Photo: Amar Ujala

ಹೊಸದಿಲ್ಲಿ: ಲಕ್ಷಾಂತರ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ದೃಢೀಕೃತ ಟಿಕೆಟ್ಗಾಗಿ ಕಾಯುವುದರಿಂದ ಬಹುತೇಕ ನಿರಾಶೆಯೇ ಸಿಗುತ್ತದೆ. ಆದರೆ ಈ ವ್ಯವಸ್ಥೆಯನ್ನು ಸೋಲಿಸಲು ಮಾರ್ಗ ಕಂಡುಕೊಂಡು ವ್ಯವಹಾರವಾಗಿ ಪರಿವರ್ತಿಸಿದರೆ? ಅಮೆಝಾನ್ ಎಂಎಕ್ಸ್ ಪ್ಲೇಯರ್ನ ಹೊಸ ಸರಣಿ ‘ವೇಟಿಂಗ್ ಹೈ’ ಈ ಸಮಸ್ಯೆಯ ಆಳ ಹೊಕ್ಕು ಅಪರಾಧ ಮತ್ತು ಹಾಸ್ಯ ಮಿಶ್ರಣದ ಮೂಲಕ ಪರಿಶೋಧಿಸುತ್ತದೆ.

ಏಳು ಕಂತುಗಳ ಸರಣಿ ಸೆಪ್ಟೆಂಬರ್ 16ರಿಂದ ಪ್ರದರ್ಶನಗೊಂಡಿದ್ದು, ದಿವ್ಯೇಂದು ಶರ್ಮಾ ಮತ್ತು ಭುವನ್ ಅರೋರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಸಮೀರ್ ವಿದ್ವಾನ್ಸ್ ಸರಣಿಯನ್ನು ನಿರ್ದೇಶಿಸಿದ್ದಾರೆ.

ಪಾಟ್ನಾದಲ್ಲಿ ಬಳಕೆದಾರರು ತತ್ಕಾಲ್ ರೈಲ್ವೆ ಟಿಕೆಟ್ ಪಡೆಯಲು ಸಹಾಯ ಮಾಡುವ ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಕಂಪ್ಯೂಟರ್ ತಜ್ಞರ ಸುತ್ತ ಕತೆಯನ್ನು ನಿರೂಪಿಸಲಾಗಿದೆ.

ದಿವ್ಯೇಂದು ಶರ್ಮಾ ಪಾಟ್ನಾದಲ್ಲಿ ನಿಯೋಜಿಸಲಾದ RPF ಅಧಿಕಾರಿ ಸುಗಮ್ ಮಿಶ್ರಾ ಪಾತ್ರದಲ್ಲಿ ನಟಿಸಿದ್ದಾರೆ. ತತ್ಕಾಲ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಕುಶಲತೆಯಿಂದ ನಿರ್ವಹಿಸುವ ನೆಟ್ವರ್ಕ್ ಪರಿಚಯವಾದಾಗ ಅವರ ದಿನಚರಿ ಬದಲಾಗುತ್ತದೆ. ಭುವನ್ ಅರೋರಾ ತತ್ಕಾಲ್ ಟಿಕೆಟ್ ಬುಕ್ ಮಾಡುವ ಸಾಫ್ಟ್ವೇರ್ ತಯಾರಿಸಿದ ಕಂಪ್ಯೂಟರ್ ತಜ್ಞ ಅಫ್ರೋಜ್ ಹಮ್ಜಾ ಪಾತ್ರವನ್ನು ನಿರ್ವಹಿಸಿದ್ದಾರೆ.

ಆರಂಭದಲ್ಲಿ ಹ್ಯಾಕ್ ಮಾಡಿದ ವ್ಯವಹಾರ ನಂತರ ದೊಡ್ಡ ಉದ್ಯಮವಾಗಿ ಬದಲಾಗುತ್ತದೆ. ಅಫ್ರೋಜ್ ಮತ್ತು ಮಾಮಾ (ವಿಜಯ್ ಮೌರ್ಯ) ಎಂದು ಕರೆಸಿಕೊಳ್ಳುವ ಚಿಕ್ಕಪ್ಪ ದೃಢೀಕೃತ ಟಿಕೆಟ್ ಪಡೆಯಲು ಮತ್ತು ಪ್ರಯಾಣಿಕರಿಗೆ ಮಾರಾಟ ಮಾಡಲು ಸಾಫ್ಟ್ವೇರ್ ಬಳಸುತ್ತಾರೆ. ಇಂತಹ ಅಸಾಮಾನ್ಯ ಬುಕಿಂಗ್ ಮಾದರಿ ಗಮನಿಸುವ ಸುಗಮ್ ತನಿಖೆ ನಡೆಸುತ್ತಾರೆ. ಟಿಕೆಟ್ ಜಾಲ ಬೆಳೆದಂತೆ ಹಿಂದಿನ ಜನರು ಶತ್ರುತ್ವ ಮತ್ತು ದ್ರೋಹ ಎದುರಿಸುವಂತಹ ಕತೆ ಮುಂದುವರಿಯುತ್ತದೆ.

ಟ್ರೇಲರ್ ‘ವೇಟಿಂಗ್ ಹೈ’ ಅನ್ನು ಥ್ರಿಲ್ಲರ್ ಬದಲಾಗಿ, ಅಪರಾಧ-ಹಾಸ್ಯ ಅಥವಾ ‘ಹಗರಣ’ದ ಕತೆಯಾಗಿ ಪ್ರಸ್ತುತಪಡಿಸುತ್ತದೆ. ಟಿಕೆಟ್ ದಂಧೆಯ ತನಿಖೆಯ ಜೊತೆಗೆ ಸುಗಮ್ RPF ಅಧಿಕಾರಿಯಾಗಿ ಸವಾಲನ್ನು ಮತ್ತು ವೃತ್ತಿಪರ ಹೋರಾಟ ಎದುರಿಸುತ್ತಾರೆ.

ಪೋಷಕ ಪಾತ್ರವರ್ಗದಲ್ಲಿ ಪ್ರಮುಖ್ ತ್ರಿಪಾಠಿ, ಹರ್ಷಿತಾ ಗೌರ್, ವಿಜಯ್ ಮೌರ್ಯ ನಟಿಸಿದ್ದಾರೆ. ಶಾಂತಿ ದೇವಿ, ದಯಾಶಂಕರ್ ಪಾಂಡೆ ಮತ್ತು ಯಶ್ಪಾಲ್ ಶರ್ಮಾ ಪಾತ್ರವರ್ಗದಲ್ಲಿದ್ದಾರೆ. ನಾವೇದ್ ಅಸ್ಲಾಮ್ ಅವರೂ ತಂಡದ ಭಾಗವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor