×
Ad

ಕ್ರೀಡಾರಂಗದಲ್ಲಿ ನಾವೇಕೆ ಅದೃಶ್ಯರು?

Update: 2026-06-25 10:43 IST

ನಮಗೆ ಕ್ರೀಡಾ ಕ್ಷೇತ್ರದಲ್ಲಿ ಹೀನಾಯ ಸ್ಥಿತಿ ಒದಗಿರುವುದೇಕೆ? ಇದು ನಿಜವಾಗಿ ನಮ್ಮ ದೇಶದ ಸರಕಾರ, ಪಕ್ಷಗಳು ಮತ್ತು ಸ್ವಾಭಿಮಾನಿ ಪ್ರಜೆಗಳೆಲ್ಲಾ ದೊಡ್ಡ ಪ್ರಮಾಣದಲ್ಲಿ ಗಂಭೀರ ಚರ್ಚೆ, ಸಂವಾದ ಮತ್ತು ವಿಮರ್ಶಾತ್ಮಕ ಆತ್ಮಾವಲೋಕನ ನಡೆಸಬೇಕಾಗಿದ್ದ ವಿಷಯವಾಗಿತ್ತು. ಆದರೆ ಬೀದಿ, ಕೇರಿಗಳಲ್ಲೆಲ್ಲ ದೇಶಭಕ್ತಿಯನ್ನು ಮೆರೆಯುತ್ತಿರುವ ನಮಗೆ ಇಂತಹ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳುವುದಕ್ಕೆ ಪುರುಸೊತ್ತೆಲ್ಲಿದೆ?

ನಾವು ಭಾರತೀಯರು ಮಾನಸಿಕವಾಗಿಯೂ ದೈಹಿಕವಾಗಿಯೂ ಎಷ್ಟು ಗಟ್ಟಿಗರೆಂಬುದನ್ನು ಜಗತ್ತಿಗೆಲ್ಲಾ ತೋರಿಸುವುದಕ್ಕೆ ಫಿಫಾ ವಿಶ್ವಕಪ್ ಒಂದು ಅದ್ಭುತ ವೇದಿಕೆಯಾಗಬಹುದಿತ್ತು. ಏಕೆಂದರೆ ಅದು, ಜಗತ್ತಿನೆಲ್ಲೆಡೆಯ 500 ಕೋಟಿಗೂ ಹೆಚ್ಚು ಮಂದಿ, ವಾರಗಟ್ಟಲೆ ವೀಕ್ಷಿಸುವ, ತಿಂಗಳುಗಟ್ಟಲೆ ಚರ್ಚಿಸುವ ಒಂದು ಜನಪ್ರಿಯ ಪಂದ್ಯಾವಳಿ. ಆದರೆ ದುರಂತ ನೋಡಿ. ಫಿಫಾದ ವೀಕ್ಷಕರಿಗೆ ಕ್ರೀಡಾಂಗಣದಲ್ಲಾಗಲಿ, ತಮ್ಮ ಸ್ಕ್ರೀನ್‌ಗಳಲ್ಲಾಗಲಿ ವಿಶ್ವಗುರು ಭಾರತದ ಆಟಗಾರರು ಎಲ್ಲೂ ಕಾಣಿಸುವುದೇ ಇಲ್ಲ. ಅಲ್ಲಿ ಭಾರತದ ಮಹಿಮೆಯನ್ನು ಅಥವಾ ಕನಿಷ್ಠ ಪಕ್ಷ ಉಪಸ್ಥಿತಿಯನ್ನು ಕಾಣಬಯಸಿದವರೆಲ್ಲಾ ಸಂಪೂರ್ಣ ನಿರಾಶರಾಗಿದ್ದಾರೆ. ಅಲ್ಲಿ ನಮಗಿರುವುದು ಹೆಚ್ಚೆಂದರೆ ವೀಕ್ಷಕರ ಪಾತ್ರ ಮಾತ್ರ. ಜಾಗತಿಕ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ. 18ರಷ್ಟಿದೆ. ಆದರೆ ಫುಟ್ಬಾಲ್ ವಿಶ್ವಕಪ್‌ನಲ್ಲಿ ನಮ್ಮ ಪಾಲು ಶೂನ್ಯ! ಜಾಗತಿಕ ಮಟ್ಟದಲ್ಲಿ ನಮ್ಮ ಪುರುಷರ ಫುಟ್ಬಾಲ್ ತಂಡದ ರ್ಯಾಂಕಿಂಗ್ 138. ಈ ದುರಂತಕ್ಕೇನು ಕಾರಣ?

