ಜನರಿಗಾಗಿ ಬಿಜೆಪಿಯವರು ಮಾಡಿರುವ ಸಾಧನೆ ಹೇಳಲಿ : ಸಿದ್ದರಾಮಯ್ಯ
ಬೀರೂರು : ಬಿಜೆಪಿ ನಾಯಕರು ಯಾವ ಹೋರಾಟದಲ್ಲೂ ಭಾಗವಹಿಸಿಲ್ಲ. ಮಹಾತ್ಮಾ ಗಾಂಧೀಜಿ ನೇತೃತ್ವದ ಹೋರಾಟದಿಂದ ಕಾಂಗ್ರೆಸ್ಸಿಗರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೀರೂರು ಪಟ್ಟಣದಲ್ಲಿ ಶನಿವಾರ ಆಯೋಜಿಸಲಾದ ಸಂಗೊಳ್ಳಿ ರಾಯಣ್ಣ ಮತ್ತು ದಾಸಶ್ರೇಷ್ಠ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಹಿರಿಯ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಬಿಜೆಪಿಯ ಯಾವ ನಾಯಕರೂ ಈ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಅಂತವರ ಹೆಸರೇನಾದರು ಇದ್ದರೆ ಹೇಳಿ ಎಂದು ಸಭಿಕರನ್ನು ಪ್ರಶ್ನಿಸಿದರು.
ಈ ಹಿಂದೆ ನಾನೊಂದು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಕೆಲ ಯುವಕರು ಮೋದಿ.. ಮೋದಿ... ಅಂತ ಕೂಗಿದರು. ಮೋದಿ ಯುವಕರಿಗಾಗಿ ಏನು ಮಾಡಿದ್ದಾರೆ?. ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗಾಗಿ ಮಾಡಿದ ಸಾಧನೆಗಳನ್ನು ಹೇಳುತ್ತೇನೆ. ಬಿಜೆಪಿಯವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಜಿಲ್ಲೆಯಲ್ಲಿದ್ದ ಬಿಜೆಪಿ ಶಾಸಕರ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಶಾಸಕ ಆನಂದ್ ಅವರನ್ನು ಕಡೂರು ಕ್ಷೇತ್ರದ ಜನ ಆರಿಸಿದಕ್ಕಾಗಿ ಕಳೆದ 3 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಸರಕಾರದಿಂದ 1,200 ಕೋಟಿ ರೂ. ತಂದು ಕೆಲಸ ಮಾಡಿದ್ದಾರೆ. ನನ್ನ ಸಹಕಾರವೂ ಅವರಿಗಿದೆ. ನಿಮ್ಮ ಸಹಕಾರವನ್ನು ಮುಂದಿನ ಚುನಾವಣೆಯಲ್ಲಿ ಕೊಡಿ ಎಂದ ಸಿದ್ದರಾಮಯ್ಯ, ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದೇನೆ. ಆದರೆ ನನಗೆ ಜಾತಿ ಇಲ್ಲ, ಎಲ್ಲಾ ಬಡವರು ವಿದ್ಯಾವಂತರಾಗುವ ಜೊತೆಗೆ ಎಲ್ಲರಿಗೂ ಸರಕಾರಿ ಕೆಲಸ ಸಿಕ್ಕಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ, ಅದನ್ನೆ ಕನಕದಾಸರು ಬಯಸಿದ್ದು ಎಂದರು.
ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಬೇಕು. ಎಲ್ಲರೂ ಸಮನಾಗಿ ಬಾಳಬೇಕು. ಪ್ರತಿಯೊಬ್ಬರೂ ಮನುಷ್ಯರಾಗಿ ಬಾಳಬೇಕೆಂಬ ಚಿಂತನೆ ಹೊಂದಿದ್ದರು. ರಾಜ್ಯದ ಜನ ಕ್ರಾಂತಿವೀರ ರಾಯಣ್ಣ ಮತ್ತು ಕನಕದಾಸರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 17 ಬಜೆಟ್ ಮಂಡಿಸಿದ್ದೇನೆ. ರಾಜ್ಯದಲ್ಲಿ ಇಷ್ಟು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಾರೂ ಇಲ್ಲ. ದೇವರಾಜ ಅರಸು ಅವರಿಗಿಂತ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಕನಕದಾಸ ಪುತ್ಥಳಿ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ರಾಜ್ಯದಲ್ಲಿ ಅತಿ ಹೆಚ್ಚು ಆಡಳಿತ ನಡೆಸಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, 136 ಶಾಸಕರ ಬೆಂಬಲ ಪಡೆದು ಎರಡು ಬಾರಿ ರಾಜ್ಯದ ಆಡಳಿತ ನಡೆಸಿರುವುದರ ಜೊತೆಗೆ ಒಂದು ಕಪ್ಪು ಚುಕ್ಕೆಯನ್ನೂ ಎಳೆದುಕೊಳ್ಳದೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ. ಇಂತಹ ವ್ಯಕ್ತಿ ನಮ್ಮ ಕುರುಬ ಜನಾಂಗದಲ್ಲಿ ಜನಿಸಿರುವುದು ನಮ್ಮ ಹೆಮ್ಮೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿದರು. ಕಡೂರು ಶಾಸಕ ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಗಾಯತ್ರಿ ಶಾಂತೇಗೌಡ, ಕುರುಬ ಸಮಾಜದ ಅಧ್ಯಕ್ಷ ತಿಮ್ಮಯ್ಯ, ಬೀರೂರು ದೇವರಾಜ್, ಕಡೂರು ಕುರುಬ ಸಂಘದ ಅಧ್ಯಕ್ಷ ಭೋಗಪ್ಪ, ಸಿಡಿಎ ಅಧ್ಯಕ್ಷ ಮಂಜುನಾಥ್, ಎ.ಎನ್.ಮಹೇಶ್, ಜಿಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ತೋಟಪ್ಪ ಸೇರಿದಂತೆ ಕುರುಬ ಸಮಾಜದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
‘ಚುನಾವಣೆಗೆ ಸ್ಪರ್ಧಿಸುವುದಿಲ್ಲ’
ನನ್ನ ಶಾಸಕತ್ವ ಅವಧಿ ಎರಡು ವರ್ಷವಿದೆ. ನನಗೀಗ 79 ವರ್ಷ ತುಂಬಿದ್ದು, ಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ. ನಾನು ಹೈಕಮಾಂಡ್, ರಾಹುಲ್ ಗಾಂಧಿಯವರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡು ರಾಜೀನಾಮೆ ನೀಡಿದ್ದೇನೆ. ಕೊಟ್ಟ ಮಾತಿನಂತೆ ನಡೆದ ಸರಕಾರವಿದ್ದರೆ ಅದು ಸಿದ್ದರಾಮಯ್ಯನವರ ಸರಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.