು ಲಕ್ಷ ಮಂದಿ ಬೀದಿಗೆಸೆಯಲ್ಪಟ್ಟಿದ್ದರು. ಆದರೆ ತೀವ್ರ ಸ್ವರೂಪದ ಸೌಂದರ್ಯ ಪ್ರಜ್ಞೆಯಿಂದ ಬಳಲುತ್ತಿದ್ದ ದಿಲ್ಲಿ ಆಡಳಿತವು ಪ್ರಸ್ತುತ ಬಡವರಿಗೆ ದಿಲ್ಲಿಯ ಬೀದಿಗಳಲ್ಲೂ ಬದುಕಲು ಬಿಡಲಿಲ್ಲ. ಅವರನ್ನೆಲ್ಲ ಬಲವಂತವಾಗಿ ದಿಲ್ಲಿಯಿಂದ ಹೊರಕ್ಕೆ ಸಾಗಿಸಿ ದೂರದ ಪ್ರದೇಶಗಳಲ್ಲಿರುವ ಬೀದಿಗಳಿಗೆ ಎಸೆಯಲಾಯಿತು.
ನಮ್ಮ ದೇಶದಲ್ಲಿ ಕೊನೆಯ ಜನಗಣತಿ ನಡೆದದ್ದು 2011ರಲ್ಲಿ. ನಾಗರಿಕರಿಂದ ಅವರ ಪೌರತ್ವವನ್ನು ಮತ್ತು ಮತದಾರರಿಂದ ಅವರ ಮತದಾನದ ಹಕ್ಕನ್ನು ಕಸಿದು ಕೊಳ್ಳುವುದಕ್ಕೆ ತನ್ನೆಲ್ಲ ಸಮಯ, ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಮೀಸಲಾಗಿಟ್ಟಿರುವ ನಮ್ಮ ಕೇಂದ್ರ ಸರಕಾರವು 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯನ್ನು ನಡೆಸಲೇ ಇಲ್ಲ. ಜನಗಣತಿ ಎಂಬುದು ಕೇವಲ ದೇಶದ ಜನಸಂಖ್ಯೆ ಎಷ್ಟೆಂಬುದನ್ನು ತಿಳಿಯುವ ಚಟುವಟಿಕೆ ಮಾತ್ರ ಆಗಿರುವುದಿಲ್ಲ. ಅದು ವಿವಿಧ ಆಯಾಮಗಳಿಂದ, ಬೇರೆಬೇರೆ ರಂಗಗಳಲ್ಲಿ ಸಮಾಜ ಮತ್ತು ಜನತೆಯ ಸಮಕಾಲೀನ ಪರಿಸ್ಥಿತಿ ಹೇಗಿದೆ ಎಂಬುದನ್ನು ನಿಖರವಾಗಿ ಅಳೆಯುವ ಉಪಾಧಿಯಾಗಿರುತ್ತದೆ. ಜನಗಣತಿಯ ಮೂಲಕ ಲಭ್ಯವಾಗುವ ಮಾಹಿತಿಗಳು ವಿವಿಧ ಕ್ಷೇತ್ರಗಳಲ್ಲಿ ಸರಕಾರೀ ಧೋರಣೆಗಳ ಹಾಗೂ ಪ್ರಾಶಸ್ತ್ಯಗಳ ನಿರ್ಧಾರಕ್ಕೆ ಮತ್ತು ದೇಶದ ಸಂಪನ್ಮೂಲಗಳು ಎಲ್ಲಿ, ಯಾವ ಪ್ರಮಾಣದಲ್ಲಿ ವ್ಯಯವಾಗಬೇಕು ಎಂಬುದನ್ನು ತೀರ್ಮಾನಿಸುವುದಕ್ಕೆ ಮಾರ್ಗದರ್ಶಿಯಾಗಿರುತ್ತದೆ. ಆದರೆ ನಮ್ಮ ದುರಂತವೇನೆಂದರೆ ನಮ್ಮನ್ನು ಆಳುತ್ತಿರುವವರು ಮಾಹಿತಿಯನ್ನು ದ್ವೇಷಿಸುತ್ತಾರೆ. ಸುಳ್ಳುಗಳನ್ನೇ ಏಣಿಯಾಗಿ ಬಳಸಿ ಗದ್ದುಗೆ ಏರಿದ ಇವರು, ಆ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕೂ ಸುಳ್ಳುಗಳನ್ನೇ ಅವಲಂಬಿಸಿದ್ದಾರೆ. ಯಾವುದೇ ಕಹಿಸತ್ಯ ಜನರಿಗೆ ಕಾಣಿಸದಂತೆ ಅಂತಹ ಎಲ್ಲ ಸತ್ಯಗಳನ್ನು ಅಡಗಿಸಿಡುವುದು ಮತ್ತು ಜನರಿಗೆ ಪ್ರತಿದಿನ ಸಿಹಿಸುಳ್ಳುಗಳ ಉಚಿತ ಭೋಜನ ಬಡಿಸುವುದು ಇದುವೇ ಅವರ ನಿತ್ಯ ಕಾಯಕವಾಗಿದೆ. ಜನಗಣತಿ ನಡೆಸದಿರುವುದು ಕೂಡಾ ಇದೇ ಧೋರಣೆಯ ಭಾಗ ಎಂಬುದು ವ್ಯಕ್ತ.
ಭಾರತದಲ್ಲಿ ವಸತಿ ರಹಿತರ ಸಂಖ್ಯೆ ಎಷ್ಟು?
ಇದೊಂದು ಮಹತ್ವದ ಪ್ರಶ್ನೆ. ಆದರೆ ಭಾರತದಲ್ಲಿ ಈ ಪ್ರಶ್ನೆಗೆ ಸಿಗುವ ಉತ್ತರಗಳೆಲ್ಲಾ ಹುಚ್ಚು ಹಿಡಿಸುವಷ್ಟು ಅಸ್ಪಷ್ಟ ಹಾಗೂ ಗೊಂದಲಮಯವಾಗಿವೆ. ಗೊಂದಲದ ಸರಣಿ ‘ವಸತಿರಹಿತರು’ ಎಂಬ ಪದದ ವ್ಯಾಖ್ಯಾನದಿಂದ ಆರಂಭವಾಗುತ್ತದೆ.
2011ರ ಜನಗಣತಿ ಪ್ರಕಾರ ಭಾರತದಲ್ಲಿ ವಸತಿ ರಹಿತರ ಸಂಖ್ಯೆ ಕೇವಲ 17.7 ಲಕ್ಷ ಮಾತ್ರ. ಅಂದರೆ ದೇಶದ ಜನಸಂಖ್ಯೆಯ ಶೇ.0.15 ಭಾಗ ಮಾತ್ರ ವಸತಿ ರಹಿತರದ್ದು. ಅವರಲ್ಲಿ ಶೇ. 52 ಮಂದಿ ನಗರವಾಸಿಗಳು ಮತ್ತು ಉಳಿದವರು ಗ್ರಾಮವಾಸಿಗಳು. ಎಂತಹ ಪರಮ ಸಂಪನ್ನ ಸನ್ನಿವೇಶವಿದು!
