ಬದುಕು ಕಲಿಸಿದ ಅನುಭವಗಳೇ ‘ಘಮ’ ಕಥೆಗೆ ಸ್ಫೂರ್ತಿ: ವಿದ್ಯಾಲಕ್ಷ್ಮಿ
ಬರೆಯುವುದಕ್ಕೂ ಚಿತ್ರೀಕರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ ಎನ್ನುತ್ತಾರೆ ಧಾರಾವಾಹಿ ಬರಹಗಾರ್ತಿ ವಿದ್ಯಾಲಕ್ಷ್ಮಿ ಪ್ರಹ್ಲಾದ್.
ಮೂಲತಃ ಬಂಟ್ವಾಳದವರಾದ ವಿದ್ಯಾಲಕ್ಷ್ಮಿ ಪ್ರಹ್ಲಾದ್ ವಿವಾಹದ ಬಳಿಕ ಬೆಂಗಳೂರಿಗೆ ಬಂದವರು. ಹಲವು ಧಾರಾವಾಹಿಗಳಿಗೆ ಕಥೆ ಬರೆದಿರುವ ಇವರು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರಿಯತೆ ಪಡೆದ ‘ಶಾಂತಂ ಪಾಪಂ’ ಧಾರಾವಾಹಿಯ ಚಿತ್ರಕತೆ-ಸಂಭಾಷಣೆಯ ಮೂಲಕ ಹೆಸರಾದವರು. ಪ್ರಸ್ತುತ ‘ಪವಿತ್ರ ಬಂಧನ’ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ‘ಘಮ’ ಕಿರುಚಿತ್ರ ಈಗ ಸದ್ದು ಮಾಡುತ್ತಿದೆ. ಈ ಚಿತ್ರದ ಕುರಿತು ವಿದ್ಯಾಲಕ್ಷ್ಮಿ ಅವರು ನಮ್ಮೊಂದಿಗೆ ಮಾತನಾಡಿದ್ದಾರೆ.
‘ಘಮ’ ಕಥೆಯ ವಿಷಯ ನಿಮಗೆ ಹೊಳೆದದ್ದು ಹೇಗೆ?
* ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನನ್ನ ಮಾವನ ಸ್ನೇಹಿತರೊಬ್ಬರು ಒಂದು ಸಾಬೂನು ಕೊಟ್ಟಿದ್ದರು. ಅದರ ಪರಿಮಳ ನನ್ನನ್ನು ತುಂಬಾ ಸೆಳೆದಿತ್ತು. ಆ ಸಾಬೂನಿನ ಬಾಕ್ಸ್ ತೆರೆದು ಯಾವಾಗಲೂ ಪರಿಮಳ ತಗೋತ್ತಿದ್ದೆ. ಒದ್ದೆ ಮಾಡಿದರೆ ಕರಗಿ ಹೋಗುತ್ತದೆ ಎಂಬ ಭಯಕ್ಕೆ ಅದನ್ನು ಯೂಸ್ ಮಾಡ್ತಾ ಇರಲಿಲ್ಲ. ಆದರೆ ಒಮ್ಮೆ ರಜೆಗೆ ಹೋಗಿ ಮರಳಿದಾಗ ಆ ಸಾಬೂನು ಕಾಣೆಯಾಗಿತ್ತು. ಅಷ್ಟು ಆಸೆಯಿಂದ ಜೋಪಾನ ಮಾಡಿದ್ದ ವಸ್ತು ಇಲ್ಲ ಎನ್ನುವುದು ನನಗೆ ತುಂಬಾ ನೋವು ಕೊಟ್ಟಿತ್ತು. ಅದನ್ನೇ ಕಥಾವಸ್ತುವಾಗಿಟ್ಟುಕೊಂಡು, ಪ್ರತೀ ಹೆಣ್ಣುಮಗಳಲ್ಲೂ ಇರುವ ಸೌಂದರ್ಯ ಪ್ರಜ್ಞೆ ಮತ್ತು ಆಸೆಗಳು ಈಡೇರುವ ಹೊತ್ತಿಗೆ ಅವುಗಳನ್ನು ಅನುಭವಿಸುವ ಕಾಲವೇ ಮೀರಿರುತ್ತದೆ ಎನ್ನುವುದನ್ನು ಸೇರಿಸಿ ಈ ಕಥೆ ಬರೆದೆ.
