ನಟ ವಿಜಯ್ ಗೆ ರಿಲೀಫ್; ‘ಜನನಾಯಗನ್’ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ
Photo Credit: YouTube/KVN Productions
ಚೆನ್ನೈ: ನಟ ಹಾಗೂ ತಮಿಳ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ನಟಿಸಿರುವ ಕೊನೆಯ ಚಿತ್ರ ‘ಜನನಾಯಗನ್’ ಪ್ರಮಾಣ ಪತ್ರದ ಕುರಿತು ಎದ್ದಿದ್ದ ವಿವಾದ ಸುಖಾಂತ್ಯಗೊಂಡಿದ್ದು, ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ವಿತರಿಸುವಂತೆ ಸೆನ್ಸಾರ್ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಪೂರ್ಣಕಾಲಿಕ ರಾಜಕೀಯಕ್ಕೆ ಪ್ರವೇಶಿಸಿರುವ ವಿಜಯ್ ಅವರ ಕೊನೆಯ ಚಿತ್ರ ಇದಾಗಿದೆ.
‘ಜನನಾಯಗನ್’ ಚಿತ್ರಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿದ ನಂತರ, ಪ್ರಮಾಣ ಪತ್ರವನ್ನು ವಿತರಿಸುವಂತೆ ಸೆನ್ಸಾರ್ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಇಂದು ಬಿಡುಗಡೆ (ಜ. 9) ಆಗಬೇಕಿದ್ದ ‘ಜನನಾಯಗನ್’ ಚಲನಚಿತ್ರ, ಪ್ರಮಾಣ ಪತ್ರ ಕುರಿತು ಎದ್ದ ವಿವಾದದಿಂದಾಗಿ ಮುಂದೂಡಿಕೆಯಾಗಿದೆ.
“ಇಂತಹ ದೂರುಗಳಿಗೆ ಮನ್ನಣೆ ನೀಡುವುದು ಅಪಾಯಕಾರಿ ಪ್ರವೃತ್ತಿ” ಎಂದು ಸೆನ್ಸಾರ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಸಿನಿಮಾವನ್ನು ಸಿಬಿಎಫ್ಸಿ ಪರಿಶೀಲನಾ ಸಮಿತಿಗೆ ವಹಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯ ಪಟ್ಟಿತು.
ಚಿತ್ರವನ್ನು ಸೆನ್ಸಾರ್ ಗಾಗಿ ಒಂದು ತಿಂಗಳ ಹಿಂದೆಯೇ ಸಲ್ಲಿಸಿದ್ದರೂ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯುವಲ್ಲಿ ‘ಜನನಾಯಗನ್’ ಚಿತ್ರ ವಿಫಲಗೊಂಡಿತ್ತು. ಇದನ್ನು ಪ್ರಶ್ನಿಸಿ ಕೆವಿಎನ್ ಪ್ರೊಡಕ್ಷನ್ಸ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ಡಿಸೆಂಬರ್ 19ರಂದು ಹಲವು ಕಟ್ ಗಳು ಹಾಗೂ ಮ್ಯೂಟ್ ಸಂಭಾಷಣೆಗಳನ್ನು ಸಿಬಿಎಫ್ಸಿ ಸೂಚಿಸಿತ್ತು. ಚಿತ್ರದಲ್ಲಿ ಅತಿಯಾದ ಹಿಂಸಾಚಾರದ ದೃಶ್ಯಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದ ಸಿಬಿಎಫ್ಸಿ ಸದಸ್ಯರು, ಸಾರ್ವಜನಿಕರ ವೀಕ್ಷಣೆಗೆ ಇದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಹೀಗಾಗಿ, ಚಿತ್ರದಲ್ಲಿ ಹಲವಾರು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸಿಬಿಎಫ್ಸಿ ಸೂಚಿಸಿತ್ತು. ಈ ಸೂಚನೆಗಳನ್ನು ಚಿತ್ರದ ನಿರ್ಮಾಪಕರು ಪಾಲಿಸಿದ್ದಾರೆ ಎಂದು ವರದಿಯಾಗಿದೆ.