×
Ad

ಒಂದೇ ವರ್ಷದಲ್ಲಿ ಎರಡು ವಿಲನ್ ಪಾತ್ರಗಳಿಂದ 2000 ಕೋಟಿ ರೂ. ಮೀರಿ ಕಲೆಕ್ಷನ್ ಮಾಡಿದ ದಾಖಲೆ ಬರೆದ ಅಕ್ಷಯ್ ಖನ್ನಾ!

Update: 2026-01-05 18:38 IST

ಅಕ್ಷಯ್ ಖನ್ನಾ | Photo Credit : bollywoodhungama.com

ಒಂದೇ ವರ್ಷದಲ್ಲಿ ನಟಿಸಿದ ಸಿನಿಮಾಗಳಿಂದ 2 ಸಾವಿರ ಕೋಟಿ ರೂಪಾಯಿ ಮೀರಿದ ಕಲೆಕ್ಷನ್ ಮಾಡಿದ ಎರಡನೇ ನಟ ಎಂಬ ಖ್ಯಾತಿ ಅಕ್ಷಯ್ ಖನ್ನಾಗೆ ದೊರೆತಿದೆ. ಇದಕ್ಕೆ ಮೊದಲು ಈ ದಾಖಲೆ ಮಾಡಿದ ನಟನೆಂಬ ಹಿರಿಮೆ ಶಾರುಖ್ ಖಾನ್ ಅವರಿಗೆ ಮಾತ್ರ ಇತ್ತು.

ನಟ ಅಕ್ಷಯ್ ಖನ್ನಾರಿಗೆ 2025 ಬಹಳ ವಿಶೇಷ ವರ್ಷ!‘ಧುರಂಧರ್’ ಮತ್ತು ‘ಛಾವ’ ಸಿನಿಮಾಗಳ ವಿಲನ್ ಪಾತ್ರಗಳು ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ತಂದುಕೊಟ್ಟಿದೆ. ಈ ಸಿನಿಮಾಗಳಿಗೆ ಒಟ್ಟು ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ಮೀರಿದೆ. ಮುಖ್ಯವಾಗಿ ಹೀರೋಗಿಂತ ವಿಲನ್ ಪಾತ್ರವೇ ವಿಜೃಂಭಿಸಿದ ಸಿನಿಮಾಗಳು ಇವು. ಅಕ್ಷಯ್ ಖನ್ನಾ ಪಾತ್ರ ಜನಮನದಲ್ಲಿ ಉಳಿದಿದೆ ಮತ್ತು ಅನೇಕ ಮೀಮ್ಗಳಾಗಿ ಪರಿವರ್ತನೆಗೊಂಡಿದ್ದವು. ಹೀಗಾಗಿ ಒಂದೇ ವರ್ಷದಲ್ಲಿ ನಟಿಸಿದ ಸಿನಿಮಾಗಳಿಂದ 2 ಸಾವಿರ ಕೋಟಿ ರೂಪಾಯಿ ಮೀರಿದ ಕಲೆಕ್ಷನ್ ಮಾಡಿದ ಎರಡನೇ ನಟ ಎನ್ನುವ ಖ್ಯಾತಿ ಅವರಿಗೆ ದೊರೆತಿದೆ. ಈ ಮೊದಲು ಒಂದೇ ವರ್ಷದಲ್ಲಿ 2 ಸಾವಿರ ಕೋಟಿ ರೂಪಾಯಿ ಮೀರಿದ ಕಲೆಕ್ಷನ್ ಮಾಡಿದ ನಟನೆಂಬ ಹಿರಿಮೆ ಶಾರುಖ್ ಖಾನ್ ಅವರಿಗೆ ಮಾತ್ರ ಇತ್ತು.

ನಟ ಅಕ್ಷಯ್ ಖನ್ನಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಾಯಕ, ಪೋಷಕ ಪಾತ್ರ ಹಾಗೂ ಖಳನಾಯಕನಾಗಿ ಜನಮನ ಗೆದ್ದಿದ್ದಾರೆ. ಆದರೆ 2025ರಲ್ಲಿ ಅವರು ನಟಿಸಿದ ಎರಡು ಸಿನಿಮಾಗಳು ಸೂಪರ್ ಹಿಟ್ ಆದವು. ‘ಛಾವ’ ಮತ್ತು ‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಖಳನಾಯಕನ ಪಾತ್ರ ಮಾಡಿದ್ದಾರೆ. ಈ ಸಿನಿಮಾಗಳಿಂದ ಆಗಿರುವ ಒಟ್ಟು ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ಮೀರಿದೆ.