ಕ್ರೀಡಾಜಗತ್ತಿನಲ್ಲಿ ಭಾರತೀಯರ ಪ್ರತಿಭೆಯ ಕಳವಳಕಾರಿ ಇತಿಮಿತಿಗಳಿಗೆ ಫಿಫಾ ಮಾತ್ರವಲ್ಲ, ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ವೇದಿಕೆ ಕೂಡಾ ಸಾಕ್ಷಿಯಾಗಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 40 ಚಿನ್ನ ಸಹಿತ ಒಟ್ಟು 126 ಪದಕಗಳನ್ನು ಪಡೆದು ಯುಎಸ್‌ಎ ಪ್ರಥಮ ಸ್ಥಾನ ಗಿಟ್ಟಿಸಿ, ತಾನೇ ವಿಶ್ವಗುರು ಎನ್ನುತ್ತಾ ಮೆರೆಯಿತು. 40 ಚಿನ್ನದ ಪದಕಗಳನ್ನು ಗಳಿಸಿದ ಚೀನಾ, ಚಿನ್ನದ ವಿಷಯದಲ್ಲಿ ತಾನು ಯುಎಸ್‌ಎಗೆ ಸಮಾನ ಎಂದು ಸಾಬೀತು ಪಡಿಸಿತು. ಆದರೂ ಅದು ಗಳಿಸಿದ ಒಟ್ಟು ಪದಕಗಳ ಸಂಖ್ಯೆ (91) ಕಡಿಮೆಯಾಗಿದ್ದರಿಂದ ಎರಡನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ನಮ್ಮ ದೇಶ ಮಾತ್ರ, ಕೇವಲ 0 ಚಿನ್ನ, 1 ಬೆಳ್ಳಿ ಮತ್ತು 5 ಕಂಚಿನ ಪದಕ ಗಳಿಸಿ, 71ನೇ ಸ್ಥಾನದಲ್ಲಿ ಕೊಳೆಯಬೇಕಾಯಿತು.

ಏಶ್ಯ ಖಂಡವನ್ನು ಮಾತ್ರ ಜಗತ್ತೆಂದು ಪರಿಗಣಿಸಿದರೆ ನಮಗೆ ನೆಮ್ಮದಿ ಪಡುವುದಕ್ಕೆ ಒಂದಷ್ಟು ಅವಕಾಶವಿದೆ. ಕಳೆದ ಬಾರಿಯ ಏಶ್ಯನ್ ಗೇಮ್ಸ್‌ನಲ್ಲಿ ನಮಗೆ 4ನೇ ಸ್ಥಾನ ಪ್ರಾಪ್ತವಾಗಿತ್ತು. ಅಲ್ಲಿ ನಾವು 28 ಚಿನ್ನದ ಪದಕಗಳ ಸಹಿತ ಒಟ್ಟು 107 ಪದಕಗಳನ್ನು ಗಳಿಸಿದ್ದೆವು. ದುಃಖದ ಸಂಗತಿಯೇನೆಂದರೆ ಗಾತ್ರ, ಜನಸಂಖ್ಯೆ ಇತ್ಯಾದಿ ದೃಷ್ಟಿಯಿಂದ ನಮಗೆ ಹೋಲಿಸಿದರೆ ತೀರಾ ಪುಟಾಣಿ ದೇಶಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ಗಳಿಸಿದ್ದವು. ಇಲ್ಲೂ ನಮಗೆ ತೀವ್ರ ಮುಜುಗರ ಉಂಟುಮಾಡುವ ಮಾಹಿತಿ ಏನೆಂದರೆ ಇದೇ ಏಶ್ಯನ್ ಗೇಮ್ಸ್ ನಲ್ಲಿ ನಮ್ಮ ನೆರೆಯ ಚೀನಾ ದೇಶವು 201 ಚಿನ್ನದ ಪದಕಗಳ ಸಹಿತ ಒಟ್ಟು 383 ಪದಕಗಳನ್ನು ಪಡೆದು ಪ್ರಸ್ತುತ ಏಶ್ಯನ್ ಗೇಮ್ಸ್‌ನಲ್ಲಿ ಪ್ರಥಮ ಸ್ಥಾನ ಗಳಿಸಿತ್ತು.