ಆದರೆ ವಸತಿರಹಿತರ ಸಂಖ್ಯೆ ಇಷ್ಟು ಸಣ್ಣದಾಗಿ ಕಾಣಿಸುವುದಕ್ಕೆ, ಜನಗಣತಿ ನಡೆಸಿದವರು ‘ವಸತಿರಹಿತರು’ ಎಂಬ ಪದಕ್ಕೆ ನೀಡಿದ ತೀರಾ ಸಂಕುಚಿತ ಹಾಗೂ ವಂಚಕ ವ್ಯಾಖ್ಯಾನವೇ ಕಾರಣವಾಗಿತ್ತು. ಅವರ ಪ್ರಕಾರ ‘ಜನಗಣತಿಯಲ್ಲಿ ಲೆಕ್ಕಕ್ಕೆ ಸಿಗಬಹುದಾದ ಮನೆ ಇರುವವರು’ ಯಾರೂ ವಸತಿ ರಹಿತರಲ್ಲ. ಜನಗಣತಿಯಲ್ಲಿ ವಸತಿರಹಿತರು ಎಂದು ಪರಿಗಣಿಸುವುದು ಬೀದಿಬದಿಯಲ್ಲಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ, ಮುಚ್ಚಿದ ಅಂಗಡಿಗಳ ಜಗಲಿಯಲ್ಲಿ, ಪಾಳುಬಿದ್ದ ಕಟ್ಟಡಗಳಲ್ಲಿ, ಆರಾಧನಾಲಯಗಳ ಆಸುಪಾಸಿನಲ್ಲಿ ಅಥವಾ ಸೇತುವೆಗಳಡಿಯಲ್ಲಿ ಮಲಗುವವರನ್ನು ಮಾತ್ರ. ಕೊಳಚೆಪ್ರದೇಶಗಳಲ್ಲಿ ವಾಸಿಸುವವರನ್ನು ಅವರು ವಸತಿ ರಹಿತರೆಂದು ಅಂಗೀಕರಿಸುವುದಿಲ್ಲ. ಆದ್ದರಿಂದ ವಸತಿ ರಹಿತ ಭಾರತೀಯರ ನೈಜ ಜನಸಂಖ್ಯೆಯನ್ನು ಅರಿಯಲು ನಾವು ಹಲವು ಸರಕಾರೇತರ ಮೂಲಗಳನ್ನು ಅವಲಂಬಿಸಬೇಕಾಗುತ್ತದೆ.
2011ರ ಜನಗಣತಿಯಲ್ಲಿ, ರಾಜಧಾನಿ ದಿಲ್ಲಿಯೊಳಗೆ 46,724 ಮಂದಿಯನ್ನು ‘ವಸತಿರಹಿತರು’ ಎಂದು ಗುರುತಿಸಲಾಗಿತ್ತು. ಆದರೆ ಹಲವು ಖಾಸಗಿ ಸೇವಾ ಸಂಸ್ಥೆಗಳು (ಉದಾ: ಶಹರೀ ಅಧಿಕಾರ್ ಮಂಚ್) ಜನಗಣತಿಯಲ್ಲಿ ಮೂಡಿದ ಪ್ರಸ್ತುತ ಸಂಖ್ಯೆಯನ್ನು ತಿರಸ್ಕರಿಸಿ, ರಾಜಧಾನಿಯಲ್ಲಿ 3 ಲಕ್ಷಕ್ಕಿಂತ ಅಧಿಕ ವಸತಿರಹಿತರಿದ್ದಾರೆಂದು ಪ್ರತಿಪಾದಿಸಿದ್ದವು.
2022 ಡಿಸೆಂಬರ್ ತಿಂಗಳಲ್ಲಿ ದೇಶದ ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನೆತ್ತಲಾಯಿತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರನ್ನುದ್ದೇಶಿ ‘‘ದೇಶದ ನಗರ ಪ್ರದೇಶಗಳಲ್ಲಿರುವ ಕೊಳಚೆ ಪ್ರದೇಶಗಳ ಜನಸಂಖ್ಯೆ ಎಷ್ಟು ಎಂಬ ಕುರಿತು ಸರಕಾರವು ಯಾವುದಾದರೂ ಸಮೀಕ್ಷೆ ಅಥವಾ ಅಧ್ಯಯನವನ್ನು ನಡೆಸಿದೆಯೇ? ನಡೆಸಿದ್ದರೆ ಅದರ ವಿವರಗಳನ್ನು ತಿಳಿಸಿ. ಈ ಕುರಿತು ಸವಿಸ್ತಾರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಸರಕಾರಕ್ಕೆ ಇನ್ನೆಷ್ಟು ಸಮಯಬೇಕು?’’ ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕುತ್ತರವಾಗಿ ಅಂದಿನ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವರಾಗಿದ್ದ ಕೌಶಲ್ ಕಿಶೋರ್ ಅವರು ಯಾವುದೇ ಹೊಸ ಮಾಹಿತಿಯನ್ನು ಒದಗಿಸುವ ಬದಲು ಅಲ್ಪ ಸ್ವಲ್ಪ ತಿದ್ದುಪಡಿ ಮಾಡಿ, 2011ರ ಜನಗಣತಿಯಲ್ಲಿ ಒದಗಿಸಲಾಗಿದ್ದ ಮಾಹಿತಿಯನ್ನೇ ಹಂಚಿಕೊಂಡರು. ಭಾರತದಲ್ಲಿ ಒಟ್ಟು 1.39 ಕೋಟಿ ಕುಟುಂಬಗಳು, ಅಂದರೆ 6.54 ಕೋಟಿ ಮಂದಿ (ಜನಸಂಖ್ಯೆಯ ಶೇ.5.4 ಭಾಗ) ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ನಗರಗಳ ಜನಸಂಖ್ಯೆಯನ್ನು ಮಾಪಕವಾಗಿಟ್ಟುನೋಡಿದರೆ, ಅದರ ಶೇ.17.4 ಭಾಗವು ಕೊಳಚೆವಾಸಿಗಳನ್ನೊಳಗೊಂಡಿದೆ ಎಂಬುದು ಅವರ ಉತ್ತರದ ಸಾರಾಂಶವಾಗಿತ್ತು.
