Chikkamagaluru | ಟಿಪ್ಪು ಕಟೌಟ್‌ನ ವೀಡಿಯೊಗೆ ಆಕ್ಷೇಪಾರ್ಹ ಹಾಡು ಬಳಕೆ: ಆರೋಪ
ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು
ಚಿಕ್ಕಮಗಳೂರು: ಮೀಲಾದುನ್ನಬಿ ಪ್ರಯುಕ್ತ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಕಟೌಟ್‌ಗೆ ಸಂಬಂಧಿಸಿದ ವೀಡಿಯೊವೊಂದಕ್ಕೆ ಆಕ್ಷೇಪಾರ್ಹ ಹಾಡನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಘಟನೆ ಸೋಮವಾರ ರಾತ್ರಿ ಟಿಪ್ಪು ನಗರದಲ್ಲಿ ವರದಿಯಾಗಿದೆ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ (ಸುವೋಮೋಟೋ) ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಟಿಪ್ಪುನಗರದಲ್ಲಿ ಅಳವಡಿಸಿರುವ 40 ಅಡಿ ಎತ್ತರದ ಕಟೌಟ್‌ನ ವೀಡಿಯೊಗೆ ಪಾಕಿಸ್ತಾನಿ ಸೇನೆಯನ್ನು ಹೊಗಳುವ ಹಾಡನ್ನು ಜೋಡಿಸಿ, ‘ಚಿಕ್ಕಮಗಳೂರು ಪರ್ವ ಟಿಪ್ಪು ಬಾಯ್ಸ್’ ಎಂಬ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರೀಲ್ಸ್ ಅಪ್ಲೋಡ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ವೀಡಿಯೊ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್ಸೈ ಧನರಾಜ್ ಅವರೇ ಸ್ವತಃ ನಗರ ಠಾಣೆಗೆ ದೂರು ನೀಡಿದ್ದಾರೆ.
ಸಮಾಜದಲ್ಲಿ ಕೋಮು ಸೌಹಾರ್ದ ಕೆಡಿಸುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಗೂ ದ್ವೇಷ ಹುಟ್ಟು ಹಾಕುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಸ್ಪಿ ಹೇಳಿದ್ದೇನು?
ಮೀಲಾದುನ್ನಬಿ ಸಂಬಂಧ ಡಿಪಿಒ ಹಾಗೂ ಎಸ್‌ಡಿಪಿಒ ಮಟ್ಟದ ಶಾಂತಿ ಸಭೆಯಲ್ಲಿ ಸಮುದಾಯದ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಳೆದ 5-6 ವರ್ಷಗಳ ನಿಯಮ, ಪದ್ಧತಿಗಳನ್ನೇ ಪಾಲಿಸಲು ಸೂಚಿಸಲಾಗಿದೆ. ಹೊಸ ಪದ್ಧತಿ ಅಥವಾ ಹೊಸ ಮಾರ್ಗಕ್ಕೆ ಯಾವುದೇ ಅವಕಾಶವಿಲ್ಲ. ಟಿಪ್ಪು ನಗರದಲ್ಲಿ ಹಾಕಿರುವ ಟಿಪ್ಪು ಕಟೌಟ್‌ನ ಅಳತೆ, ಸ್ಥಳ, ಸಮಯ ಹಿಂದಿನ ವರ್ಷಗಳಂತೆಯೇ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಟೌಟ್‌ಗೆ ಆಕ್ಷೇಪಾರ್ಹ ಹಾಡು ಸೇರಿಸಿ ವೀಡಿಯೊ ವೈರಲ್ ಮಾಡಿರುವ ಪ್ರಕರಣ ಸಂಬಂಧ ಸುವೋಮೋಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196, 299ರ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ವೀಡಿಯೊ ತಯಾರಿಸಿದವರು, ಹಂಚಿಕೊಂಡವರು ಹಾಗೂ ಸ್ಟೇಟಸ್ ಹಾಕಿದವರ ವಿರುದ್ಧ ತನಿಖೆ ನಡೆಸಿದ್ದು, ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ತಿಳಿಸಿದ್ದಾರೆ.