ಪಾಕಿಸ್ತಾನವನ್ನು ನಾವೆಷ್ಟು ದ್ವೇಷಿಸಿದರೂ ಇಂತಹ ಸನ್ನಿವೇಶಗಳಲ್ಲಿ ನಮ್ಮ ಹಿರಿಮೆ ಮೆರೆಯುವುದಕ್ಕೆ ಅವರು ನಮಗೆ ತುಂಬಾ ನೆರವಾಗುತ್ತಾರೆ. ಏಶ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನಕ್ಕೆ ಸಿಕ್ಕಿದ್ದು ಜುಜುಬಿ 31ನೇ ಸ್ಥಾನ. ಫಿಫಾ ವಿಶ್ವಕಪ್‌ನಲ್ಲಿ ನಮಗೆ 138ನೇ ರಾಂಕ್ ದಕ್ಕಿದ್ದರೆ, ಅಲ್ಲಿ ಪಾಕಿಸ್ತಾನಕ್ಕೆ ದಕ್ಕಿದ ರ್ಯಾಂಕ್ ಜುಜುಬಿ 198. ಈ ರೀತಿ, ನಮ್ಮ ಸಾಧನೆ ಎಷ್ಟು ಕಳಪೆಯಾದರೇನಂತೆ, ಪಾಕಿಸ್ತಾನದವರಿಗಿಂತ ನಾವು ಬಹಳಷ್ಟು ಮುಂದಿದ್ದೇವೆ ಎಂಬ ಅಂಶವು ನಮಗೆ ತುಂಬಾ ನೆಮ್ಮದಿ ನೀಡುತ್ತದೆ. ಆದರೆ ಯಾರಾದರೂ ನಮ್ಮ ಸಾಧನೆಗಳನ್ನು ಚೀನಾ ಎಂಬ ನಮ್ಮ ಇನ್ನೊಂದು ನೆರೆ ದೇಶದ ಸಾಧನೆಗಳೊಂದಿಗೆ ಹೋಲಿಸಲು ಹೊರಟರೆ ಮಾತ್ರ ನಮಗೆ ಹುಚ್ಚು ಹಿಡಿಯುತ್ತದೆ. ನಮ್ಮ ದುರದೃಷ್ಟಕ್ಕೆ, ಕಳೆದ ಒಲಿಂಪಿಕ್ಸ್‌ನಲ್ಲಿ ಮಾತ್ರ ಪಾಕಿಸ್ತಾನ ಕೂಡಾ ನಮಗೆ ಕೈಕೊಟ್ಟಿತು. ಅಲ್ಲಿ ನಾವು 71ನೇ ರ್ಯಾಂಕ್ ಪಡೆದರೆ ಪಾಕಿಸ್ತಾನದವರು 62ನೇ ರಾಂಕ್ ಪಡೆದು ನಮಗಿಂತ ಮುಂದೆ ಸಾಗಿ ಬಿಟ್ಟರು. ನಾವು 1 ಬೆಳ್ಳಿ ಮತ್ತು 5 ಕಂಚಿನ ಪದಕ ಗೆದ್ದರೆ ಅವರು ಅದೇನನ್ನೂ ಗೆಲ್ಲದೆ ಕೇವಲ 1 ಚಿನ್ನ ಪಡೆದು ರ್ಯಾಂಕಿಂಗ್‌ನಲ್ಲಿ ನಮಗಿಂತ ಹಲವು ಸ್ಥಾನ ಎತ್ತರಕ್ಕೆ ಏರಿಬಿಟ್ಟರು.