ಈ ಉತ್ತರದಲ್ಲಿ ಅಡಗಿರುವ ಒಂದು ಕಳವಳಕಾರಿ ಅಂಶವೇನೆಂದರೆ, 2011ರ ಜನಗಣತಿ ನಡೆದು 11 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ನಗರೀಕರಣ ಮತ್ತು ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪ್ರಕ್ರಿಯೆ ತೀವ್ರವಾಗಿ ಹೆಚ್ಚಿದೆ. ಈ ದೃಷ್ಟಿಯಿಂದ ಕೊಳಚೆವಾಸಿಗಳ ಸಂಖ್ಯೆಯಲ್ಲಿ ಕೂಡಾ ದೊಡ್ಡ ಪ್ರಮಾಣದ ವೃದ್ಧಿ ಆಗಿರುವುದು ಖಚಿತ. ಆದರೆ ಸರಕಾರ ಮಾತ್ರ, ಪ್ರಸ್ತುತ ಕೊಳಚೆವಾಸಿಗಳಿಗೆ ವಸತಿ ಒದಗಿಸುವುದಂತಿರಲಿ, ಅವರ ಸ್ಥಿತಿಗತಿಗಳ ಕುರಿತು ಗಂಭೀರ ಅಧ್ಯಯನ ನಡೆಸುವುದರಲ್ಲೂ ವಿಫಲವಾಗಿದೆ.
ನಿಜವಾಗಿ, 2011ರ ಜನಗಣತಿಯಲ್ಲೇ ವಸತಿ ರಹಿತರ ಕುರಿತು ಪರೋಕ್ಷವಾಗಿ ಒಂದು ಮಹತ್ವದ ಸುಳಿವು ಲಭ್ಯವಿತ್ತು. ಅಲ್ಲಿ, ನಗರ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳಲ್ಲಿ ವಾಸಿಸುತ್ತಿರುವ 6.8 ಕೋಟಿ ಭಾರತೀಯರನ್ನು ಪ್ರತ್ಯೇಕವಾಗಿ ಗುರುತಿಸಲಾಗಿತ್ತು. ಆದರೆ ಅವರಿಗೆ ‘ವಸತಿ ರಹಿತರು’ ಎಂಬ ಮಾನ್ಯತೆ ನೀಡಿರಲಿಲ್ಲ. ‘ನಗರ ಪ್ರದೇಶಗಳ ಕೊಳಚೆ ವಾಸಿಗಳು’ ಎಂಬದಷ್ಟೇ ಅವರಿಗೆ ನೀಡಲಾದ ಮಾನ್ಯತೆಯಾಗಿತ್ತು. ಸಾಮಾನ್ಯವಾಗಿ ಕೊಳಚೆ ಪ್ರದೇಶಗಳಲ್ಲಿ ಕಚ್ಚಾ ಶೆಡ್ಡುಗಳಲ್ಲಿ ವಾಸಿಸುವ ಈ ಮಂದಿ ಸದಾ ಅಭದ್ರತೆಯಿಂದ ನರಳುತ್ತಿರಬೇಕಾಗುತ್ತದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಸಾಕು, ಅವರನ್ನು ಒಕ್ಕಲೆಬ್ಬಿಸಬಹುದು. ಯಾರಾದರೂ ಕುಬೇರ ಉದ್ಯಮಿಗೆ ಆ ಸ್ಥಳ ತನಗೆ ಬೇಕು ಎಂದು ಅನಿಸಿದರೆ ಸಾಕು, ಅವನ ಆಜ್ಞಾಪಾಲಕ ಅಧಿಕಾರಿಗಳು ಬುಲ್ಡೋಜರ್ಗಳನ್ನು ತಂದು ಅವರನ್ನೆಲ್ಲ ಒದ್ದೋಡಿಸಬಹುದು. ಪ್ರಸ್ತುತ ನಿವಾಸಿಗಳ ನಿವಾಸವೇ ಅನಧಿಕೃತವಾದ್ದರಿಂದ ಅವರಿಗೆ ‘ಅಕ್ರಮ ನಿವಾಸಿ’ಗಳೆಂಬ ಹಣೆಪಟ್ಟಿ ನೀಡಲಾಗುತ್ತದೆ. ಅವರ ಮನೆಗಳನ್ನು ಖಾಲಿಮಾಡಿಸುವುದಕ್ಕೆ ಅಥವಾ ನೆಲಸಮಗೊಳಿಸುವುದಕ್ಕೆ ಯಾವುದೇ ಕೋರ್ಟ್ ಆದೇಶ ಅಥವಾ ಮುಂಗಡ ನೋಟಿಸ್ ಅಗತ್ಯವಿಲ್ಲ. ಅವರಿಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲ. ಯಾವುದೇ ಪರಿಹಾರಕ್ಕೆ ಆಸ್ಪದವಿಲ್ಲ. ಕುಬೇರರು, ರಿಯಲ್ ಎಸ್ಟೇಟ್ ಮಾಫಿಯಾಗಳು, ಪುಢಾರಿಗಳು ಅಥವಾ ಭ್ರಷ್ಟ ಅಧಿಕಾರಿಗಳು ಮನಸ್ಸು ಮಾಡಿದರೆ, ಮರುಕ್ಷಣವೇ ಪ್ರಸ್ತುತ ಅಕ್ರಮವಾಸಿಗಳೆಲ್ಲಾ ನಿರ್ವಸಿತರಾಗಿ ಅಥವಾ ವಸತಿರಹಿತರಾಗಿ ಬೀದಿಪಾಲಾಗುತ್ತಾರೆ.
ದೇಶದಲ್ಲಿಂದು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಇಂತಹ ಕೊಳಚೆವಾಸಿಗಳಿದ್ದಾರೆ. ಅವರಲ್ಲಿ ಅನೇಕರ ಪಾಲಿಗೆ ವಸತಿ ಎಂದರೆ ನೂರರಿಂದ ಇನ್ನೂರು ಚದರ ಅಡಿ ವಿಸ್ತಾರವಿರುವ ಒಂದು ಶೆಡ್ಡು. ಅದುವೇ ಅವರು ಮತ್ತವರ ಮಡದಿ ಮಕ್ಕಳ ವಸತಿ. ಮನೆಯೊಳಗೆ ಒಂದು ತೆರೆ ಎಳೆದರೆ, ಅದರ ಆಚೆಗಿನ ಭಾಗವೇ ‘ಕೋಣೆ’ಯಾಗಿ ಬಿಡುತ್ತದೆ. ಹೆಚ್ಚಿನ ಮನೆಗಳಿಗೆ ಪಕ್ಕಾ ಗೋಡೆಯಾಗಲಿ ಚಪ್ಪರವಾಗಲಿ ಇಲ್ಲ. ಆ ಮನೆಗಳ ಪ್ಲಾಸ್ಟಿಕ್, ಟಿನ್ ಅಥವಾ ಸಿಮೆಂಟ್ ಶೀಟ್ನಿಂದ ನಿರ್ಮಿತ ಗೋಡೆ ಅಥವಾ ಚಪ್ಪರವೇ ಭಾಗಶಃ ಪಕ್ಕದ ಮನೆಯವನ ಗೋಡೆ ಮತ್ತು ಚಪ್ಪರವೂ ಆಗಿರುತ್ತದೆ. ಶುದ್ಧ ಕುಡಿಯುವ ನೀರು ಅಕ್ಕಪಕ್ಕದಲ್ಲೆಲ್ಲೂ ಲಭ್ಯವಿಲ್ಲ. ಶೌಚಾಲಯವಿಲ್ಲ. ಭದ್ರ ಬಾಗಿಲು ಇಲ್ಲ. ಕಿಟಕಿಗಳಿಲ್ಲ. ಅಧಿಕೃತ ವಿದ್ಯುತ್ ವ್ಯವಸ್ಥೆ ಇಲ್ಲ. ನಿಜವಾಗಿ ಅಲ್ಲಿ ಅವರ ಅಸ್ತಿತ್ವ ಸಹಿತ ಯಾವುದೂ ಅಧಿಕೃತವಲ್ಲ. ಎಲ್ಲವೂ ಅನಧಿಕೃತ. ಯಾವುದೇ ಸರಕಾರಿ ಸವಲತ್ತು ಪಡೆಯುವುದಕ್ಕೆ ಬೇಕಾದ ದಾಖಲೆ ಪತ್ರಗಳಿಲ್ಲ. ಭಿಕ್ಷಾಟನೆ, ವೇಶ್ಯಾವಾಟಿಕೆ, ಅಮಲು ಪದಾರ್ಥಗಳ ದಂಧೆ ಮತ್ತಿತರ ಹಲವು ಅಪರಾಧಗಳಿಗೆ ಕೊಳಚೆ ಪ್ರದೇಶಗಳು ಪೋಷಣಾಕೇಂದ್ರಗಳಾಗಿ ಬಿಡುತ್ತವೆ. ಇಲ್ಲಿಯ ದಾರಿದ್ರ್ಯ ಮತ್ತು ಅಸಹಾಯಕತೆಯು ಇಲ್ಲಿಯ ಮಕ್ಕಳನ್ನು ಮತ್ತು ಯುವಕರನ್ನು ಅಪರಾಧ ಜಗತ್ತಿಗೆ ನೂಕುತ್ತವೆ.