ಕಥೆಗಾರ್ತಿಯಾಗಲು ನಿಮಗೆ ಸ್ಫೂರ್ತಿ ಏನು?
‘ಘಮ‘ ತಯಾರಾಗಿದ್ದು ಹೇಗೆ?
* ಬದುಕು ಕಲಿಸಿದ ಅನುಭವಗಳೇ ಕಥೆ ಬರೆಯಲು ಸ್ಫೂರ್ತಿ ಎನ್ನಬಹುದು. ನಾನು ಎಸೆಸೆಲ್ಸಿಯಲ್ಲಿದ್ದಾಗಲೇ ಕಥೆ, ಕವನ ಬರೆಯಲು ಶುರುಮಾಡಿದ್ದೆ. ಕಾಲೇಜು ದಿನಗಳಲ್ಲಿ ಸಾಹಿತ್ಯ ಗುರು ಶ್ರೀನಿವಾಸ ಜೋಕಟ್ಟೆಯವರ ಮಾರ್ಗದರ್ಶನದಲ್ಲಿ ನನ್ನ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ನನ್ನನ್ನು ಕಿರುತೆರೆ ಕ್ಷೇತ್ರಕ್ಕೆ ಕರೆತಂದು ಗಾಡ್ಫಾದರ್ ಆದವರು ಡಾವೆಂಕಿ. ಈ ಕಥೆ ಕಿರುಚಿತ್ರಕ್ಕೆ ಚೆನ್ನಾಗಿರುತ್ತದೆ ಎಂದು ಮೊದಲು ಹೇಳಿದ್ದೂ ಅವರೇ. ಆನಂತರ ನಿರ್ಮಾಪಕ ಆದರ್ಶ್ ಅಯ್ಯಂಗಾರ್ಗೆ ಈ ಕಥೆಯನ್ನು ಅಪ್ರೋಚ್ ಮಾಡಿದೆ. ಅವರು ಬಹಳ ಇಷ್ಟಪಟ್ಟು, ನಿರ್ದೇಶನದ ಅವಕಾಶವನ್ನೂ ಕಲ್ಪಿಸಿಕೊಟ್ಟರು. ಕಿರುಚಿತ್ರ ಮಾಡುವುದೆಂದು ನಿರ್ಧಾರವಾದ ಮೇಲೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದೆ.
ನಿರ್ದೇಶನದ ಅನುಭವ ಇತ್ತೇ?
* ನಾನು ಸುಮಾರು ಹತ್ತು ವರ್ಷಗಳಿಂದ ಧಾರಾವಾಹಿ ಕ್ಷೇತ್ರದಲ್ಲಿ ಬರವಣಿಗೆಯಲ್ಲಿದ್ದೇನೆ. ಆದರೆ ನಿರ್ದೇಶನ ಇದೇ ಮೊದಲು. ನನಗೆ ನಿರ್ದೇಶನ ಕಲಿಸಿದವರು ರಕ್ಷಿತ್ ತೀರ್ಥಹಳ್ಳಿ. ಅವರ ಮಾರ್ಗದರ್ಶನದಲ್ಲೇ ಈ ಚಿತ್ರ ಮಾಡಿದ್ದೇನೆ.
ಚೊಚ್ಚಲ ನಿರ್ದೇಶನದ ಅನುಭವ ಹೇಗಿತ್ತು?
* ತುಂಬಾ ಚೆನ್ನಾಗಿತ್ತು. ಚಿತ್ರೀಕರಣ ಮುಗಿದ ಮೇಲೆ ಖುಷಿಯಿಂದ ಅತ್ತಿದ್ದೆ. ಹಾಗೆಯೇ ಇದುವರೆಗೆ ನಾನು ಕಲ್ಪನೆಯಲ್ಲಿ ಬರೆದ ಕೆಲವು ದೃಶ್ಯಗಳನ್ನು ನಿರ್ದೇಶಕರು ಯಾಕೆ ಬದಲಾಯಿಸುತ್ತಾರೆ ಎಂಬ ಗೊಂದಲ ನನಗಿತ್ತು. ನಾನೇ ನಿರ್ದೇಶಿಸಿದಾಗ ಅದರ ನಿಜವಾದ ಕಷ್ಟ ಅರಿವಾಯಿತು. ಬರೆಯುವುದಕ್ಕೂ ಚಿತ್ರೀಕರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಬರಹಗಾರನ ಕಲ್ಪನೆಗಳನ್ನು ತೆರೆಯ ಮೇಲೆ ಮೂಡಿಸುವುದು ನಿಜಕ್ಕೂ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಬರೆದ ದೃಶ್ಯಗಳಿಗೆ ಪೂರಕವಾದ ಲೊಕೇಶನ್ ಸಿಗುವುದು ಕೂಡ ಅಷ್ಟು ಸುಲಭವಲ್ಲ.
