ಸಾಂದರ್ಭಿಕ ಚಿತ್ರ | PC : Image by magnific

ಚಿಕ್ಕಮಗಳೂರು : ಕಾಂಗ್ರೆಸ್ ಸರಕಾರ ಮತ್ತು ಆರೋಗ್ಯ ಸಚಿವರ ವಿರುದ್ಧ ಬಿಜೆಪಿ ಸೃಷ್ಟಿಸಿದ ರಾಜಕೀಯ ಪೋಸ್ಟ್ ಒಂದನ್ನು ನಗರದ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ದೇವರಾಜ್ ಸಿಬ್ಬಂದಿಯ ವಾಟ್ಸ್‌ಆ್ಯಪ್ ಗ್ರೂಪಿಗೆ ಹಂಚಿಕೊಂಡಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ

ಮಲ್ಲೇಗೌಡ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ದೇವರಾಜ್ ಅವರ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಈ ಸಂದೇಶ ರವಾನೆಯಾಗಿದ್ದು, ಸರಕಾರಿ ಅಧಿಕಾರಿಯೊಬ್ಬರು ಆಡಳಿತಾರೂಢ ಸರಕಾರದ ವಿರುದ್ಧ ಪೋಸ್ಟ್ ಹಂಚಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಅಫಜಲಪುರ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಆಹಾರ ವಿತರಣೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ‘ರೋಗಿಗಳ ಆಹಾರ ವಿತರಣೆಯಲ್ಲೂ ಗುಳುಂ, ಖಾದರ್ ಸಾಹೇಬ್ರೇ’ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ರಾಜಕೀಯ ಪ್ರೇರಿತ ಪೋಸ್ಟನ್ನು ಜಿಲ್ಲಾ ಸರ್ಜನ್ ಡಾ.ದೇವರಾಜ್ ಅವರು ಆಸ್ಪತ್ರೆಯ ನೌಕರರು ಹಾಗೂ ವೈದ್ಯರಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಶೇರ್ ಮಾಡಿದ್ದಾರೆ ಎನ್ನಲಾಗಿದೆ.

ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಅವರ ಮೊಬೈಲ್ ಸಂಖ್ಯೆಯಿಂದ ಸಚಿವರು ಹಾಗೂ ಸರಕಾರದ ವಿರುದ್ಧದ ಪೋಸ್ಟ್ ಗ್ರೂಪ್‌ಗೆ ರವಾನೆಯಾಗುತ್ತಿದ್ದಂತೆ ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜಿಲ್ಲಾ ಮಟ್ಟದ ಅಧಿಕಾರಿಯಿಂದ ಇಂತಹ ಸಂದೇಶವನ್ನು ಸಿಬ್ಬಂದಿ ಗ್ರೂಪ್‌ಗೆ ಹಂಚಿಕೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಮೆಸೇಜ್ ಹಂಚಿಕೊಂಡಿರುವ ಆರೋಪಗಳ ಕುರಿತು ಅಧಿಕೃತ ತನಿಖೆ ಅಥವಾ ಸಂಬಂಧಪಟ್ಟವರ ಸ್ಪಷ್ಟನೆ ಹೊರಬಂದ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ತಿಳಿದು ಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor