Photo: Instagram

ಮುಂಬೈ, ಸೆ. 24: ‘ವೆಲ್ಕಮ್’ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟ ಮುಷ್ತಾಕ್ ಖಾನ್ ಅವರು ಕ್ಯಾನ್ಸರ್ ನಿಂದಾಗಿ 56ನೇ ವಯಸ್ಸಿನಲ್ಲಿ ನಿಧನರಾದರು.

ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ.

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಜನಿಸಿದ ಮುಷ್ತಾಕ್ ಖಾನ್ ಅವರು ಹಲವು ವರ್ಷಗಳ ಕಾಲ ಚಲನಚಿತ್ರ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. 2007ರಲ್ಲಿ ಬಿಡುಗಡೆಯಾದ ‘ವೆಲ್ಕಮ್’ ಚಿತ್ರದಲ್ಲಿನ ಅಂಗವಿಕಲ ಹಾಕಿ ಆಟಗಾರನ ಪಾತ್ರದ ಮೂಲಕ ಅವರು ಹೆಚ್ಚು ಜನಪ್ರಿಯತೆ ಗಳಿಸಿದರು.

‘ಆಶಿಕಿ’ (1990), ‘ಹಮ್ ಹೈಂ ರಾಹಿ ಪ್ಯಾರ್ ಕೆ’ (1993), ‘ಹೇರಾ ಫೇರಿ’ (2000), ‘ಜೋಡಿ ನಂ. 1’ (2001), ‘ಮುಜ್ಸೆ ಶಾದಿ ಕರೋಗಿ’ (2004), ‘ಖಿಲಾಡಿ 786’ (2012), ‘ಸ್ತ್ರೀ’ (2018), ‘ಬಧಾಯಿ ದೋ’ (2022), ‘ಗದರ್ 2’ (2023), ‘ಸ್ತ್ರೀ 2’ (2024) ಮತ್ತು ‘ಬೇಬಿ ಜಾನ್’ (2024) ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

2024ರ ನವೆಂಬರ್ನಲ್ಲಿ ದಿಲ್ಲಿ–ಮೀರತ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಮುಷ್ತಾಕ್ ಖಾನ್ ಅಪಹರಣಕ್ಕೊಳಗಾಗಿದ್ದರು ಎಂಬ ವರದಿ ಸುದ್ದಿಯಾಗಿತ್ತು. ಪಿಟಿಐ ವರದಿ ಪ್ರಕಾರ, ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸುವ ನೆಪದಲ್ಲಿ ಅವರನ್ನು ಮೀರತ್ ಗೆ ಆಹ್ವಾನಿಸಲಾಗಿತ್ತು. ಆದರೆ ದಿಲ್ಲಿಗೆ ಬಂದ ಬಳಿಕ ಅವರನ್ನು ಬಿಜ್ನೋರ್ ಸಮೀಪದ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ಯಲಾಗಿತ್ತು ಎಂದು ಆರೋಪಿಸಲಾಗಿತ್ತು.

ಅಪಹರಣಕಾರರು 1 ಕೋಟಿ ರೂ. ಸುಲಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಟನನ್ನು ಒತ್ತೆಯಾಳಾಗಿ ಇರಿಸಿಕೊಂಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರು ಎಂದು ಅವರ ಉದ್ಯಮ ಪಾಲುದಾರ ಶಿವಂ ಯಾದವ್ ತಿಳಿಸಿದ್ದರು.

ಬೆಳಿಗ್ಗೆ ಅಝಾನ್ ಕೇಳಿದ ಬಳಿಕ ಮುಷ್ತಾಕ್ ಅವರು ಅಪಹರಣಕಾರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸ್ಥಳೀಯ ನಿವಾಸಿಗಳಿಂದ ಸಹಾಯ ಕೋರಿದ್ದರು.

ಮುಷ್ತಾಕ್ ಖಾನ್ ಅವರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor