ಟ್ವಿಸ್ಟ್ ಮೇಲೆ ಟ್ವಿಸ್ಟ್ನ ‘ಸ್ಪಾರ್ಕ್’
ಚಿತ್ರ: ಸ್ಪಾರ್ಕ್
ನಿರ್ದೇಶನ: ಡಿ. ಮಹಾಂತೇಶ್ ಹಂದ್ರಾಳ್
ನಿರ್ಮಾಣ: ಗರೀಮಾ ಅವಿನಾಶ್
ತಾರಾಗಣ: ನಿರಂಜನ್ ಸುಧೀಂದ್ರ, ಪ್ರೇಮ್, ಭಾವನಾ ಮೊದಲಾದವರು.
ಗ್ರಾಹಕರು ಬ್ಯಾಂಕ್‌ಗಳ ಮೇಲೆ ಅಪಾರ ನಂಬಿಕೆ ಇರಿಸಿ ಹಣಹೂಡುತ್ತಾರೆ. ಆದರೆ ಬ್ಯಾಂಕ್ ದಿವಾಳಿ ಹೆಸರಲ್ಲಿ ಬೀಗ ಹಾಕಿ ಪರಾರಿಯಾಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥ ಘಟನೆಗಳ ಹಿಂದಿನ ಜಾಲ ಎಷ್ಟು ಬಲಿಷ್ಠ? ಅವುಗಳನ್ನು ಭೇದಿಸುವುದು ಯಾಕೆ ಕಷ್ಟ? ಮುಂತಾದ ಮೂಲಭೂತ ಪ್ರಶ್ನೆಗಳಿಗೆ ಸಿಗುವ ಸಿನಿಮೀಯ ಉತ್ತರವೇ ಸ್ಪಾರ್ಕ್.
ಆಗಷ್ಟೇ ಪದವಿ ಮುಗಿಸಿ ಹೊಸದಾಗಿ ವಾರ್ತಾವಾಹಿನಿಗೆ ಸೇರಿಕೊಂಡ ಯುವಕ ಅಭಿರಾಮ್. ಸ್ಟಿಂಗ್ ಆಪರೇಷನ್ ಮೂಲಕ ಅಪರಾಧಗಳನ್ನು ತಡೆಯುವುದೆಂದರೆ ಆತನಿಗೆ ಹುಮ್ಮಸ್ಸು. ಆದರೆ ದಿವಾಳಿಯಾದ ಬ್ಯಾಂಕ್ ಹಿಂದಿನ ಕಾಣದ ದಾಳಗಳು ಆತನನ್ನು ಆಳಕ್ಕೆ ಎಳೆದೊಯ್ಯುತ್ತವೆ. ಅಲ್ಲಿ ಬಯಲಾಗುವ ಸತ್ಯಗಳು ಪ್ರತೀ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತಾ ಹೋಗುತ್ತವೆ.
ಅಭಿರಾಮ್ ಪಾತ್ರವನ್ನು ನಿರಂಜನ್ ಸುಧೀಂದ್ರ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಇದರಲ್ಲೊಂದು ಪ್ರೇಮಕಥೆಯೂ ಇದೆ. ಪ್ರೇಯಸಿಗೂ ಪ್ರೊಫೆಷನ್‌ಗೂ ಮಧ್ಯೆ ಸಂಬಂಧಗಳಿವೆ. ಎಲ್ಲೆಲ್ಲಿಯೂ ಇದ್ದೇನೆ ಎನ್ನುವ ತಮ್ಮ ಸಂಭಾಷಣೆಯಂತೆ ನಿರಂಜನ್ ಎಲ್ಲೆಡೆಯೂ ಸೈ ಎನಿಸಿದ್ದಾರೆ. ಸಾಹಸ, ನೃತ್ಯ, ಸಹಜ ಗತಿಯ ನಟನೆ ಹೀಗೆ ಎಲ್ಲದರಲ್ಲೂ ಗೆಲ್ಲುತ್ತಾರೆ. ಈ ಚಿತ್ರ ಅವರ ವೃತ್ತಿ ಬದುಕಿನ ಹೊಸ ಕಿಡಿಯಾಗುವುದರಲ್ಲಿ ಸಂದೇಹವಿಲ್ಲ.
