ಸಂಭಾವನೆ ಪಾವತಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ‘ಪರಾಶಕ್ತಿ’ ಸಿನಿಮಾ ನಿರ್ದೇಶಕಿ
Photo Credit : indiatoday.in
‘ಪರಾಶಕ್ತಿ’ ನಿರ್ದೇಶಕಿ ಸುಧಾ ಕೊಂಗರ ತಮ್ಮ 8.39 ಕೋಟಿ ರೂ.ಗಳಿಗೂ ಮೀರಿದ ಸಂಭಾವನೆ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮಿಳು ಸಿನಿಮಾ ‘ಪರಾಶಕ್ತಿ’ ನಿರ್ದೇಶಕಿ ಸುಧಾ ಕೊಂಗರ ತಮ್ಮ 8.39 ಕೋಟಿ ರೂ.ಗಳಿಗೂ ಮೀರಿದ ಸಂಭಾವನೆ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆರ್ಬಿಟ್ರೇಶನ್ ಮತ್ತು ಕಾನ್ಸಿಲಿಯೇಶನ್ (ಮಧ್ಯಸ್ತಿಕೆ ಮತ್ತು ಸಂಧಾನ) ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಅವರು ಮೊಕದ್ದಮೆ ಹೂಡಿದ್ದಾರೆ.
ಮಾತ್ರವಲ್ಲದೆ ‘ಪರಾಶಕ್ತಿ’ ಸಿನಿಮಾದ ನಿರ್ಮಾಣ ಸಂಸ್ಥೆ ಡಾನ್ ಪಿಕ್ಚರ್ಸ್ ನಿರ್ಮಿಸಿರುವ ‘ಇದಯಂ ಮುರಳಿ’ ಸಿನಿಮಾದ ಬಿಡುಗಡೆ ತಡೆಹಿಡಿಯುವಂತೆಯೇ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೆ ‘ಪರಾಶಕ್ತಿ’ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುವುದನ್ನೂ ತಡೆಯುವಂತೆ ಅವರು ಕೋರಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕುಮಾರೇಶ್ ಬಾಬು ಅವರು ಜುಲೈ 8ರೊಳಗೆ ಪ್ರತಿಕ್ರಿಯಿಸುವಂತೆ ನಿರ್ಮಾಣ ಸಂಸ್ಥೆಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ, ‘ಪರಾಶಕ್ತಿ’ ಚಿತ್ರವನ್ನು ಟಿವಿಯಲ್ಲಿ ಬಿಡುಗಡೆ ಮಾಡದಂತೆ ಡಾನ್ ಪಿಕ್ಚರ್ಸ್ಗೆ ನಿರ್ದೇಶನ ನೀಡಿದ್ದಾರೆ.
►25 ಎಡಿಟ್ ಗಳ ನಂತರ ಬಿಡುಗಡೆಯಾದ ಪರಾಶಕ್ತಿ
ಸೆನ್ಸಾರ್ ಮಂಡಳಿಯು ಶಿವಕಾರ್ತಿಕೇಯನ್ ಅಭಿನಯದ ‘ಪರಾಶಕ್ತಿ’ ಚಿತ್ರವನ್ನು ಜನವರಿ 10ರಂದು ಬಿಡುಗಡೆ ಮಾಡಲು ಅನುಮತಿ ನೀಡಿತ್ತು. ಈ ತಮಿಳು ಸಿನಿಮಾ ಯುಎ ಸೆನ್ಸಾರ್ ಪ್ರಮಾಣಪತ್ರದೊಂದಿಗೆ ಬಿಡುಗಡೆಯಾಗಿತ್ತು. ‘ಪರಾಶಕ್ತಿ’ 25 ಮಾರ್ಪಾಡುಗಳ ನಂತರ ಬಿಡುಗಡೆಯಾಗಿದೆ. ಅವುಗಳಲ್ಲಿ ದೃಶ್ಯಗಳಿಗೆ ಕತ್ತರಿ ಹಾಕುವುದು, ಬದಲಿಸುವುದು ಮತ್ತು ಮ್ಯೂಟ್ ಮಾಡುವುದು ಸೇರಿದ್ದವು.
‘ಪರಾಶಕ್ತಿ’ ಚಿತ್ರದ ನಿರ್ಮಾಪಕರಿಗೆ ಅಶ್ಲೀಲ ಪದಗಳಿರುವ ಏಳು ವಾಕ್ಯಗಳನ್ನು ಮ್ಯೂಟ್ ಮಾಡಲು ಸೆನ್ಸಾರ್ ಮಂಡಳಿ ಆದೇಶಿಸಿತ್ತು. ಅವುಗಳಲ್ಲಿ ಮುಖ್ಯವಾಗಿ, “ಬೆಂಕಿ ಹರಡಲಿ”, “ನ್ಯಾಯ ಮೇಲುಗೈ ಸಾಧಿಸಲಿ”, “ಹಿಂದಿ ನನ್ನ ಕನಸುಗಳನ್ನು ನಾಶ ಮಾಡಿದೆ”, “ಹಿಂದಿ ಹೇರಿಕೆ ನನ್ನ ಏಕೈಕ ಕನಸನ್ನು ಸುಟ್ಟು ಹಾಕಿದೆ”, “ಹಿಂದಿ ಕಲಿಯುವುದು” ಮೊದಲಾದ ವಾಕ್ಯಗಳು ಸೇರಿದ್ದವು.