‘ಘಮ’ದ ಚಿತ್ರೀಕರಣ ನಡೆದದ್ದು ಎಲ್ಲಿ?
* ಇದು ಮಂಗಳೂರಿನ ಕಥೆ, ಕಂಬದ ಮನೆ ಬೇಕಿತ್ತು. ಚಿತ್ರೀಕರಣ ನಡೆದದ್ದು ತೀರ್ಥಹಳ್ಳಿಯ ದೇವಂಗಿಯಲ್ಲಿ. ಮನೆ, ತೋಟ, ಹೋಟೆಲ್, ತಂಡ ತಂಗಿದ್ದ ಜಾಗ ಎಲ್ಲವೂ ಒಂದೇ ಕಡೆ ಸಿಗುವಂತೆ ಮೂಲತಃ ತೀರ್ಥಹಳ್ಳಿಯವರಾಗಿದ್ದರಿಂದ ರಕ್ಷಿತ್ ಅವರೇ ಎಲ್ಲಾ ನೋಡಿಕೊಂಡರು. ಅಲ್ಲಿ ನಾಲ್ಕು ದಿನ ಚಿತ್ರೀಕರಣ ಮಾಡಿದೆವು. ತೀರ್ಥಹಳ್ಳಿಯ ಪ್ರಕೃತಿಯ ಸೊಬಗನ್ನು ಅದ್ಭುತವಾಗಿ ಛಾಯಾಗ್ರಹಣದ ಮೂಲಕ ಕಟ್ಟಿಕೊಟ್ಟವರು ಶಾಂತಿಸಾಗರ್.
ಕಲಾವಿದರಿಂದ ಅಭಿನಯ ತೆಗೆಸುವುದು ಕಷ್ಟವಾಗಿತ್ತೇ?
* ಹಾಗೇನಿಲ್ಲ. ಮೊದಲು ಬೆಂಗಳೂರಿನಲ್ಲೇ ವರ್ಕ್ಶಾಪ್ ನಡೆಸಿದ್ದೆವು. ಬಾಲನಟಿಯ ಬಗ್ಗೆ ಸ್ವಲ್ಪ ಆತಂಕವಿತ್ತು. ಏಕೆಂದರೆ ಆ ಮಗು ಉತ್ತರ ಕರ್ನಾಟಕದ್ದು, ಅವಳ ಮಾತಿನ ಶೈಲಿಯೇ ಬೇರೆ. ಆದರೆ ಆ ಮಗು ಮಂಗಳೂರು ಕನ್ನಡದ ಸಂಭಾಷಣೆಯನ್ನು ಅತ್ಯಂತ ಸಹಜವಾಗಿ ಹೇಳಿದ್ದು ಅದ್ಭುತವಾಗಿತ್ತು. ಘಮದ ಮುಖ್ಯ ಪಾತ್ರ ನೀಲಾ ಆಗಿ ಮಾಡಿದ ಆ ಮಗುವಿನ ಹೆಸರು ವಜ್ರ ಭಾರ್ಗವಿ. ಈಗಾಗಲೇ ಧಾರಾವಾಹಿಗಳಲ್ಲಿ ನಟಿಸಿದ ಅನುಭವವೂ ಅವಳಿಗಿತ್ತು. ಪೃಥ್ವಿ ಪಾತ್ರವನ್ನು ನಿರ್ಮಾಪಕ ಆದರ್ಶ್ ಅಯ್ಯಂಗಾರ್ ಅವರೇ ಮಾಡಿದ್ದಾರೆ. ಇವರಿಗೂ ಹಲವು ಆಲ್ಬಂ ಸಾಂಗ್ಗಳಲ್ಲಿ ನಟಿಸಿದ ಅನುಭವ ಇತ್ತು. ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿರುವ ಅರ್ಪಿತ ಮೋಹಿತೆ ಇಲ್ಲಿ ದೇವಿಕಾ ಪಾತ್ರ ಮಾಡಿದ್ದಾರೆ. ಬೇಬಿ ಪಾತ್ರ ಮಾಡಿದ ಪ್ರಜ್ಞಾ ಶೆಟ್ಟಿ ಕೂಡ ಈಗಾಗಲೇ ಗುರುತಿಸಿಕೊಂಡ ಕಲಾವಿದೆ. ಅಜ್ಜಿ ಪಾತ್ರ ಮಾಡಿರುವ ರಂಗಭೂಮಿ ಕಲಾವಿದೆ ಫಾತಿಮಾ ರಾಡ್ರಿಗಸ್ ಸೇರಿದಂತೆ ಐದೂ ಜನ ಕಲಾವಿದರೂ ತುಂಬಾ ಸಹಜವಾಗಿಯೇ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹೇಮಂತ್ ಜೋಯಿಸ್ ಅವರ ಸಂಗೀತ, ಸುಧೀರ್ ಅವರ ಸಂಕಲನ ಇದಕ್ಕೆ ಮತ್ತಷ್ಟು ಜೀವ ತುಂಬಿದೆ.
