ತಮಿಳು-ತೆಲುಗಿಗೆ ಮತ್ತೆ ಬ್ಲಾಕ್ ಬಸ್ಟರ್ ನೀಡಿದ ʼಕರುಪ್ಪುʼ ಮತ್ತು ʼಪೆದ್ದಿʼ
Photo Credit : IMDb
ಆಗಸ್ಟ್ ನಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿರುವ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಮೇಲೆ ಕನ್ನಡ ಚಿತ್ರರಂಗದ ನಿರೀಕ್ಷೆಯಿದೆ.
ದಕ್ಷಿಣದ ಚಿತ್ರರಂಗ ಜನವರಿಯಿಂದ ಕಾಯುತ್ತಿದ್ದ ಯಶಸ್ಸು ಕೊನೆಗೂ ದೊರೆತಿದೆ. ತಮಿಳಿನಲ್ಲಿ ‘ಕರುಪ್ಪು’, ತೆಲುಗಿನಲ್ಲಿ ‘ಪೆದ್ದಿ’ ಪ್ರಸ್ತುತ 2026ರ ಬಹು ನಿರೀಕ್ಷಿತ ಹಾಗೂ ಬ್ಲಾಕ್ ಬಸ್ಟರ್ ಚಲನಚಿತ್ರಗಳಾಗಿವೆ. ಈ ಎರಡೂ ಸಿನಿಮಾಗಳು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 600 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿವೆ. ಮಲಯಾಳಂನಲ್ಲಿ ‘ದೃಶ್ಯಂ 3’ ಸಿನಿಮಾ ಸಿನಿಮಾವು ವಿಶ್ವಾದ್ಯಂತ 238.86 ಕೋಟಿ ರೂ.ಗೂ ಮೀರಿ ಗಳಿಕೆ ಮಾಡಿದೆ.
ಈ ನಡುವೆ ಕನ್ನಡ ಸಿನಿಮಾ ರಂಗ ತನ್ನ ಮೊದಲ ಬಾಕ್ಸ್ ಆಫೀಸ್ ಹಿಟ್ ಗಾಗಿ ಕಾಯುತ್ತಿದೆ. ಕನ್ನಡದಲ್ಲಿ 2026ರಲ್ಲಿ ಬಿಡುಗಡೆಯಾದ ‘ಕೆಡಿ-ದಿ ಡೆವಿಲ್’ ಎನ್ನುವ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾ ರಾಜ್ಯದಲ್ಲಿ 25 ಕೋಟಿ ರೂ. ಒಟ್ಟು ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿದೆ. ಅದನ್ನು ಹೊರತುಪಡಿಸಿದರೆ, ‘ಲವ್ ಮಾಕ್ಟೇಲ್ 3’ ಮತ್ತು ‘ಲ್ಯಾಂಡ್ ಲಾರ್ಡ್’ನಂತಹ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆದಿವೆ.
ಆದರೆ ಆಗಸ್ಟ್ ನಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿರುವ ಯಶ್ ಅಭಿನಯದ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿರುವ ‘ಟಾಕ್ಸಿಕ್’ ಸಿನಿಮಾ ಹಾಗೂ ಸುದೀಪ್ ಅಭಿನಯದ ‘ಬಿಲ್ಲ ರಂಗ ಭಾಷಾ’ ಸಿನಿಮಾಗಳು ವರ್ಷದ ದೊಡ್ಡ ಯಶಸ್ಸು ತಂದು ಕೊಡುವ ನಿರೀಕ್ಷೆಯಿದೆ. ತಮಿಳು ಚಿತ್ರರಂಗ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಬಹುದೆಂದು ಹೇಳಲಾಗಿರುವ ರಜನೀಕಾಂತ್ ನಟನೆಯ ದೊಡ್ಡ ತಾರಾಗಣವಿರುವ ‘ಜೈಲರ್ 2’ಗಾಗಿ ಕಾಯುತ್ತಿದೆ.
ಸದ್ಯದ ಮಟ್ಟಿಗೆ ದಕ್ಷಿಣದಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳೆಂದರೆ ತಮಿಳಿನ ಕರುಪ್ಪು’, ತೆಲುಗಿನ ‘ಪೆದ್ದಿ’ ಮತ್ತು ಮಲಯಾಳಂನ ‘ದೃಶ್ಯಂ 3’ ಮಾತ್ರ. ಜನವರಿಯಲ್ಲೇ ಬಿಡುಗಡೆಯಾಗಬೇಕಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಮತ್ತು ಖ್ಯಾತ ನಟ ವಿಜಯ್ ಅಭಿನಯದ ‘ಜನ ನಾಯಗನ್’ ಮತ್ತು ಕನ್ನಡದ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೆ ಹೋದ ಮೇಲೆ ದಕ್ಷಿಣದ ಚಿತ್ರರಂಗದಲ್ಲಿ ದೊಡ್ಡ ಹಿಟ್ ಸಿಕ್ಕಿರಲಿಲ್ಲ.
ಲೆಕ್ಕಾಚಾರವನ್ನು ಹುಸಿ ಮಾಡಿದ ವಾಸ್ತವ, ನಿರಾಶಾದಾಯಕ ಬಿಡುಗಡೆಗಳು, ಕಡಿಮೆ ಜನಸಂದಣಿ, ಕಳಪೆ ಚಿತ್ರಗಳು, ಆತಂಕಗೊಂಡ ವಿತರಕರು ಮೊದಲಾಗಿ ಒಟ್ಟು ಚಿತ್ರಣ ಮಸುಕಾಗಿತ್ತು. ಪೊಂಗಲ್/ಸಂಕ್ರಾಂತಿ ಬಿಡುಗಡೆಗಳು ಸ್ವಲ್ಪ ಮಟ್ಟಿಗೆ ಯಶಸ್ಸು ತಂದರೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿಲ್ಲ.
ಅಂತಹ ನಿರಾಶೆಯನ್ನು ತೊಡೆದು ಹಾಕಿರುವುದು ಸೂರ್ಯ ನಟನೆಯ ‘ಕರುಪ್ಪು’ ಮತ್ತು ರಾಮ್ ಚರಣ್ ಅವರ ಮೊದಲ ಬಾಕ್ಸ್ ಬಸ್ಟರ್ ‘ಪೆದ್ದಿ.’
ಈ ಎರಡು ಸಿನಿಮಾಗಳು ಉದ್ಯಮದ ದೀರ್ಘಕಾಲೀನ ಸಮಸ್ಯೆಗಳನ್ನು ಪರಿಹರಿಸಿಲ್ಲ. ಆದರೆ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿವೆ. ಈ ಎರಡು ಸಿನಿಮಾಗಳು ಜೊತೆಗೂಡಿ 600 ಕೋಟಿ ರೂ. ಮೀರಿದ ಆದಾಯವನ್ನು ತಂದುಕೊಟ್ಟಿದೆ. ಇವು ದಕ್ಷಿಣದ ಸಿನಿಮಾಗಳು ಇಂದಿಗೂ ಭಾರತಾದ್ಯಂತ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿವೆ ಮತ್ತು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಯಶಸ್ಸು ಸಿಗುತ್ತವೆ ಎನ್ನುವುದನ್ನು ಮತ್ತೊಮ್ಮೆ ಖಾತರಿಪಡಿಸಿವೆ.