×
Ad

ಉಪಸಭಾಪತಿ ಪ್ರಾಣೇಶ್ ಪರಿಷತ್‌ ಸದಸ್ಯತ್ವ ರದ್ದು; ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ ನಾಯಕಿ!; ಏನಿದು ಪ್ರಕರಣ

ಬಿಜೆಪಿ ನಾಯಕನ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Update: 2026-07-16 23:25 IST

ಎಂ.ಕೆ.ಪ್ರಾಣೇಶ್ / ಗಾಯತ್ರಿ ಶಾಂತೇಗೌಡ

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ತಕರಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಭಾರೀ ಜಯ ಸಿಕ್ಕಿದೆ. ಈ ಮಹತ್ವದ ಆದೇಶದಿಂದಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಸ್ಥಾನಕ್ಕೆ ಕುತ್ತು ಬಂದಂತಾಗಿದ್ದು, ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ವಹಿಸಿಕೊಳ್ಳಲು ಹಾದಿ ಸುಗಮವಾಗಿದೆ.

ಕಳೆದ 2021ರ ಡಿಸೆಂಬರ್ ನಲ್ಲಿ ನಡೆದಿದ್ದ ಚುನಾವಣೆಯ ಮತ ಎಣಿಕೆ ವೇಳೆ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಟ್ಟು 2,410 ಮತಗಳ ಪೈಕಿ 2,371 ಮತಗಳು ಸಿಂಧುವಾಗಿದ್ದವು. ಇದರಲ್ಲಿ ಪ್ರಾಣೇಶ್ 1,188 ಮತಗಳನ್ನು ಪಡೆದರೆ, ಗಾಯಿತ್ರಿ ಶಾಂತೇಗೌಡ ಅವರು 1,182 ಮತಗಳನ್ನು ಗಳಿಸಿದ್ದರು. ಆದರೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯತ್‍ಗಳ ಒಟ್ಟು 12 ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ್ದ ಮತಗಳೇ ಈ ಇಡೀ ಫಲಿತಾಂಶದ ಹಣೆಬರಹ ಬದಲಿಸಲು ಕಾರಣವಾಯಿತು.

ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂದು ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಾದವನ್ನು ಪುರಸ್ಕರಿಸಿದ್ದ ಹೈಕೋರ್ಟ್, ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಮಹತ್ವದ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಎಂ.ಕೆ.ಪ್ರಾಣೇಶ್ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿವಾದಿತ 12 ಮತಗಳನ್ನು ಪ್ರತ್ಯೇಕವಾಗಿ ಇರಿಸಿ ಮರು ಎಣಿಕೆ ಮಾಡಿ ವರದಿ ಸಲ್ಲಿಸುವಂತೆ ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ನಿರ್ದೇಶನ ನೀಡಿತ್ತು. ಅದರಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, 2025ರ ಮಾರ್ಚ್ ತಿಂಗಳಿನಲ್ಲಿ ಮರು ಮತ ಎಣಿಕೆಯ ಸೀಲ್ಡ್ ಕವರ್ ವರದಿಯನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದರು.

ಸದ್ಯ ಸುಪ್ರೀಂಕೋರ್ಟ್ ಗಾಯತ್ರಿ ಶಾಂತೇಗೌಡ ಪರವಾಗಿ ಅಂತಿಮ ತೀರ್ಪು ಪ್ರಕಟಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಸದಸ್ಯರ ಆರು ವರ್ಷಗಳ ಅವಧಿಯು 2027ರ ಡಿಸೆಂಬರ್ ವರೆಗೆ ಇರಲಿದ್ದು, ಸುಪ್ರೀಂಕೋರ್ಟ್‍ನ ಈ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಗಾಯಿತ್ರಿ ಶಾಂತೇಗೌಡ ಅವರು ಇನ್ನೂ ಒಂದೂವರೆ ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಲಭಿಸಿದಂತಾಗಿದೆ. ನಾಲ್ಕು ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ಕಾಂಗ್ರೆಸ್ ನಾಯಕಿಗೆ ಗೆಲುವು ಸಿಕ್ಕಂತಾಗಿದ್ದು, ಗಾಯತ್ರಿ ಶಾಂತೇಗೌಡ ಬೆಂಬಲಿಗರಲ್ಲಿ ಸಡಗರ ಮನೆ ಮಾಡಿದೆ.

 

ವಿಧಾನ ಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವ ಹಕ್ಕಿಲ್ಲ ಎಂಬ ಪ್ರಕರಣಕ್ಕೆ ಹೈಕೋರ್ಟ್‍ನ ಏಕಸದಸ್ಯ ಪೀಠ ಮತ್ತು ದ್ವಿಸದಸ್ಯ ಪೀಠದಲ್ಲಿ ನ್ಯಾಯ ಸಿಕ್ಕಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ನಮ್ಮ ಪ್ರತಿಸ್ಫರ್ಧಿ ಹೋಗಿದ್ದರು. ಸುಪ್ರೀಂಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ಮರು ಎಣಿಕೆ ಕಾರ್ಯ ನಡೆದು ಒಂದೂವರೆ ವರ್ಷ ಕಳೆದಿದೆ. ಸುಪ್ರೀಂ ಕೋರ್ಟ್‍ನಲ್ಲಿ ಪ್ರತಿ ಸ್ಫರ್ಧಿ ಸಲ್ಲಿಸಿದ ಎಲ್ಲಾ ಅರ್ಜಿಗಳು ವಜಾಗೊಂಡಿದ್ದು, ನನ್ನ ಪರವಾಗಿ ಆದೇಶ ಬಂದಿದೆ. ನನಗೆ ನ್ಯಾಯ ಸಿಕ್ಕಿದೆ. 7 ರಿಂದ 8 ಮತಗಳಿಂದ ಗೆಲುವಾಗಿದೆ.

-ಎ.ವಿ.ಗಾಯತ್ರಿ ಶಾಂತೇಗೌಡ


ಗಾಯತ್ರಿ ಶಾಂತೇಗೌಡ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದಿರುವುದು ಸಂತಸವಾಗಿದೆ. ಈ ತೀರ್ಪು ಅನಿರೀಕ್ಷಿತವಲ್ಲ, ನಿರೀಕ್ಷಿತ. ನಮ್ಮ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೆವು. ಕೇಂದ್ರದ ಬಿಜೆಪಿ ಸರಕಾರ ಚುನಾವಣಾ ಆಯೋಗವನ್ನೂ ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿತ್ತು. ಈ ಕಾರಣದಿಂದಾಗಿ ಶೃಂಗೇರಿ ವಿಧಾನ ಸಭೆ ಚುನಾವಣೆ ಮರುಮತ ಎಣಿಕೆ, ಹಾಗೂ ಎಮ್ಮೆಲ್ಸಿ ಚುನಾವಣಾ ಫಲಿತಾಂಶ ನಮ್ಮ ವಿರುದ್ಧವಾಗಿ ಬಂದಿತ್ತು. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಿದ್ದರಿಂದ ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿದೆ.

- ಅಂಶುಮಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

 

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಗುರುವಾರ ನಗರದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನಗರದ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡ ಕೈ ಕಾರ್ಯಕರ್ತರು ಗಾಯತ್ರಿ ಶಾಂತೇಗೌಡ ಅವರು ವಿಪ ಸದಸ್ಯೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜಯಘೋಷ ಕೂಗಿ ಸಂಭ್ರಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News