2012ರಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (NSSO) ಮೂಲಕ ದೇಶದಲ್ಲಿರುವ ಕೊಳಚೆ ಪ್ರದೇಶಗಳ ಕುರಿತು ಒಂದು ಸಮೀಕ್ಷೆ ನಡೆಸಿತ್ತು. ಅದರಿಂದ ತಿಳಿದು ಬಂದ ಕೆಲವು ಮುಖ್ಯ ಅಂಶಗಳು ಹೀಗಿವೆ:
* ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 33,510 ಕೊಳಚೆ ಪ್ರದೇಶಗಳಿವೆ. ಆ ಪೈಕಿ 13,761 ಕೊಳಚೆ ಪ್ರದೇಶಗಳನ್ನು ಅಧಿಸೂಚಿತ (notified) ಎಂದು ಹಾಗೂ 19,749 ಕೊಳಚೆ ಪ್ರದೇಶಗಳನ್ನು ಅಧಿಸೂಚಿತವಲ್ಲದ (non-notified) ಪ್ರದೇಶಗಳೆಂದು ಗುರುತಿಸಲಾಗಿದೆ.
* ಸುಮಾರು 88 ಲಕ್ಷ ಕುಟುಂಬಗಳು ಈ ಪ್ರದೇಶಗಳಲ್ಲಿ ಬದುಕುತ್ತಿವೆ. (ಸೂಚಿತ ಪ್ರದೇಶಗಳಲ್ಲಿ 56 ಲಕ್ಷ ಹಾಗೂ ಸೂಚಿತವಲ್ಲದ ಪ್ರದೇಶಗಳ್ಲಲಿ 32 ಲಕ್ಷ ಕುಟುಂಬಗಳು)
* ಒಂದೊಂದು ಕೊಳಚೆ ಪ್ರದೇಶದಲ್ಲಿ ಸರಾಸರಿ 263 ಕುಟುಂಬಗಳು ನೆಲೆಸಿರುತ್ತವೆ. ಅಧಿಸೂಚಿತ ಕೊಳಚೆಗಳಲ್ಲಿ ಒಂದು ಪ್ರದೇಶದಲ್ಲಿ ಸರಾಸರಿ 404 ಕುಟುಂಬಗಳು ನೆಲೆಸಿರುತ್ತವೆ.
* ದೇಶದಲ್ಲಿ ಅತ್ಯಧಿಕ ಕೊಳಚೆ ಪ್ರದೇಶಗಳು ಮಹಾರಾಷ್ಟ್ರದಲ್ಲಿ (433) ಕಂಡು ಬಂದಿದ್ದವು. ಎರಡನೇ ಸ್ಥಾನದಲ್ಲಿ ಕರ್ನಾಟಕ (392) ಮತ್ತು ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶ (352) ಇತ್ತು.
* ಅಖಿಲ ಭಾರತ ಮಟ್ಟದಲ್ಲಿ ಶೇ.44 ಕೊಳಚೆ ಪ್ರದೇಶಗಳು ಖಾಸಗಿ ಭೂಮಿಯ್ಲಲಿದ್ದವು.
* ಕೊಳಚೆ ಪ್ರದೇಶಗಳಲ್ಲಿನ ಶೇ.60 ಮನೆಗಳು ಪಕ್ಕಾ ರಚನೆಗಳ ರೂಪದಲ್ಲಿದ್ದವು.
* ಅಖಿಲ ಭಾರತ ಮಟ್ಟದ್ಲಲಿ ಶೇ.71 ಕೊಳಚೆ ವಾಸಿಗಳು ಕುಡಿಯುವ ನೀರಿಗಾಗಿ ನಳ್ಳಿನೀರನ್ನು ಅವಲಂಬಿಸಿದ್ದರು.
* ಶೇ.90ಕ್ಕಿಂತ ಹೆಚ್ಚಿನ ಕೊಳಚೆ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಇದೆ.
* ಶೇ.31 ಕೊಳಚೆ ಪ್ರದೇಶಗಳಲ್ಲಿ ಯಾವುದೇ ಬಗೆಯ ಶೌಚಾಲಯ ವ್ಯವಸ್ಥೆ ಇಲ್ಲ.
* ಶೇ.31 ಕೊಳಚೆ ಪ್ರದೇಶಗಳಲ್ಲಿ ಯಾವುದೇ ಒಳಚರಂಡಿ ವ್ಯವಸ್ಥೆ ಇಲ್ಲ.
ಶೇ. 27 ಕೊಳಚೆ ಪ್ರದೇಶಗಳಲ್ಲಿ ಕಸ ವಿಲೇವಾರಿಗೆ ಯಾವುದೇ ಏರ್ಪಾಟು ಇಲ್ಲ.
* ಶೇ.32 ಕೊಳಚೆ ಪ್ರದೇಶಗಳಲ್ಲಿ ಮಳೆ ನೀರು ಹರಿದುಹೋಗುವುದಕ್ಕೆ ಯಾವುದೇ ಏರ್ಪಾಟು ಲಭ್ಯವಿಲ್ಲ.
* ಕೊಳಚೆ ಪ್ರದೇಶಗಳ ಶೇ.24 ಮಂದಿ ಮಾತ್ರ ಯಾವುದೇ ಸರಕಾರಿ ಕಲ್ಯಾಣ ಯೋಜನೆಯ ಫಲಾನುಭವಿಗಳಾಗಿದ್ದರು.