ನಮಗೆ ಕ್ರೀಡಾ ಕ್ಷೇತ್ರದಲ್ಲಿ ಇಂತಹ ಹೀನಾಯ ಸ್ಥಿತಿ ಒದಗಿರುವುದೇಕೆ? ಇದು ನಿಜವಾಗಿ ನಮ್ಮ ದೇಶದ ಸರಕಾರ, ಪಕ್ಷಗಳು ಮತ್ತು ಸ್ವಾಭಿಮಾನಿ ಪ್ರಜೆಗಳೆಲ್ಲಾ ದೊಡ್ಡ ಪ್ರಮಾಣದಲ್ಲಿ ಗಂಭೀರ ಚರ್ಚೆ, ಸಂವಾದ ಮತ್ತು ವಿಮರ್ಶಾತ್ಮಕ ಆತ್ಮಾವಲೋಕನ ನಡೆಸಬೇಕಾಗಿದ್ದ ವಿಷಯವಾಗಿತ್ತು. ಆದರೆ ಬೀದಿ, ಕೇರಿಗಳಲ್ಲೆಲ್ಲ ದೇಶಭಕ್ತಿಯನ್ನು ಮೆರೆಯುತ್ತಿರುವ ನಮಗೆ ಇಂತಹ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳುವುದಕ್ಕೆ ಪುರುಸೊತ್ತೆಲ್ಲಿದೆ? ಕೋಟ್ಯಂತರ ಭಾರತೀಯರು (ಒಂದು ಅಂದಾಜಿನಂತೆ 70 ಕೋಟಿಗೂ ಅಧಿಕ ಭಾರತೀಯರು) ಫಿಫಾ ಪಂದ್ಯಗಳನ್ನು ವೀಕ್ಷಿಸುತ್ತಿದ್ದರೂ, ಅಲ್ಲಿ ನಮ್ಮ ಉಪಸ್ಥಿತಿ ಯಾಕಿಲ್ಲ? ಜಾಗತಿಕ ಮಟ್ಟದಲ್ಲಿ 500 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ 2024ರ ಒಲಿಂಪಿಕ್ಸ್ ನಲ್ಲಿ ನಮ್ಮ ಕಳಪೆ ಸಾಧನೆಗೆ ಯಾರು ಹೊಣೆ? ಇಂತಹ, ಅಪಾರ ಮಹತ್ವದ ಪ್ರಶ್ನೆ ಗಳನ್ನೂ ಯಾರೂ ಕೇಳುತ್ತಿಲ್ಲ. ನಮ್ಮಲ್ಲಿ ದೇಶಪ್ರೇಮ ಮತ್ತು ನಮ್ಮ ನೆಲದ ಮೇಲಿನ ಅಭಿಮಾನ ಕುಗ್ಗಿರುವುದು ಈ ಸನ್ನಿವೇಶಕ್ಕೆ ಕಾರಣವೇ ಅಥವಾ ನಾವು ನಮಗೆ ಅಗತ್ಯವೇ ಇಲ್ಲದ ತೀರಾ ಅಸಂಗತ ಚರ್ಚೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವುದು ಕಾರಣವೇ?