ಪ್ರೇಮ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿದ್ದಾರೆ. ಆರಂಭದಲ್ಲಿ ಆಕರ್ಷಿಸದೇ ಹೋದರೂ ದ್ವಿತೀಯಾರ್ಧದಲ್ಲಿ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾರೆ. ಈ ಪಾತ್ರಕ್ಕೂ ಬಿಲ್ಡಪ್‌ನಿಂದ ಭಾವುಕತೆಯೆಡೆಗೆ ಒಂದು ಪಯಣವಿದೆ. ಅದಕ್ಕೂ ಮೊದಲು ವಕೀಲೆ ವೈದೇಹಿಯಾಗಿ ಭಾವನಾ ಬರುತ್ತಾರೆ. ತಮ್ಮ ಪಾತ್ರದ ಕುರಿತಾದ ಪ್ರೇಕ್ಷಕರ ಭಾವನೆಗಳನ್ನು ಬದಲಾಯಿಸುತ್ತಾರೆ. ಹೀಗೆ ಪ್ರತಿಯೊಬ್ಬರು ಕೂಡ ಕಥೆಗೆ ತಿರುವುಗಳನ್ನು ತರುತ್ತಾ ಸಾಗುತ್ತಾರೆ.
ನಾಯಕನ ಪ್ರೇಯಸಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ಬ್ಯಾಂಕ್‌ಗೆ ಸಂಬಂಧಿಸಿದ ತನಿಖೆಯಲ್ಲಿ ಪತ್ತೆಯಾಗುತ್ತಾ ಹೋಗುವ ವ್ಯಕ್ತಿಗಳಲ್ಲಿ ಅಶ್ವಿನ್ ಹಾಸನ್ ಅವರ ಧನರಾಜ್, ರತ್ನಾಕರನಾಗಿ ನೀನಾಸಂ ಅಶ್ವತ್ಥ್, ತುಮಕೂರು ಸಂಪಂಗಿಯಾಗಿ ವಿಜಯ್ ಚೆಂಡೂರ್ ಪಾತ್ರಗಳು ಗಮನ ಸೆಳೆಯುತ್ತವೆ. ಮುಖ್ಯಮಂತ್ರಿ ಪದವಿಯ ಆಕಾಂಕ್ಷಿ ಸತ್ಯಮೂರ್ತಿ ಪಾತ್ರದಲ್ಲಿ ರಮೇಶ್ ಇಂದಿರಾ ತಮ್ಮ ಖದರ್ ತೋರಿಸಿದ್ದಾರೆ. ರಾಕಿಯಾಗಿ ಚಿತ್ರರಂಗ ಪ್ರವೇಶಿಸಿರುವ ನವನಟ ಅಭಯ್ ವಸಿಷ್ಠ ಭರವಸೆಯ ಕಲಾವಿದನಾಗಿ ಕಾಣಿಸುತ್ತಾರೆ.
ಸಚಿನ್ ಬಸ್ರೂರು ಸಂಗೀತದಲ್ಲಿನ ಹಾಡುಗಳು ಆಲಿಸುವಂತಿವೆ. ವೀಕ್ಷಣೆಗೂ ಸಂಪನ್ನವಾಗಿವೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಅಮರ ಜ್ಯೋತಿ ಬ್ಯಾಂಕ್ ಕಥೆಯ ಮೂಲಕ , ‘ಹಮಾರ ಜಾತಿ’ ಎನ್ನುವ ಸಮುದಾಯ ಪ್ರಿಯರನ್ನು ವಿಮರ್ಶಿಸಿದ್ದಾರೆ. ವೇಗವಾಗಿ ಸಾಗುವ ಚಿತ್ರಕಥೆ ಇವರ ಕೈ ಹಿಡಿದಿದೆ. ಆದರೆ ಸಂದೇಶಾತ್ಮಕ ಸಂಭಾಷಣೆಗಳಲ್ಲಿ ರಾಜಕೀಯ ಬೆರೆಸದಿದ್ದರೆ ಮಾತ್ರ ಅದು ಸಾರ್ವತ್ರಿಕವಾಗಲು ಸಾಧ್ಯ. ಒಟ್ಟಿನಲ್ಲಿ ಭ್ರಷ್ಟತೆಯ ವಿರುದ್ಧದ ಧ್ವನಿಗೆ ನುಡಿಯಾಗಿದ್ದಾರೆ. ವಾಸ್ತವದ ಕಿಡಿಯಾಗಿದ್ದಾರೆ.
(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)