ಪ್ರಸ್ತುತ NSSO ವರದಿ ಹೊರಬಂದಾಗ ಅದರಲ್ಲಿರುವ ಗೊಂದಲ, ಮಾಹಿತಿಗಳ ಅನುಮಾನಾಸ್ಪದ ಮೂಲಗಳು, ಅಸ್ಪಷ್ಟತೆ ಮತ್ತು ವಿರೋಧಾಭಾಸಗಳು ವ್ಯಾಪಕ ಟೀಕೆಗೆ ಗುರಿಯಾಗಿದ್ದವು. ಮುಖ್ಯವಾಗಿ ಆ ಸಮೀಕ್ಷಾ ವರದಿಯಲ್ಲಿ ನೀಡಲಾದ ಹಲವು ಮಾಹಿತಿಗಳು 2011ರ ಜನಗಣತಿಯಲ್ಲಿ ನೀಡಲಾದ ಮಾಹಿತಿಗಳಿಗಿಂತ ಭಿನ್ನವಾಗಿದ್ದವು. ಹಾಗೆಯೇ ವಿವಿಧ ಪಾರಿಭಾಷಿಕ ಪದಗಳ ವ್ಯಾಖ್ಯಾನದಲ್ಲೂ ಅಸ್ಪಷ್ಟತೆ ಇತ್ತು. ಇಂತಿಷ್ಟು ಮನೆಗಳು ಪಕ್ಕಾ ರಚನೆಗಳ ರೂಪದಲ್ಲಿವೆ ಎನ್ನುವಾಗ ಪಕ್ಕಾ ರಚನೆ ಅಂದರೇನು? ಮತ್ತು ಆ ಮನೆಗಳ ಚದರ ವಿಸ್ತೀರ್ಣ ಎಷ್ಟು ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ. ಇಂತಿಷ್ಟು ಕುಟುಂಬಗಳು ಒಂದು ಕೊಳಚೆ ಪ್ರದೇಶದಲ್ಲಿವೆ ಎನ್ನುವಾಗ, ಅಂತಹ ಪ್ರತಿಯೊಂದು ಕುಟುಂಬದಲ್ಲಿ ಸರಾಸರಿ ಎಷ್ಟು ಸದಸ್ಯರಿದ್ದಾರೆ ಎಂಬ ಕುರಿತು ಯಾವುದೇ ಸುಳಿವಿಲ್ಲ. ಇಂತಿಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇದೆ ಎನ್ನುವಾಗ, ಆ ಸಂಪರ್ಕ ಅಧಿಕೃತವೇ ಎಂಬುದನ್ನು ತಿಳಿಸಲಾಗಿಲ್ಲ. ಒಟ್ಟಿನಲ್ಲಿ ಸರಕಾರವು ವಸತಿ ರಹಿತರು ಮತ್ತು ಕೊಳಚೆವಾಸಿಗಳ ವಿಷಯದಲ್ಲಿ ಪರ್ಯಾಪ್ತ ಮಾಹಿತಿ ಒದಗಿಸುವುದಕ್ಕಿಂತ ಹೆಚ್ಚಾಗಿ ಮಾಹಿತಿಗಳನ್ನು ಅಡಗಿಸಿಡುವುದರಲ್ಲಿ ಹೆಚ್ಚು ಆಸಕ್ತವಾಗಿದೆ ಎಂಬ ಬಗ್ಗೆ ಈಗ ಯಾರಿಗೂ ಯಾವುದೇ ಸಂಶಯ ಉಳಿದಿಲ್ಲ. ಬ್ರಿಕ್ಸ್ ಶೃಂಗದ ವೇಳೆ ದಿಲ್ಲಿಯ ಕೆಲವು ಬೀದಿಬದಿಗಳಲ್ಲಿ ಕಂಡುಬಂದ ತೆರೆಯೊಂದೇ ಸರಕಾರ ಎಳೆದ ತೆರೆಯಾಗಿರಲಿಲ್ಲ. ಸರಕಾರವು ಬೇರೆ ಅನೇಕ ಕಡೆಯೂ, ವಿಶೇಷವಾಗಿ ಮಾಹಿತಿಗಳ ಲೋಕದಲ್ಲಿ ಹಲವು ದಟ್ಟ ತೆರೆಗಳನ್ನು ಕಟ್ಟಿದೆ.
ಭಾರತದ ಸಂವಿಧಾನದಲ್ಲಿ ವಸತಿಯ ಹಕ್ಕನ್ನು ಸ್ಪಷ್ಟವಾಗಿ ಮೂಲಭೂತ ಹಕ್ಕೆಂದು ಗುರುತಿಸಲಾಗಿಲ್ಲ. ಆದರೆ ಕಳೆದ ವರ್ಷ ಸೆಪ್ಟಂಬರ್ 12ರಂದು ನ್ಯಾ. ಜೆ.ಬಿ. ಪರ್ದಿವಾಲ ಮತ್ತು ನ್ಯಾ.ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ನೀಡಿದ ಒಂದು ಐತಿಹಾಸಿಕ ತೀರ್ಪಿನಲ್ಲಿ ವಸತಿಯ ಹಕ್ಕನ್ನು ಭಾರತೀಯ ನಾಗರಿಕರ ಮೂಲಭೂತ ಹಕ್ಕೆಂದು ಅಂಗೀಕರಿಸಲಾಯಿತು. ಪೀಠವು ಪ್ರತಿಯೊಬ್ಬ ನಾಗರಿಕನಿಗೆ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಭದ್ರತೆಯನ್ನು ಒದಗಿಸುವ, ಸಂವಿಧಾನದ 21ನೇ ಪರಿಚ್ಛೇದವನ್ನೇ ಆಧಾರವಾಗಿಟ್ಟು, ಅದರ ಸ್ವಾಭಾವಿಕ ವಿಸ್ತರಣೆಯ ರೂಪದಲ್ಲಿ ವಸತಿಯ ಹಕ್ಕನ್ನು ನಾಗರಿಕರ ಮೂಲಭೂತ ಹಕ್ಕು ಎಂದು ಅಂಗೀಕರಿಸಿದೆ. ಈ ತೀರ್ಪನ್ನು ಗಣನೆಗೆ ತೆಗೆದುಕೊಂಡಾದರೂ ಸರಕಾರಗಳು, ವಸತಿರಹಿತ ನಾಗರಿಕರ ಕುರಿತಾದ ತನ್ನ ಉಪೇಕ್ಷೆಯ ಧೋರಣೆಯನ್ನು ಕೈಬಿಟ್ಟು, ಎಲ್ಲ ನಾಗರಿಕರಿಗೆ ಅವರ ಮೂಲಭೂತ ಹಕ್ಕಾಗಿರುವ ವಸತಿಯನ್ನು ಒದಗಿಸಬೇಕಾದ ತನ್ನ ಕರ್ತವ್ಯದತ್ತ ಗಂಭೀರವಾಗಿ ಗಮನ ಹರಿಸಬೇಕು.