ಸೋಲುಗಳು, ವೈಫಲ್ಯಗಳು ಮತ್ತು ಸವಾಲುಗಳನ್ನು ಎದುರಿಸುವುದಕ್ಕೆ ಹಲವಾರು ಮಾರ್ಗಗಳಿರುತ್ತವೆ. ನಮ್ಮಲ್ಲಿ ಕೆಲವರು, ನಾವು ನಮ್ಮ ಸೋಲುಗಳತ್ತ ಕಣ್ಣೆತ್ತಿ ನೋಡುವುದಕ್ಕೂ ತಯಾರಿಲ್ಲ ಎಂದು ತೀರ್ಮಾನಿಸಿದಂತಿದೆ. ಟೆನ್ಷನ್ ಆಗುತ್ತದೆಂಬ ಒಂದೇ ಕಾರಣಕ್ಕೆ ಕ್ರೀಡಾರಂಗದಲ್ಲಿನ ನಮ್ಮ ಸೋಲುಗಳ ಬಗ್ಗೆ ಚರ್ಚಿಸುವುದಕ್ಕೆ ನಾವು ಹಿಂಜರಿಯುತ್ತೇವೆ.

ಕೆಲವು ಯುವ ವಲಯಗಳಲ್ಲಂತೂ ಈ ನಮ್ಮ ಸೋಲುಗಳ ವೃತ್ತಾಂತವು ವ್ಯಂಗ್ಯ, ವಿಡಂಬನೆ ಮತ್ತು ತಮಾಷೆಯ ವಸ್ತುವಾಗಿ ಬಿಟ್ಟಿದೆ. ಉದಾ:

* ನಮಗೆ ಚಿನ್ನದ ಪದಕ ಸಿಗಬಾರದೆಂಬ ದುರುದ್ದೇಶದಿಂದಲೇ ಒಲಿಂಪಿಕ್ಸ್ ಸಮಿತಿಯವರು ಕ್ರಿಕೆಟ್, ಕಬಡ್ಡಿ ಮುಂತಾದ ನಮ್ಮ ನೆಚ್ಚಿನ ಆಟಗಳನ್ನು ಒಲಿಂಪಿಕ್ಸ್ ನಿಂದ ಹೊರಗಿಟ್ಟಿದ್ದಾರೆ.

* ಒಲಿಂಪಿಕ್ಸ್‌ನಲ್ಲಿ ಭಾಷಣ ಸ್ಪರ್ಧೆ ಇದ್ದಿದ್ದರೆ, ನಮ್ಮಲ್ಲಿ ಭಾಷಣ ಪ್ರವೀಣರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅವಕಾಶ ನೀಡಿದ್ದರೆ ಖಂಡಿತ ಚಿನ್ನ, ಬೆಳ್ಳಿ, ಕಂಚು ಎಲ್ಲವನ್ನೂ ಅವರೇ ಬಾಚಿಕೊಳ್ಳುತ್ತಿದ್ದರು. ಒಲಿಂಪಿಕ್ಸ್ ಸಂಘಟಕರು ಭಾಷಣ ಸ್ಪರ್ಧೆಗೆ ಅವಕಾಶ ನಿರಾಕರಿಸಿರುವುದಕ್ಕೆ ಇದೇ ಕಾರಣವಿರಬಹುದು.

