×
Ad

ಗೇರುಮರಡಿ ಗೊಲ್ಲರಹಟ್ಟಿಗೆ ಚಿತ್ರದುರ್ಗದ ಯಾದವಾನಂದ ಸ್ವಾಮೀಜಿ ಭೇಟಿ; ನಿವಾಸಿಗಳೊಂದಿಗೆ ಮಾತುಕತೆ

Update: 2024-01-11 21:29 IST

ತರೀಕೆರೆ: ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಗೆ ಚಿತ್ರದುರ್ಗ ಯಾದವ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ ಮತ್ತು ಹಿರಿಯೂರಿನ ಮಾಜಿ ಶಾಸಕಿ ಪೂರ್ಣೀಮಾ ಗುರುವಾರ ಭೇಟಿ ನೀಡಿ ಗ್ರಾಮಸ್ಥರೊಡನೆ ಮಾತುಕತೆ ನಡೆಸಿದರು.

ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆದು ಅವರಿಗೆ ಬಡಾವಣೆಯಲ್ಲಿ ನಡೆದಿರುವ ಘಟನೆಗಳ ಸಂಬಂಧ ಸಮಾಧಾನ ಹೇಳಿದರು. ಈಗಾಗಲೇ ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸಲು ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲರ ಸಹಕಾರದಿಂದ ಶೀಘ್ರದಲ್ಲೇ ಸಮಸ್ಯೆ ಸುಖಾಂತ್ಯ ಕಾಣಲಿದೆ ಎಂದರು.

ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡುವುದಕ್ಕೆ ಯಾರ ವಿರೋಧವೂ ಇಲ್ಲ. ಗರ್ಭಗುಡಿ ಪ್ರವೇಶಕ್ಕೆ ಕೆಲವು ಸಂಪ್ರದಾಯ ಪಾಲನೆ ಆವಶ್ಯಕ. ನಮ್ಮ ಸಮಾಜದಲ್ಲಿ ದೇವರ ಪೂಜೆಗೆ ಅರ್ಚಕರನ್ನು ನೇಮಕ ಮಾಡಿಕೊಳ್ಳುತ್ತೇವೆ. ಅರ್ಚರಲ್ಲದೆ ಬೇರೆಯವರು ಗರ್ಭಗುಡಿ ಪ್ರವೇಶಿಸಬಾರದು ಎಂಬುದು ನಾವು ನಡೆಸಿಕೊಂಡು ಬಂದಿರುವ ಆಚರಣೆ. ವೈಜ್ಞಾನಿಕ ಯುಗದಲ್ಲಿ ಸಮಾಜದ ಕಟ್ಟುಪಾಡುಗಳಿಗೆ ಅನುಗುಣವಾಗಿ ನಡೆಯುವುದರ ಜೊತೆಗೆ ಸಮಾಜ ಬದಲಾದಂತೆ ನಮ್ಮ ಸಂಪ್ರದಾಯ, ಆಚರಣೆ ನಂಬಿಕೆಗಳನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ, ಕಾನೂನನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.

ಗೇರಮರಡಿ ಗ್ರಾಮದ ಗೊಲ್ಲರಹಟ್ಟಿಗೆ ಭೇಟಿ ನೀಡಿದ ನಂತರ ಎಸಿ ಕಚೇರಿಗೆ ತೆರಳಿದ ಚಿತ್ರದುರ್ಗ ಯಾದವ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಕೃಷ್ಣ ಯಾದವನಂದ ಸ್ವಾಮೀಜಿ ಹಾಗೂ ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಎಸಿ ಡಾ.ಕೆ.ಜೆ.ಕಾಂತರಾಜ್ ಜತೆ ಮಾತನಾಡಿ, ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಾನೂನು ಪಾಲನೆ ಆಚರಿಸಿ, ಆದರೆ, ಧಾರ್ಮಿಕ ಭಾವನೆಗಳಗೆ ಧಕ್ಕೆಯಾಗಬಾರದು. ಚರ್ಚೆ ಮೂಲಕ ಪ್ರಕರಣ ಇತ್ಯಾರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ ಎಂದರು.

ರಾಜ್ಯ ಗೊಲ್ಲ ಸಮುದಾಯದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಉಪಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಅಧ್ಯಕ್ಷ ಬಸವರಾಜ, ತಾಲೂಕು ಅಧ್ಯಕ್ಷ ಸತೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News