ಸುಪ್ರೀಂ ಕೋರ್ಟ್ನ ಪ್ರಸ್ತುತ ತೀರ್ಪು ಕೇವಲ ಭಾವನಾತ್ಮಕ ಕಾರಣಗಳಿಂದ ಪ್ರೇರಿತವಾಗಿರಲಿಲ್ಲ. ಬದುಕಿನ ಹಕ್ಕು ಮತ್ತು ವಸತಿ ಸೌಲಭ್ಯದ ನಡುವೆ ಎಷ್ಟು ಗಾಢ ಸಂಬಂಧ ಇದೆ ಎಂಬುದನ್ನು ಹಲವು ಅಧ್ಯಯನ ಮತ್ತು ಸಂಶೋಧನೆಗಳು ಸಾಬೀತು ಪಡಿಸಿವೆ. ಸೂಕ್ತ ವಸತಿ ಸೌಲಭ್ಯ ಲಭ್ಯ ಇರುವವರಿಗೆ ಹೋಲಿಸಿದರೆ ಅಂತಹ ಸೌಲಭ್ಯ ಇಲ್ಲದವರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ತುಂಬಾ ಅಧಿಕವಿರುತ್ತದೆ. ಮಳೆ, ಚಳಿ, ಬಿಸಿಲು, ಬಿರುಗಾಳಿ, ಹರಡು ರೋಗ ಇತ್ಯಾದಿಗಳು ಅವರ ಸ್ವಾಸ್ಥ್ಯಕ್ಕೆ ಅಪಾಯ ಒಡ್ಡುತ್ತಲೇ ಇರುತ್ತವೆ. ಅದರಿಂದಾಗಿ ವಸತಿರಹಿತರ ಮತ್ತು ವಿಶೇಷವಾಗಿ ವಸತಿರಹಿತ ಮಹಿಳೆಯರು ಮತ್ತು ಮಕ್ಕಳ ಜೀವಿತಾವಧಿಯು ಇತರರಿಗಿಂತ ಗಣನೀಯವಾಗಿ ಕಡಿಮೆ ಇರುತ್ತದೆ. ‘ನ್ಯಾಷನಲ್ ಫೋರಂ ಫಾರ್ ಹೌಸಿಂಗ್’ ಸಂಸ್ಥೆಯು ನಡೆಸಿದ ಅಧ್ಯಯನದಿಂದ ತಿಳಿದು ಬಂದ ಪ್ರಕಾರ ರಾಜಧಾನಿ ದಿಲ್ಲಿಯಲ್ಲಿ 2024 ನವೆಂಬರ್ 15 ಮತ್ತು 2025 ಜನವರಿ 10ರ ನಡುವೆ 474 ಮಂದಿ ನಿರ್ವಸಿತರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಸಂಸ್ಥೆಯ ಪ್ರಕಾರ 2024 ಜನವರಿ ತಿಂಗಳಲ್ಲಿ ದಿಲ್ಲಿಯೊಳಗೆ ಪ್ರತಿದಿನ ಸರಾಸರಿ 8 ಎಂಟು ಮಂದಿ ವಸತಿರಹಿತರು ಸಾವನ್ನಪ್ಪಿದ್ದಾರೆ.
2023 ನವೆಂಬರ್ನಲ್ಲಿ ಯುಎಸ್ನ ಚಿಕಾಗೋ ಪ್ರಾಂತ್ಯದಲ್ಲಿರುವ ‘ಬೆಕ್ಕರ್ ಫ್ರೈಡ್ ಮಾನ್ ಇನ್ಸ್ಟಿಟ್ಯೂಟ್’ ಅಮೆರಿಕದ ವಸತಿ ರಹಿತ ನಾಗರಿಕರ ಕುರಿತಂತೆ ತನ್ನ ಅಧ್ಯಯನವೊಂದನ್ನು ಪ್ರಕಟಿಸಿತು. ಪ್ರಸ್ತುತ ಅಧ್ಯಯನದಿಂದ ತಿಳಿದು ಬಂದಂತೆ 40ರ ಹರೆಯದ ಒಬ್ಬ ಸರಾಸರಿ ವಸತಿ ವಾಸಿಗೆ ಹೋಲಿಸಿದರೆ ಅದೇ ವಯಸ್ಸಿನ ಒಬ್ಬ ವಸತಿರಹಿತ ವ್ಯಕ್ತಿಯು ಮರಣಹೊಂದುವ ಸಾಧ್ಯತೆಯು 3.5 ಪಟ್ಟು ಅಧಿಕವಿರುತ್ತದೆ.
2024 ಅಕ್ಟೋಬರ್ ತಿಂಗಳಲ್ಲಿ ಯುಎಸ್ನ ಟೆನೆಸ್ಸಿ ಪ್ರಾಂತದಲ್ಲಿ NHCSC (National Health Care for the Homeless Council) ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಂತೆ ಯುಎಸ್ನಲ್ಲಿ ಒಬ್ಬ ಸರಾಸರಿ ವಸತಿವಾಸಿ ಮಹಿಳೆಗೆ ಹೋಲಿಸಿದರೆ ಅದೇ ವಯಸ್ಸಿನ ಒಬ್ಬ ಸರಾಸರಿ ವಸತಿ ರಹಿತ ಮಹಿಳೆಯು ಸಾಯುವ ಸಾಧ್ಯತೆಯು 3.3 ಪಟ್ಟು ಅಧಿಕವಿದೆ.
‘ಯುಎನ್ ಹ್ಯಾಬಿಟ್ಯಾಟ್’ ವಿಶ್ವ ಸಂಸ್ಥೆಯ ಅಧೀನ ಸಂಸ್ಥೆಯಾಗಿದ್ದು ಜಗತ್ತಿನ ವಿವಿಧೆಡೆ ಇರುವ ವಸತಿ ಸಮಸ್ಯೆಯ ಕುರಿತು ಸವಿಸ್ತಾರ ಅಧ್ಯಯನ ನಡೆಸುತ್ತಿರುತ್ತದೆ. ಪ್ರಸ್ತುತ ಸಂಸ್ಥೆಯು ‘ಕೊಳಚೆವಾಸಿಗಳು’ ಎಂಬ ಪದಕ್ಕೆ ನೀಡಿರುವ ವ್ಯಾಖ್ಯಾನ ಮತ್ತು ಅದಕ್ಕೆ ನಿರ್ಧರಿಸಿರುವ ಐದು ಮಾನದಂಡಗಳು ಹೀಗಿವೆ:
* ಶುದ್ಧ ಕುಡಿಯುವ ನೀರು ಲಭ್ಯವಿಲ್ಲ
* ಸೂಕ್ತ ಶೌಚಾಲಯ ವ್ಯವಸ್ಥೆ ಲಭ್ಯವಿಲ್ಲ
* ಪರ್ಯಾಪ್ತ ಸ್ಥಳ ಲಭ್ಯವಿಲ್ಲ
* ಹೆಚ್ಚುಕಾಲ ಬಾಳಿಕೆ ಬರುವ ಕಟ್ಟಡ ಲಭ್ಯವಿಲ್ಲ
* ಇಂತಿಷ್ಟು ಕಾಲ ವಾಸಿಸಬಹುದೆಂಬ ಸ್ಪಷ್ಟ ಭರವಸೆ ಲಭ್ಯವಿಲ್ಲ.
