ಕಸ್ತೂರಿ ರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್; ರೈತರು, ಗ್ರಾಮಸ್ಥರಿಂದ ಪ್ರತಿಭಟನೆ
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡಿಗರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಇಂದು ಶೃಂಗೇರಿ ತಾಲೂಕು ಸಂಪೂರ್ಣ ಬಂದ್ ಆಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ವರದಿ ಜಾರಿಯಾದರೆ ಮಲೆನಾಡಿನ ರೈತರು ಹಾಗೂ ಗ್ರಾಮೀಣ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಿರುವ ಹೋರಾಟಗಾರರು, ಕಳೆದ ಒಂದು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇಂದು ಶೃಂಗೇರಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಚಿಕ್ಕಮಗಳೂರು ಜಿಲ್ಲೆಯ ಐದು ತಾಲೂಕುಗಳ 137ಕ್ಕೂ ಅಧಿಕ ಹಳ್ಳಿಗಳ ಮೇಲೆ ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಸುಮಾರು 3,666 ಚದರ ಕಿ.ಮೀ. ಪ್ರದೇಶ ವರದಿ ವ್ಯಾಪ್ತಿಗೆ ಒಳಪಡಲಿದೆ ಎಂದು ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಶೃಂಗೇರಿ ವೆಲ್‌ಕಂ ಗೇಟ್‌ನಿಂದ ಆರಂಭಗೊಂಡ ರೈತರ ಜಾಥಾ ಬಸ್ ನಿಲ್ದಾಣದವರೆಗೆ ಸಾಗಿತು. ಬಳಿಕ ಪಟ್ಟಣದ ಭಾರತೀ ಬೀದಿಯಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸ್ಥಳೀಯರು, ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಶೃಂಗೇರಿ ರೈತ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ, ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ, ಮಲೆನಾಡು ಕರಾವಳಿ ಜನಪರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.
ಸರ್ಕಾರ ವಿಶೇಷ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲೇ ಶೃಂಗೇರಿಯಲ್ಲಿ ಬಂದ್ ಮತ್ತು ಪ್ರತಿಭಟನೆ ನಡೆಯುತ್ತಿದ್ದು, ಮಲೆನಾಡಿಗೆ ಮುಖ್ಯಮಂತ್ರಿ ಭೇಟಿ ನೀಡಿದ ಬೆನ್ನಲ್ಲೇ ಮತ್ತೆ ಶೃಂಗೇರಿ ಬಂದ್‌ಗೆ ಕರೆ ನೀಡಲಾಗಿದೆ. ವರದಿ ಜಾರಿಗೆ ವಿರೋಧವಾಗಿ ಹೋರಾಟ ಮುಂದುವರಿಸುವುದಾಗಿ ಸಂಘಟನೆಗಳು ಘೋಷಿಸಿವೆ.