* ಒಲಿಂಪಿಕ್ಸ್‌ನಲ್ಲಿ ಫ್ಯಾಶನ್ ಸ್ಪರ್ಧೆ ಇದ್ದಿದ್ದರೆ, ದುಬಾರಿ ಫ್ಯಾಶನ್ ಡಿಸೈನರ್ ಗಳಿಂದ ವಿಲಾಸಿ ಉಡುಗೆಗಳ ವಿನ್ಯಾಸ ಮಾಡಿಸಿ, ಗಂಟೆಗೊಮ್ಮೆ ಬಟ್ಟೆ ಬದಲಾಯಿಸಿ ಕ್ಯಾಮರಾಗಳಿಗೆ ಪೋಸ್ ಕೊಟ್ಟು ನಿಲ್ಲುವ ನಮ್ಮ ಕೆಲವು ಜನಪ್ರಿಯ ನಾಯಕರು ಖಂಡಿತ ಚಿನ್ನ ಗೆಲ್ಲುತ್ತಿದ್ದರು. ಆದರೆ ಒಲಿಂಪಿಕ್ಸ್ ನವರು ಅದಕ್ಕೂ ಅವಕಾಶ ಕಲ್ಪಿಸಿಲ್ಲ.

* ಪಾನ್, ಗುಟ್ಕಾ, ಚೂಯಿಂಗ್ ಗಮ್ ಇತ್ಯಾದಿಯನ್ನು ಜಗಿದು ರಸ್ತೆಯಲ್ಲಿ ಎಷ್ಟು ದೂರಕ್ಕೆ ಉಗುಳಬಹುದು ಎಂಬ ಸ್ಪರ್ಧೆಗೂ ಒಲಿಂಪಿಕ್ಸ್ ನಲ್ಲಿ ಅವಕಾಶ ನೀಡಿಲ್ಲ..

* ಫುಟ್ಬಾಲ್ ಎಂಬುದು ತುಳಿಯುವ, ಒದೆಯುವ ಆಟ. ನಮ್ಮ ಬಳಿ ಇರುವುದು ಶತಮಾನಗಳಿಂದ ತುಳಿತ, ಒದೆತ ಇತ್ಯಾದಿ ತಿಂದ ಅನುಭವ ಮಾತ್ರ. ತುಳಿಯುವುದರಲ್ಲಿ, ಸನಾತನ ಕಾಲದಿಂದಲೂ ಪ್ರಾವೀಣ್ಯ ಇರುವ ಕೆಲವರು ನಮ್ಮಲ್ಲಿದ್ದಾರೆಂಬುದು ನಿಜ. ಆದರೆ ಅವರಿಗೆ ಕ್ರೀಡಾಂಗಣದಲ್ಲಿ ತುಳಿಯುವ ಅನುಭವ ಇಲ್ಲ. ಅವರ ಮೆರಿಟ್ ಇರುವುದು ಸಮಾಜದಲ್ಲಿ, ತಮ್ಮ ಅಕ್ಕ ಪಕ್ಕದವರನ್ನು ತುಳಿಯುವ ಕಲೆಯಲ್ಲಿ ಮಾತ್ರ. ತಲೆಗಳನ್ನು ತುಳಿಯುವ ಪ್ರತಿಭಾವಂತರ ಬಳಿ ಚೆಂಡನ್ನು ತುಳಿಯುವ ಕಲೆಯನ್ನು ನಿರೀಕ್ಷಿಸುವಂತಿಲ್ಲ.

* ನೂರು ಮೀಟರ್, ಇನ್ನೂರು ಮೀಟರ್ ಇತ್ಯಾದಿ ಹಲವಾರು ಬಗೆಯ ಓಟಗಳ ಸ್ಪರ್ಧೆಯ ಕುರಿತು ಹೇಳುವುದಾದರೆ, ಈ ಓಟಗಳೆಲ್ಲಾ ಪಲಾಯನದ ಸಂಕೇತಗಳು. ನಾವು ಸ್ಥಿರವಾಗಿ ನಿಂತು ಎಲ್ಲವನ್ನೂ ದಿಟ್ಟವಾಗಿ ಎದುರಿಸುವವರು. ಪಲಾಯನವಾದಿಗಳಲ್ಲ.