24 ಕೋಟಿ ಕೊಳಚೆವಾಸಿ ಭಾರತೀಯರು
ಯುಎನ್ ಹ್ಯಾಬಿಟ್ಯಾಟ್ ಸಂಸ್ಥೆಯ ಪ್ರಕಾರ, ಪ್ರಸ್ತುತ ಮಾನದಂಡಗಳ ಆಧಾರದಲ್ಲಿ, 2020ರಲ್ಲಿ ಭಾರತದಲ್ಲಿ ಕೊಳಚೆವಾಸಿಗಳ ಸಂಖ್ಯೆ 23.68 ಕೋಟಿಯಷ್ಟಿತ್ತು. ಈ ಸಂಸ್ಥೆಯ ಪ್ರಕಾರ ಇದು ಹೊಸ ಬೆಳವಣಿಗೆಯೇನೂ ಅಲ್ಲ. ವರ್ಷ 2000ದಲ್ಲೇ ಭಾರತದಲ್ಲಿ ಕೊಳಚೆವಾಸಿಗಳ ಸಂಖ್ಯೆ 16.11 ಕೋಟಿಯಷ್ಟಿತ್ತು. ಭಾರತವನ್ನು ಬಲ್ಲವರಿಗೆ ಈ ಸಂಖ್ಯೆಯಲ್ಲಿ ಅತಿಶಯವೇನೂ ಕಾಣಿಸುವುದಿಲ್ಲ.
ಇದು ಎಲ್ಲ ಭಾರತೀಯರ ನಿದ್ದೆಗೆಡಿಸಬೇಕಾದ ಮತ್ತು ವಿಶೇಷವಾಗಿ ಸರಕಾರವನ್ನು ಗಾಢ ಚಿಂತೆಗೆ ತಳ್ಳಬೇಕಾದ ದೈತ್ಯ ಸಮಸ್ಯೆ. ಯಾವುದೇ ಸಮಸ್ಯೆಯ ಅಸ್ತಿತ್ವವನ್ನು ಗುರುತಿಸಿ, ಅದರ ಸ್ವರೂಪವನ್ನು ಮತ್ತು ಅದರ ಆಳ, ವಿಸ್ತಾರಗಳನ್ನು ಅರಿಯುವುದು ಆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಈ ಹಿಂದೆಯೂ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡವರಿಗೆ ಮನೆಗಳನ್ನು ಒದಗಿಸುವುದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಸಮಸ್ಯೆಯ ಬೃಹತ್ ಸ್ವರೂಪದ ಮುಂದೆ ಇಂತಹ ಯೋಜನೆಗಳೆಲ್ಲಾ ತೀರಾ ಕುಬ್ಜವೆಂಬುದು ಸಾಬೀತಾಗಿವೆ. ಯಾವುದೇ ಸಮಸ್ಯೆಯ ಪರಿಹಾರವು ಪರಿಣಾಮಕಾರಿಯಾಗಬೇಕಿದ್ದರೆ ಅದು ಸಮಸ್ಯೆಯ ಅನುಪಾತಕ್ಕನುಸಾರವಾಗಿರಬೇಕು. ಕೋಟಿಗಟ್ಟಲೆ ಮಂದಿ ವಸತಿಗಾಗಿ ಸಾಲಲ್ಲಿ ನಿಂತಿರುವಲ್ಲಿ ಜುಜುಬಿ ಯೋಜನೆಗಳು ಕೇವಲ ತೇಪೆ ಕೆಲಸ ಮಾಡುತ್ತವೆಯೇ ಹೊರತು ಅವರ ಅಗತ್ಯಗಳನ್ನು ಈಡೇರಿಸುವುದಿಲ್ಲ. ಈ ದೃಷ್ಟಿಯಿಂದ ನಮ್ಮ ಕೇಂದ್ರ ಸರಕಾರವು ದೇಶದಲ್ಲಿ ಸೂಕ್ತ ವಸತಿ ವ್ಯವಸ್ಥೆಯಿಂದ ವಂಚಿತರಾಗಿರುವವರು ಯಾರು ಎಂಬುದಕ್ಕೆ ಸ್ಪಷ್ಟ ಹಾಗೂ ನಿಖರವಾದ ವ್ಯಾಖ್ಯಾನ ಮತ್ತು ಮಾನದಂಡಗಳನ್ನು ನಿರ್ಧರಿಸಬೇಕು. ವಸತಿರಹಿತರ ಮತ್ತು ಕೊಳಚೆವಾಸಿಗಳ ಕುರಿತು ಸವಿಸ್ತಾರವಾದ ಮಾಹಿತಿಗಳನ್ನು ಸಂಗ್ರಹಿಸಬೇಕು. ಆ ಬಳಿಕ ವಿವಿಧ ರಾಜ್ಯ ಸರಕಾರಗಳ ಜೊತೆ ಸಮಾಲೋಚಿಸಿ ಎಲ್ಲರ ಸಹಯೋಗದೊಂದಿಗೆ ಮತ್ತು ಕನಿಷ್ಠ ಕಾಲಮಿತಿಯೊಳಗೆ ಎಲ್ಲ ವಸತಿರಹಿತರಿಗೆ ಯೋಗ್ಯ ವಸತಿ ವ್ಯವಸ್ಥೆಯನ್ನು ಒದಗಿಸುವುದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಬೇಕು. ಈ ವಿಷಯದಲ್ಲಿ ಸಂಪನ್ಮೂಲಗಳ ಇತಿಮಿತಿಗಳು ಒಂದು ದೊಡ್ಡ ಸವಾಲು ಎಂಬುದು ನಿಜ. ಆದರೆ ಸರಕಾರ ಮನಸ್ಸು ಮಾಡಿದರೆ, ವಸತಿಯಂತಹ ಮೂಲಭೂತ ಅಗತ್ಯದ ಈಡೇರಿಕೆಗಾಗಿ ಸಂಪನ್ಮೂಲಗಳನ್ನು ಸಂಘಟಿಸುವುದು ಅಸಾಧ್ಯವೇನಲ್ಲ.