‘ಛಾವ’ ಸಿನಿಮಾ 2025ರ ಫೆಬ್ರವರಿ 14ರಂದು ಬಿಡುಗಡೆ ಆಯಿತು. ಆ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಾಯಕ. ಐತಿಹಾಸಿಕ ಕಥಾಹಂದರ ಹೊಂದಿದ್ದ ಆ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಔರಂಗಜೇಬ್ ಪಾತ್ರದಲ್ಲಿ ನಟಿಸಿದ್ದರು. ಅವರ ನಟನೆಗೆ ಅಭೂತಪೂರ್ವ ಮೆಚ್ಚುಗೆ ದೊರೆತಿದೆ. ಮಾತ್ರವಲ್ಲದೆ, ಚಿತ್ರದ ಗೆಲುವಿನಲ್ಲಿ ಅಕ್ಷಯ್ ಖನ್ನಾ ಅವರ ಕೊಡುಗೆ ಕೂಡ ದೊಡ್ಡದಿದೆ. ಆ ಸಿನಿಮಾ ವಿಶ್ವಾದ್ಯಂತ 809 ಕೋಟಿ ರೂ. ಕಲೆಕ್ಷನ್ ಮಾಡಿದೆ.

‘ಧುರಂಧರ್’ ಸಿನಿಮಾ 2025ರ ಡಿಸೆಂಬರ್ 5ರಂದು ಬಿಡುಗಡೆಯಾಗಿದೆ. ರಣವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಖಳನಾಯಕನ ಪಾತ್ರ ಮಾಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ಪಾತ್ರದಲ್ಲಿ ಅವರು ಅತ್ಯುತ್ತಮ ನಟನೆ ಪ್ರದರ್ಶಿಸಿದ್ದಾರೆ. ‘ಧುರಂಧರ್’ ನೋಡಿದ ಎಲ್ಲರೂ ಅಕ್ಷಯ್ ಖನ್ನಾ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈ ಸಿನಿಮಾ ಈಗಾಗಲೇ 1167 ಕೋಟಿ ರೂ. ಮೀರಿ ಕಲೆಕ್ಷನ್ ಮಾಡಿದೆ. ಕೆಲವೇ ದಿನಗಳಲ್ಲಿ ‘ಧುರಂಧರ್’ ಸಿನಿಮಾದ ಒಟ್ಟು ಕಲೆಕ್ಷನ್ 1200 ಕೋಟಿ ರೂ. ಆಗಲಿದೆ. ‘ಛಾವ’ ಚಿತ್ರದ ಗಳಿಕೆಯನ್ನೂ ಸೇರಿಸಿದರೆ ಅಕ್ಷಯ್ ಖನ್ನಾ ನಟಿಸಿದ ಈ ಸಿನಿಮಾಗಳ ಒಟ್ಟು ಕಲೆಕ್ಷನ್ 2000 ಕೋಟಿ ರೂ. ಮೀರುತ್ತದೆ. ಆ ಮೂಲಕ ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಅಭಿನಯದ ಸಿನಿಮಾಗಳಿಂದ 2 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆದಂತೆ ಆಗಿದೆ.

ಈ ರೀತಿ ಸಾಧನೆ ಮಾಡಿದ ಮತ್ತೋರ್ವ ನಟ ಎಂದರೆ ಅದು ಶಾರುಖ್ ಖಾನ್. ಅವರು ನಟಿಸಿದ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು 2023ರಲ್ಲಿ ಬಿಡುಗಡೆಯಾಗಿದ್ದವು. ಈ ಮೂರು ಸಿನಿಮಾಗಳಿಂದ 2,685 ಕೋಟಿ ರೂ. ಕಲೆಕ್ಷನ್ ಆಗಿತ್ತು. ಹಾಗಾಗಿ ಅವರು ಪ್ರಥಮ ಸ್ಥಾನದಲ್ಲಿ ಇದ್ದಾರೆ. ಈಗ ಅಕ್ಷಯ್ ಖನ್ನಾ ಅವರಿಗೆ ‘ಧುರಂಧರ್’ ಮತ್ತು ‘ಛಾವ’ ಸಿನಿಮಾಗಳಿಂದ 2ನೇ ಸ್ಥಾನ ದೊರೆತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News