* ಲಾಂಗ್ ಜಂಪ್, ಹೈಜಂಪ್ ಮುಂತಾದ ಜಿಗಿತ ಸ್ಪರ್ಧೆಗಳಲ್ಲಿ ನಾವು ಮಿಂಚದಿರುವುದಕ್ಕೂ ಪ್ರಬಲ ಕಾರಣವಿದೆ. ಅವೆಲ್ಲಾ ಹಾರಾಟದ ಆಟಗಳು. ನಾವು ಹೋರಾಟಗಾರರು. ನಾವು ಸದಾ ಪರಸ್ಪರರ ವಿರುದ್ಧ ಹೋರಾಟದಲ್ಲಿ ನಿರತರಾಗಿರುವುದನ್ನು ಜಗತ್ತು ಕಾಣುತ್ತಲೇ ಇರುತ್ತದೆ. ಹಾರಾಟದಲ್ಲಿ ನಮಗೆ ಆಸಕ್ತಿ ಇಲ್ಲ.

ಸತ್ಯವು ಎಷ್ಟು ಕಹಿಯಾಗಿದ್ದರೂ ಅದನ್ನು ಮನಸಾರೆ ಸ್ವೀಕರಿಸಬೇಕು. ನಮಗೆ ಪ್ರಿಯವಲ್ಲದ ವಾಸ್ತವವನ್ನು ಕಣ್ಣುತೆರೆದು ನೋಡಲು ನಾವು ನಿರಾಕರಿಸಿದರೆ, ಆ ಕಹಿ ವಾಸ್ತವವು ಇನ್ನಷ್ಟು ಕಹಿಯಾಗಿ, ಕ್ರೂರವಾಗಿ, ಮತ್ತಷ್ಟು ಬೃಹತ್ ರೂಪ ತಾಳಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಕ್ರೀಡಾಕ್ಷೇತ್ರದಲ್ಲಿ ಇಂದಿನ ನಮ್ಮ ಹೀನಾಯ ಸ್ಥಿತಿಗೆ ಕಾರಣವೇನು ಎಂಬುದಾಗಲಿ ಅದಕ್ಕೆ ಪರಿಹಾರವೇನು ಎಂಬುದಾಗಲಿ ಖಂಡಿತವಾಗಿಯೂ ಚಿದಂಬರ ರಹಸ್ಯವೇನೂ ಅಲ್ಲ. ನಮ್ಮಲ್ಲಿ ಪ್ರತಿಭೆ, ಸಾಮರ್ಥ್ಯ, ಛಲ, ಉತ್ಸಾಹ, ಕೌಶಲ್ಯ, ಶ್ರಮ ಎಲ್ಲವೂ ಧಾರಾಳ ಪ್ರಮಾಣದಲ್ಲಿದೆ. ಹಾಗಿದ್ದರೂ ನಾವು ತಪ್ಪಿರುವುದೆಲ್ಲಿ? ಈ ಕುರಿತು ನಮ್ಮ ಸಮಾಜವು ದೊಡ್ಡ ಪ್ರಮಾಣದಲ್ಲಿ ಪ್ರಾಮಾಣಿಕ, ವಸ್ತು ನಿಷ್ಠ ಹಾಗೂ ವಿಮರ್ಶಾತ್ಮಕ ಚರ್ಚೆ, ಸಂವಾದ, ಸಮಾಲೋಚನೆಗಳನ್ನು ನಡೆಸಿದರೆ ಖಂಡಿತ ಉತ್ತರವೂ ಸಿಗುತ್ತದೆ, ಪರಿಹಾರವೂ ಸಿಗುತ್ತದೆ. ಫಿಫಾ, ಒಲಿಂಪಿಕ್ಸ್, ಏಶ್ಯನ್ ಗೇಮ್ಸ್ ಇತ್ಯಾದಿ ಎಲ್ಲ ವೇದಿಕೆಗಳಲ್ಲಿ ನಮ್ಮ ದೇಶದ ಪತಾಕೆ ಹಾರಿಸುವ ಅದೃಷ್ಟವೂ ನಮ್ಮದಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಂಬೂಕ

contributor

Similar News