ವಸತಿ ರಹಿತರಿಗೆ ವಸತಿ ಒದಗಿಸುವುದೆಂದರೆ ಸರಕಾರವೇ ಮನೆಗಳನ್ನು ಕಟ್ಟಿಸಿ ಉಚಿತವಾಗಿ ಹಂಚುವುದೆಂದು ಖಂಡಿತ ಅರ್ಥವಲ್ಲ. ಅದು ಹಲವು ಪರಿಹಾರಗಳ ಪೈಕಿ ಒಂದು ಪರಿಹಾರ ಮಾತ್ರ. ತೀರಾ ನಿರ್ಗತಿಕ ವರ್ಗಕ್ಕೆ ಆ ಪರಿಹಾರವನ್ನು ಒದಗಿಸಬಹುದು. ಅದೇ ವೇಳೆ ಸೀಮಿತ ಪಾಲುದಾರಿಕೆ, ಸೀಮಿತ ಬಾಡಿಗೆ, ಕೈಗೆಟಕುವ ಸುಲಭ ಕಂತುಗಳು, ಕ್ರಮೇಣ ಮಾಲಕತ್ವ ಇತ್ಯಾದಿ ಅನೇಕಾರು ಆಯ್ಕೆಗಳನ್ನು ಸರಕಾರವು ಬಳಸಬಹುದು. ಈ ರಂಗದಲ್ಲಿ ಜಗತ್ತಿನಲ್ಲಿ ಹಲವೆಡೆ ನಡೆದಿರುವ ಹಲವು ಯಶಸ್ವಿ ಪ್ರಯೋಗಗಳಿಂದ ನಾವು ಧಾರಾಳ ಮಾರ್ಗದರ್ಶನ ಪಡೆಯಬಹುದು. ಸರಕಾರ ಮನಸ್ಸು ಮಾಡಿದರೆ ಖಾಸಗಿ ಕ್ಷೇತ್ರದ ಹಲವರನ್ನು ಈ ಕಾರ್ಯದಲ್ಲಿ ಸಹಭಾಗಿಗಳಾಗಿ ಮಾಡಬಹುದು. ಈ ರಂಗದಲ್ಲಿ ಗಂಭೀರ ಆಸಕ್ತಿ ಇರುವ ಹಲವು ಜಾಗತಿಕ ಹಾಗೂ ಅಂತರ್ರಾಷ್ಟ್ರೀಯ ಸಂಸ್ಥೆಗಳಿವೆ. ದೇಶದ ಒಳಗೂ ಹೊರಗೂ ಬಡವರಿಗೆ ವಸತಿ ಒದಗಿಸುವುದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಅನೇಕಾರು ಸರಕಾರೇತರ ಸೇವಾ ಸಂಸ್ಥೆಗಳಿವೆ. ನಮ್ಮ ದೇಶದಲ್ಲಿ ಗೃಹ ನಿರ್ಮಾಣ ಉದ್ಯಮದಲ್ಲಿ ಖಾಸಗಿ ರಂಗದ ಹೂಡಿಕೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಮೀರಿದೆ. ಸರಕಾರವು ಬಯಸಿದರೆ, ಶ್ರೀಮಂತರ ಅಗತ್ಯಗಳ ಈಡೇರಿಕೆಗೆ ಮುಡಿಪಾಗಿರುವ ಈ ಖಾಸಗಿ ಕ್ಷೇತ್ರವನ್ನೇ, ಬಡವರ ಅಗತ್ಯಗಳ ಈಡೇರಿಕೆಗಾಗಿ ಬಳಸಬಹುದು. ಶ್ರೀಮಂತರಿಗಾಗಿ ದುಬಾರಿ, ವಿಲಾಸಿ ಕಟ್ಟಡಗಳನ್ನು ಕಟ್ಟಿ ಲಕ್ಷಾಂತರ ಕೋಟಿ ರೂ. ಲಾಭ ದೋಚುತ್ತಿರುವ ಕಂಪೆನಿಗಳೇ ಸಮಾಜದ ಬಡವರ ವಸತಿಯ ಅಗತ್ಯವನ್ನು ಈಡೇರಿಸುವ ನಿಟ್ಟಿನಲ್ಲಿ ತಮ್ಮ ಪಾಲನ್ನು ನೀಡುವಂತೆ ನಿರ್ಬಂಧಿಸುವ ಕಾನೂನು, ನಿಯಮಗಳನ್ನು ಸರಕಾರವು ರಚಿಸಬಹುದು. ಕಾರ್ಪೊರೇಟ್ ಜಗತ್ತು ತನಗೆ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ ಎಂಬುದನ್ನು ಒಪ್ಪುತ್ತದೆ. ಆದರೆ ಕಾರ್ಪೊರೇಟ್ ಗಳ ಸಾಮಾಜಿಕ ಜವಾಬ್ದಾರಿಗಳೇನು ಮತ್ತು ಅದಕ್ಕಾಗಿ ಅವುಗಳು ತಮ್ಮ ಲಾಭದ ಎಷ್ಟು ಅಂಶವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂಬುದನ್ನು ಸರಕಾರಗಳೇ ಸ್ಪಷ್ಟವಾಗಿ ನಿರ್ಧರಿಸಬೇಕು. ತನ್ನ ಪ್ರಾಶಸ್ತ್ಯಗಳು ಸರಕಾರದ ಮುಂದೆ ಸ್ಪಷ್ಟವಾಗಿದ್ದರೆ, ಅವುಗಳನ್ನು ತಮ್ಮ ಪ್ರಾಶಸ್ತ್ಯಗಳಾಗಿ ಅಂಗೀಕರಿಸುವಂತೆ ಕಾರ್ಪೊರೇಟ್ಗಳ ಮನವೊಲಿಸಲು ಅಥವಾ ಅವುಗಳನ್ನು ನಿರ್ಬಂಧಿಸಲು ಸರಕಾರಕ್ಕೆ ಖಂಡಿತ ಸಾಧ್ಯವಿದೆ.
ಇದೆಲ್ಲಾ ಸಾಧ್ಯವಾಗಬೇಕಿದ್ದರೆ, ಕೋಟಿಗಟ್ಟಲೆ ಭಾರತೀಯರನ್ನು ಕಾಡುತ್ತಿರುವ ವಸತಿ ಸಮಸ್ಯೆ ಭಾರತೀಯ ಸಮಾಜದಲ್ಲಿ ಒಂದು ಗಂಭೀರ ಚರ್ಚಾ ವಿಷಯವಾಗಬೇಕು. ಆ ಚರ್ಚೆ ವಸತಿ ತಮ್ಮ ಮೂಲಭೂತ ಹಕ್ಕು ಎಂಬ ಪ್ರಜ್ಞೆಯನ್ನು ಜನತೆಯಲ್ಲಿ ಮೂಡುವುದಕ್ಕೆ ಕಾರಣವಾಗಬೇಕು. ಅವರು ಗಟ್ಟಿ ಧ್ವನಿಯಲ್ಲಿ ತಮ್ಮ ಹಕ್ಕನ್ನು ಕೇಳುವುದಕ್ಕೆ ಪ್ರೇರಕವಾಗಬೇಕು. ಈ ಜಾಗೃತಿ, ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ತಮ್ಮ ಪ್ರಾಶಸ್ತ್ಯಗಳ ಪಟ್ಟಿಯಲ್ಲಿ ವಸತಿಗೆ ಆದ್ಯತೆಯ ಸ್ಥಾನ ನೀಡುವುದನ್ನು ಅನಿವಾರ್ಯವಾಗಿಸಬೇಕು.