Chikkamagaluru | ರೌಡಿಶೀಟರ್ ಜೊತೆ ಮದ್ಯಪಾನ ಪಾರ್ಟಿ ಆರೋಪ: ಸಖರಾಯಪಟ್ಟಣ ಠಾಣಾ ಎಎಸ್ಸೈ ವೀರೇಂದ್ರ ಅಮಾನತು
ಚಿಕ್ಕಮಗಳೂರು, ಸೆ.23: ರೌಡಿಶೀಟರ್ ಜೊತೆ ಮದ್ಯಪಾನ ಪಾರ್ಟಿ ಮಾಡಿದ ಆರೋಪದಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯ ಎಎಸ್ಸೈ ಎಚ್.ಡಿ.ವೀರೇಂದ್ರರನ್ನು ಅಮಾನತು ಮಾಡಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಕಡೂರು ಠಾಣಾ ಪಿಎಸ್ಸೈ ಸಲ್ಲಿಸಿರುವ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ತಿಳಿಸಿದ್ದಾರೆ.
ಎಸ್ಪಿ ಆದೇಶದಲ್ಲೇನಿದೆ?
ಸಖರಾಯಪಟ್ಟಣ ಠಾಣೆಯ ಎಎಸ್ಸೈ ಎಚ್.ಡಿ. ವೀರೇಂದ್ರ ಅವರು ಕಡೂರು ತಾಲೂಕಿನ ಎಮ್ಮೆದೊಡ್ಡಿ ಮುಸ್ಲಾಪುರ ಗ್ರಾಮದಲ್ಲಿ ತನ್ನ ಪತ್ನಿಯ ಹೆಸರಿನಲ್ಲಿರುವ ಸನ್ ಮೂನ್ ಗ್ರೂಪ್ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಸೆ.15ರಂದು ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣೆಯ ರೌಡಿಶೀಟರ್ ನವೀನ್ ನಾಯ್ಕ ಎಂಬಾತನ ಹುಟ್ಟುಹಬ್ಬದ ಆಚರಿಸಿದ್ದರು. ಈ ಪಾರ್ಟಿಯಲ್ಲಿ ಸುಮಾರು 80-90 ಮಂದಿಯಷ್ಟು ಜನರು ಸೇರಿ ಮದ್ಯಪಾನ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ.
ಮುಸ್ಲಾಪುರ ಗ್ರಾಮದಲ್ಲಿ ಈ ಬಾರ್ ತೆರೆಯುವ ವಿಚಾರವಾಗಿ ಈ ಹಿಂದೆ ಬಾರ್ ಮಾಲಕರು ಹಾಗೂ ಸ್ಥಳೀಯ ಗ್ರಾಮಸ್ಥರಿಗೂ ವಿರೋಧ ಉಂಟಾಗಿ ಕಡೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಆಗಿದ್ದರೂ ಜವಾಬ್ದಾರಿಯುತ ಎಎಸ್ಸೈ ಹುದ್ದೆಯಲ್ಲಿರುವ ಎಚ್.ಡಿ.ವೀರೇಂದ್ರ ಅವರು ರೌಡಿಶೀಟರ್ ಜೊತೆ ಬಾರ್ ನಲ್ಲಿ ಹುಟ್ಟುಹಬ್ಬ ಆಚರಿಸುತ್ತಾ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಕಿರುಕುಳ ನೀಡಿ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಉಂಟಾಗಬಹುದಾದ ವಾತಾವರಣ ಸೃಷ್ಟಿಯಾಗಲು ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಡಿ.ವೀರೇಂದ್ರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.