ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ʻಕಾಂತಾರ - ಚಾಪ್ಟರ್ 1ʼ; ಹಾಲಿವುಡ್ ಸಿನಿಮಾಗಳ ಜೊತೆಗೆ ಸ್ಪರ್ಧೆ
ಹಾಲಿವುಡ್ ನ ದೊಡ್ಡ ಸಿನಿಮಾಗಳ ಜೊತೆಗೆ ರಿಷಬ್ ಶೆಟ್ಟಿ ಅವರ ಚಿತ್ರ ಪೈಪೋಟಿ ನಡೆಸಲಿದೆ ಎಂಬುದೇ ವಿಶೇಷ!
ಭಾರತದಿಂದ ಅಧಿಕೃತ ಆಯ್ಕೆಯಲ್ಲದೆ ಇದ್ದರೂ ಪ್ರತ್ಯೇಕ ಅರ್ಜಿಯ ಮೂಲಕ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ಸ್ಪರ್ಧೆಗೆ ಪ್ರವೇಶಿಸಿದೆ. ಈ ಸಿನಿಮಾ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ನೀಡಿದೆ.
“ದೈವತ್ವದಿಂದ ಚಾಲಿತ ನಮ್ಮ ಸಂಸ್ಕೃತಿಯಲ್ಲಿ ಬೇರೂರಿದ ಸಿನಿಮಾ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳು 2026ರಲ್ಲಿ ಸ್ಪರ್ಧಿಸುತ್ತಿದೆ. ‘ಕಾಂತಾರ ಚಾಪ್ಟರ್ 1’ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಪ್ರವೇಶಿಸಿರುವುದು ಹೆಮ್ಮೆಯ ವಿಚಾರ” ಎಂದು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.
ಜಾಗತಿಕವಾಗಿ 850 ಕೋಟಿ ರೂ, ಮೀರಿ ಗಳಿಕೆ ಮಾಡಿದ ಸಿನಿಮಾ ಒಟಿಟಿಯಲ್ಲೂ ಮೆಚ್ಚುಗೆ ಪಡೆದಿದೆ. ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾವಲ್ಲ. ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ ನಂತರ ಸಿನಿಮಾ ಸ್ಪರ್ಧೆಗೆ ಪ್ರವೇಶ ಪಡೆದುಕೊಂಡಿದೆ. ಹಾಲಿವುಡ್ ಸಿನಿಮಾಗಳ ಜೊತೆಗೆ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ರಿಷಬ್ ಸಿನಿಮಾ ಸ್ಪರ್ಧಿಸಲಿದೆ.
‘ಕಾಂತಾರ: ಚಾಪ್ಟರ್ 1’ ಮಾತ್ರವಲ್ಲ, ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿರುವ ‘ಮಹಾವತಾರ ನರಸಿಂಹ’ ಕೂಡ ಸಾಮಾನ್ಯ ಪ್ರವೇಶ ಪಟ್ಟಿ ಮೂಲಕ ಸ್ಪರ್ಧೆಗೆ ಸ್ಥಾನ ಪಡೆದಿದೆ. ಹಲವು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಎರಡು ಸಿನಿಮಾಗಳ ಪೈಕಿ ಯಾವುದು ಉಳಿದುಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ.
ಈವರೆಗೂ ಭಾರತದಲ್ಲಿ ನಿರ್ಮಾಣವಾದ ಯಾವುದೇ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಇದಕ್ಕೆ ಮೊದಲು ‘RRR’ ಚಿತ್ರದ ‘ನಾಟು’ ಹಾಡು ಆಸ್ಕರ್ ಗೆದ್ದು ದಾಖಲೆ ಬರೆದಿತ್ತು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ಹಾಡು ಸ್ಪರ್ಧೆಯಲ್ಲಿ ಸ್ಥಾನ ಪಡೆದಿತ್ತು.
‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿ, ನಟಿಸಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ʼಕಾಂತಾರ’ ಚಿತ್ರದ ಮೂಲಕ ದೇಶಾದ್ಯಂತ ಗುರುತಿಸಿಕೊಂಡ ರಿಷಬ್ ಶೆಟ್ಟಿ, ಅದರ ಪ್ರೀಕ್ವೆಲ್ ಆಗಿರುವ ‘ಕಾಂತಾರ: ಚಾಪ್ಟರ್ 1’ ಅನ್ನು ಭಾರೀ ನಿರೀಕ್ಷೆಗಳ ನಡುವೆ ತಂದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ದಾಖಲೆ ಗಳಿಕೆ ನಂತರ ಒಟಿಟಿಯಲ್ಲೂ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ನಟಿಸಿದ್ದಾರೆ.