ಬಿಡುಗಡೆಯ ನಂತರ ಪ್ರತಿಕ್ರಿಯೆ ಹೇಗಿತ್ತು?
* ಈ ಮಟ್ಟದ ಪ್ರತಿಕ್ರಿಯೆ ಬರುತ್ತದೆ ಎಂದು ಖಂಡಿತಾ ಊಹಿಸಿರಲಿಲ್ಲ. ಕೆಲವರು ಕ್ಲೈಮ್ಯಾಕ್ಸ್ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ. ಖಂಡಿತಾ ಅದು ಅವರವರ ದೃಷ್ಟಿಕೋನಕ್ಕೆ ಬಿಟ್ಟದ್ದು. ನಾನು ಕೊಟ್ಟ ಅಂತ್ಯ ಅದು ಒಂದು ಪಾತ್ರದ ಅಂತ್ಯ ಅಲ್ಲ, ಮನುಷ್ಯನ ಬಯಕೆಗಳ, ಹೋರಾಟಗಳ, ನೋವುಗಳ ದೃಷ್ಟಾಂತ. ಹೀಗೆ ಕಾಡುವಂತಹ ಅಂತ್ಯ ಬೇಕು ಎನ್ನುವುದು ನನ್ನದೇ ನಿರ್ಧಾರವಾಗಿತ್ತು. ಅದು ಎಷ್ಟು ದಿನ ಕಾಡುತ್ತದೆ ಎಂದು ಗೊತ್ತಿಲ್ಲ; ಪ್ರೇಕ್ಷಕರು ಕಥೆಯನ್ನು ಹೇಗೆ ಸ್ವೀಕರಿಸಿದ್ದಾರೆ ಎನ್ನುವುದರ ಮೇಲೆ ಅದು ಅವಲಂಬಿತ. ಭಾವನಾತ್ಮಕವಾಗಿ ಸ್ಪರ್ಶಿಸಬೇಕು ಎನ್ನುವ ಉದ್ದೇಶ ನನ್ನದಾಗಿತ್ತು. ಅದು ಈಡೇರಿದೆ ಎನ್ನುವ ಸಂತೃಪ್ತಿ ಖಂಡಿತ ಇದೆ. ಹಾಗೇ ಕೋಲ್ಕತಾ ಇಂಟರ್ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ಗೆ ಆಯ್ಕೆ ಆಗಿರೋದು ತುಂಬಾ ಖುಷಿಯ ವಿಚಾರ.
ಮುಂದೆ ಕಿರುಚಿತ್ರ ಅಥವಾ ಸಿನಿಮಾದ ಯೋಚನೆ ಇದೆಯೇ?
* ಕೆಲವು ಕಿರುಚಿತ್ರಗಳ ಜೊತೆಗೆ ಒಂದೆರಡು ಸಿನೆಮಾ ಕಥೆ ಮತ್ತು ಚಿತ್ರಕಥೆ ಸಿದ್ಧವಾಗಿದೆ. ಸಂಭಾಷಣೆ ಮಾತ್ರ ಇನ್ನೂ ಆಗಿಲ್ಲ. ಸ್ಟಾರ್ ನಟರ ಚಿತ್ರ ಮಾಡುವ ಆಸೆ ಇದ್ದೇ ಇದೆ. ಹೊಸಬರಾದರೂ ಸರಿ. ಮುಖ್ಯವಾಗಿ ನಿರ್ಮಾಪಕರು ಸಿಗಬೇಕು.
(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)