ಹಿಂದಿ ರಾಕ್ಷಸ ಎಂಬ ಹೆಸರಿನ ಪ್ರತಿಕೃತಿ ಸುಡುವ ದೃಶ್ಯಗಳನ್ನು ತೆಗೆದುಹಾಕಲು ನಿರ್ದೇಶಿಸಲಾಗಿದೆ. ಹಿಂದಿ ರಾಕ್ಷಸ ಪದವನ್ನು ರಾಕ್ಷಸ ಎಂದು ಬದಲಿಸಲಾಗಿತ್ತು. ಸಿನಿಮಾದಲ್ಲಿ ದಹನದ ದೃಶ್ಯಗಳನ್ನು ಶೇ 50ರಷ್ಟು ಕಡಿಮೆ ಮಾಡುವಂತೆ ಸೂಚಿಸಲಾಗಿದೆ. ಹಳ್ಳಿಯ ಹತ್ಯಾಕಾಂಡದ ದೃಶ್ಯಗಳು ಮತ್ತು ವಿಶೇಷವಾಗಿ ಯುವ ತಾಯಿಯನ್ನು ಕೊಂಡು ಮೃತ ದೇಹಗಳನ್ನು ತೋರಿಸುವ ದೃಶ್ಯಗಳನ್ನು ಅಳಿಸಲು ಸೂಚಿಸಲಾಗಿದೆ.
ಆಂಟಿ ನ್ಯಾಷನಲ್ ಸ್ಕಮ್ ಎಂಬ ಪದಗುಚ್ಛ ಮ್ಯೂಟ್ ಮಾಡಲಾಗಿದೆ. ಹಿಂದಿ ಭಾಷೆ ಬಗ್ಗೆ ಒತ್ತಿ ಹೇಳುವ ಉಪಶೀರ್ಷಿಕೆಗಳನ್ನು ತೆಗೆದು ಹಾಕಲಾಗಿದೆ. ಅಂಚೆ ಕಚೇರಿಯ ನಾಮಫಲಕಕ್ಕೆ ಹಸುವಿನ ಸೆಗಣಿ ಹಚ್ಚುವುದು ಮತ್ತು ತಾಯಿ-ಮಗುವಿನ ಗುಂಡೇಟು ದೃಶ್ಯಗಳನ್ನು ಅಳಿಸಲಾಗಿದೆ.
ಸಂವೇದನಾಶೀಲ ದೃಶ್ಯಗಳೆಂದು ಸೆನ್ಸಾರ್ ಮಂಡಳಿ ಗುರುತಿಸಿದ ಪೋಸ್ಟಲ್ ಮನಿ ಆರ್ಡರ್, ಯುಪಿಎಸ್ಸಿ ಪರೀಕ್ಷೆಗಳು ಮತ್ತು ರೈಲ್ವೆ ಸಂದರ್ಶನದಲ್ಲಿ ಭಾಷಾ ಪ್ರಾವೀಣ್ಯತೆ ಅಗತ್ಯದಂತಹ ಸನ್ನಿವೇಶಗಳಲ್ಲಿ ಹಕ್ಕು ನಿರಾಕರಣೆ ಸೇರಿಸುವಂತೆ ಸೂಚಿಸಿದೆ.
►ಪರಾಶಕ್ತಿ ಬಗ್ಗೆ
1960ರ ದಶಕದ ಮದ್ರಾಸ್ನಲ್ಲಿ ನಡೆಯುವ ಈ ಸಿನಿಮಾವು ಹಿಂದಿ ವಿರೋಧಿ ಚಳವಳಿಯ ಸಮಯದಲ್ಲಿ ತಮಿಳುನಾಡಿನ ಸಾಮಾಜಿಕ-ರಾಜಕೀಯ ವಾತಾವರಣವನ್ನು ವಿವರಿಸುತ್ತದೆ. ಇದನ್ನು ರಾಜ್ಯದ ಆಡಳಿತ ಪಕ್ಷ ಡಿಎಂಕೆಯ ಸದಸ್ಯ ರೆಡ್ ಜೈಂಟ್ ಮೂವೀಸ್ ವಿತರಿಸಿದೆ. ಶ್ರೀಲೀಲಾ ಮತ್ತು ರವಿ ಮೋಹನ್ ನಟಿಸಿರುವ ಸಿನಿಮಾ ಜನವರಿ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.